ಮಳೆ ಅನಾಹುತ ತಪ್ಪಿಸಲು ವಿದ್ಯುತ್ ಸಹಕಾರಿ ಸಂಘ ಸಜ್ಜು

KannadaprabhaNewsNetwork |  
Published : May 28, 2024, 01:01 AM IST
ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಮುಖ್ಯ ಕಚೇರಿ. | Kannada Prabha

ಸಾರಾಂಶ

ಸಹಕಾರಿ ತತ್ವದಡಿ ಗ್ರಾಹಕರಿಗೆ ವಿದ್ಯುತ್ ಪೂರೈಸುತ್ತಿರುವ ರಾಜ್ಯದ ಏಕೈಕ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘವು ಈ ವರ್ಷ ಮಳೆಯನ್ನು ಸಮರ್ಥವಾಗಿ ಎದುರಿಸಲು ಮುಂದಾಗಿದೆ. ಇದರೊಂದಿಗೆ ಸಂಭವನೀಯ ಮಳೆ ಅನಾಹುತ ತಪ್ಪಿಸಲು ಸಂಘವು ಸರ್ವ ಸನ್ನದ್ಧಗೊಂಡಿದೆ.

ರವಿ ಕಾಂಬಳೆ

ಕನ್ನಡಪ್ರಭ ವಾರ್ತೆ ಹುಕ್ಕೇರಿ

ಸಹಕಾರಿ ತತ್ವದಡಿ ಗ್ರಾಹಕರಿಗೆ ವಿದ್ಯುತ್ ಪೂರೈಸುತ್ತಿರುವ ರಾಜ್ಯದ ಏಕೈಕ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘವು ಈ ವರ್ಷ ಮಳೆಯನ್ನು ಸಮರ್ಥವಾಗಿ ಎದುರಿಸಲು ಮುಂದಾಗಿದೆ. ಇದರೊಂದಿಗೆ ಸಂಭವನೀಯ ಮಳೆ ಅನಾಹುತ ತಪ್ಪಿಸಲು ಸಂಘವು ಸರ್ವ ಸನ್ನದ್ಧಗೊಂಡಿದೆ.

