ಶಾಸಕ ಹೆಬ್ಬಾರ್, ಸೋಮಶೇಖರ ಉಚ್ಛಾಟಿಸಲು ವರದಿ: ಲಿಂಗರಾಜ ಪಾಟೀಲ

KannadaprabhaNewsNetwork | Published : Mar 15, 2025 1:05 AM

ಸಾರಾಂಶ

ಶಾಸಕರ ಕ್ಷೇತ್ರಗಳಿಗೆ ತೆರಳಿ ಅಲ್ಲಿನ ಮಂಡಳ ಅಧ್ಯಕ್ಷರ ಮತ್ತು ಜಿಲ್ಲಾ ಘಟಕದ ಅಧ್ಯಕ್ಷರ ವರದಿಯಾಧರಿಸಿ ಹೆಬ್ಬಾರ್ ಮತ್ತು ಎಸ್.ಟಿ. ಸೋಮಶೇಖರ್ ಅವರನ್ನು ಉಚ್ಛಾಟಿಸಲು ವರದಿ ನೀಡಲಾಗಿದೆ.

ಹುಬ್ಬಳ್ಳಿ: ಶಾಸಕರಾದ ಶಿವರಾಮ ಹೆಬ್ಬಾರ್ ಹಾಗೂ ಎಸ್.ಟಿ. ಸೋಮಶೇಖ‌ರ್ ಅವರನ್ನು ಪಕ್ಷದಿಂದ ಉಚ್ಛಾಟಿಸುವಂತೆ ಕೇಂದ್ರ ಸಮಿತಿಗೆ ವರದಿ ಸಲ್ಲಿಸಲಾಗಿದೆ. ಪಕ್ಷದ ಹೈಕಮಾಂಡ್‌ ಈ ತಿಂಗಳ ಅಂತ್ಯದೊಳಗೆ ಎಲ್ಲ ಗೊಂದಲಕ್ಕೂ ಅಂತ್ಯ ಹಾಡಲಿದೆ ಎಂದು ಬಿಜೆಪಿ ಶಿಸ್ತು ಸಮಿತಿಯ ರಾಜ್ಯಾಧ್ಯಕ್ಷ ಲಿಂಗರಾಜ ಪಾಟೀಲ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭಾ, ಲೋಕಸಭಾ ಚುನಾವಣೆಗಳಲ್ಲಿ ಶಿವರಾಮ ಹೆಬ್ಬರ್ ಹಾಗೂ ಎಸ್‌.ಟಿ. ಸೋಮಶೇಖರ ಅವರು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ. ಭಿನ್ನಮತೀಯ ಚಟುವಟಿಕೆ ನಡೆಸುತ್ತಿರುವ ಕುರಿತು ವರದಿ ನೀಡುವಂತೆ ಪಕ್ಷದ ಕೇಂದ್ರ ಸಮಿತಿ ಸೂಚನೆ ನೀಡಿತ್ತು ಎಂದರು.

ಈ ಇಬ್ಬರೂ ಶಾಸಕರ ಕ್ಷೇತ್ರಗಳಿಗೆ ತೆರಳಿ ಅಲ್ಲಿನ ಮಂಡಳ ಅಧ್ಯಕ್ಷರ ಮತ್ತು ಜಿಲ್ಲಾ ಘಟಕದ ಅಧ್ಯಕ್ಷರ ವರದಿಯಾಧರಿಸಿ, ಇವರನ್ನು ಪಕ್ಷದಿಂದ ಉಚ್ಛಾಟಿಸುವಂತೆ ಒಂದು ವರ್ಷದ ಹಿಂದೆಯೇ ಕೇಂದ್ರ ಶಿಸ್ತು ಸಮಿತಿ ಅಧ್ಯಕ್ಷರಾದ ಓಂ ಪಾಟೀಲ್ ಅವರಿಗೆ ವರದಿ ನೀಡಿದ್ದೇನೆ. ಅಲ್ಲದೇ ಇಬ್ಬರು ಶಾಸಕರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾದ ವಿಡಿಯೋ ಮತ್ತು ಪೇಪರ್ ಕಟಿಂಗ್‌ಗಳನ್ನ ವರದಿಯ ಜತೆಗೆ ಸಲ್ಲಿಸಲಾಗಿದೆ. ಇಲ್ಲಿ ವರೆಗೂ ಎರಡ್ಮೂರು ಬಾರಿ ಕೇಂದ್ರಕ್ಕೆ ವರದಿ ನೀಡಲಾಗಿದೆ. ಆದರೆ, ಯಾವುದೇ ಸಂಸದರ, ಶಾಸಕರ ವಿರುದ್ಧ ಕ್ರಮಕೈಗೊಳ್ಳಲು ನನಗೆ ಅಧಿಕಾರವಿಲ್ಲ. ವರದಿ ನೀಡುವುದಷ್ಟೇ ನನ್ನ ಕಾರ್ಯವ್ಯಾಪ್ತಿ ಎಂದರು.

ಶಿಸ್ತು ಸಮಿತಿ ಅಧ್ಯಕ್ಷನಾದ ಬಳಿಕ ಸಾಕಷ್ಟು ಪ್ರಕರಣಗಳು ಬಂದಿದ್ದವು. ಬಹುತೇಕ ಪ್ರಕರಣಗಳನ್ನು ಪಕ್ಷದ ವರಿಷ್ಠರ ಎದುರು ಕೂತು ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗಿದೆ. ಕೆಲವಷ್ಟು ಪ್ರಕರಣದ ಕುರಿತು ವರದಿ ನೀಡಿದ್ದೇನೆ. ಪಕ್ಷದ ತತ್ವ ಸಿದ್ಧಾಂತ ಮತ್ತು ನಿಯಮಗಳ ಅಡಿಯಲ್ಲಿ ಶಿಸ್ತುಕ್ರಮದ ವರದಿ ಸಿದ್ಧಪಡಿಸಲಾಗುತ್ತದೆ. ಈ ತಿಂಗಳಾಂತ್ಯಕ್ಕೆ ಇಬ್ಬರು ಶಾಸಕರ ಉಚ್ಛಾಟನೆಯಾಗಲಿದೆ ಎಂದರು.

Share this article