ಪೂರ್ವ ಮುಂಗಾರು ಮಳೆ ಚುರುಕು ಪಡೆದುಕೊಂಡಿದ್ದರಿಂದ ಜನಸ್ನೇಹಿ ಆಡಳಿತಕ್ಕೆ ಹೆಸರುವಾಸಿಯಾದ ಈ ವಿದ್ಯುತ್ ಸಂಸ್ಥೆಯು ಸಾಕಷ್ಟು ಸಿದ್ಧತೆಗಳನ್ನು ಕೈಗೊಂಡಿದೆ. ಅಗತ್ಯ ವಿದ್ಯುತ್ ಸರಬರಾಜು ಉಪಕರಣಗಳನ್ನು ಸಂಗ್ರಹಿಸಿಕೊಂಡಿದೆ. ಈ ಮೂಲಕ ಮಳೆಗಾಲದಲ್ಲೂ ಸಮರ್ಪಕವಾಗಿ ವಿದ್ಯುತ್ ಪೂರೈಸಲು ತಯಾರಿ ನಡೆಸಿದೆ.ಸಿಬ್ಬಂದಿಗೂ ಮಳೆ ವೇಳೆ ವಿದ್ಯುತ್ ಉಪಕರಣಗಳ ದುರಸ್ತಿಯಲ್ಲಿ ವಹಿಸಬೇಕಾದ ಎಚ್ಚರಿಕೆ ಮತ್ತು ತರಬೇತಿಗಳನ್ನು ನೀಡಲಾಗಿದೆ. ಅಧಿಕಾರಿ-ಸಿಬ್ಬಂದಿಗೆ ಕೇಂದ್ರ ಸ್ಥಾನದಲ್ಲಿರಲು ಸೂಚಿಸಲಾಗಿದೆ. ಜತೆಗೆ ಅಪಾಯ ತಪ್ಪಿಸುವ ಪ್ರಯತ್ನ ನಡೆಸಿದೆ.ಹಲವು ದಶಕಗಳಿಂದ ಹುಕ್ಕೇರಿ ತಾಲೂಕಿನ ಜನತೆಗೆ ಬೆಳಕು ನೀಡುತ್ತಿರುವ ಗ್ರಾಮೀಣ ವಿದ್ಯುತ್ ಸಂಸ್ಥೆಯು ಗುಣಮಟ್ಟದ ವಿದ್ಯುತ್ ಪೂರೈಕೆಯಿಂದ ಖ್ಯಾತಿ ಗಳಿಸಿದೆ. ತನ್ಮೂಲಕ ದೀರ್ಫ ಕಾಲದವರೆಗಿನ ಇತಿಹಾಸ ಹೊಂದಿ, ತಾಲೂಕಿನ ರೈತರು ಮತ್ತು ಗ್ರಾಹಕರ ಜೀವನಾಡಿಯಾಗಿ ಹೊರಹೊಮ್ಮಿದೆ. ಇದರೊಂದಿಗೆ ಸರ್ಕಾರಿ ಸ್ವಾಮ್ಯದ ವಿದ್ಯುತ್ ಕಂಪನಿಗಳಿಗೆ ಮಾದರಿಯಾಗಿದೆ.ಮಳೆ, ಗಾಳಿ, ಗುಡುಗು, ಮಿಂಚು ಹೆಚ್ಚಾಗಿ ಬರುವ ಸಂಭವವಿರುವುದರಿಂದ ಸಾರ್ವಜನಿಕರು ತುಂಡಾಗಿ ಬಿದ್ದಿರುವ ವಿದ್ಯುತ್ ಲೈನ್‌ಗಳನ್ನು ಮುಟ್ಟುವುದಾಗಲಿ, ವಿದ್ಯುತ್ ಕಂಬ ಹಾಗೂ ಇತರೆ ಉಪಕರಣಗಳನ್ನು ಮುಟ್ಟುವುದಾಗಲಿ, ಜಾನುವಾರುಗಳನ್ನು ಕಟ್ಟುವುದಾಗಲಿ, ಬಟ್ಟೆ ಒಣಗಲು ವಿದ್ಯುತ್‌ನ ಸಾಮಗ್ರಿಗಳನ್ನು ಬಳಸುವುದಾಗಲಿ ಮಾಡಬಾರದು. ವಿದ್ಯುತ್ ಅವಘಡದ ಮುನ್ಸೂಚನೆ ಕಂಡು ಬಂದಲ್ಲಿ ತಕ್ಷಣ ಸಂಸ್ಥೆಯನ್ನು ಸಂಪರ್ಕಿಸಲು ಕೋರಿದೆ.ಮಳೆಗಾಲದಲ್ಲಿ ವಿದ್ಯುತ್ ತಂತಿಗಳು ಮತ್ತು ಕಂಬಗಳ ಮೇಲೆ ಅಕ್ಕಪಕ್ಕದ ಮರಗಳ ಗೊಂಬೆಗಳು ಮಳೆಗಾಳಿಯಿಂದ ಬಿದ್ದು ವಿದ್ಯುತ್ ಕಂಬ, ತಂತಿಗಳಿಗೂ ಹಾನಿ ಉಂಟು ಮಾಡುತ್ತದೆ. ಪ್ರತಿ ವರ್ಷವೂ ಮಳೆಗಾಲದಲ್ಲಿ ಈ ರೀತಿಯ ಘಟನೆಗಳು ಸಾಮಾನ್ಯವಾಗಿವೆ. ಪ್ರಸ್ತುತ ಮಳೆಗಾಲದಲ್ಲಿ ಇದನ್ನು ತಡೆಯುವ ಉದ್ದೇಶದಿಂದ ಕಂಬಗಳು, ತಂತಿಗಳ ಮೇಲೆ ಚಾಚಿಕೊಂಡಿರುವ ಮರದ ಕೊಂಬೆಗಳನ್ನು ತೆರವುಗೊಳಿಸಲಾಗುತ್ತಿದೆ.ಕೋಟಿಗೂ ಅಧಿಕ ಹಾನಿ:

ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಪೂರ್ವ ಮುಂಗಾರು ಮಳೆ, ಗಾಳಿ, ಗುಡುಗು, ಮಿಂಚುನೊಂದಿಗೆ ಧಾರಾಕಾರ ಸುರಿದ ಪೂರ್ವ ಮುಂಗಾರು ಮಳೆಗೆ ಈ ವಿದ್ಯುತ್ ಸಂಸ್ಥೆಗೆ ಕೋಟ್ಯಂತರ ರೂ,ಗಳ ನಷ್ಟ ಅನುಭವಿಸುವಂತಾಗಿದೆ. ₹71 ಲಕ್ಷ ಮೌಲ್ಯದ 550 ವಿದ್ಯುತ್ ಕಂಬಗಳು ಮುರಿದಿವೆ. ಇದೇ ವೇಳೆ ಹತ್ತಾರು ವಿದ್ಯುತ್ ಪರಿವರ್ತಕ (ಟಿಸಿ)ಗಳೂ ಸಹ ಸುಟ್ಟು ಹಾಳಾಗಿದ್ದು ಒಟ್ಟು ಅಂದಾಜು ಕೋಟಿ ರುಪಾಯಿಗಳಿಗೂ ಅಧಿಕ ಬೆಲೆಬಾಳುವ ಸಾಧನ-ಸಲಕರಣೆ, ಉಪಕರಣಗಳು ಹಾನಿಗೀಡಾಗಿವೆ.ಈ ಹಿಂದೆಯೂ 2019 ಮತ್ತು 2021ರಲ್ಲಿ ಸಂಭವಿಸಿದ ನೆರೆಹಾವಳಿಯಿಂದ ಸಂಸ್ಥೆಗೆ ಕೋಟ್ಯಂತರ ರುಪಾಯಿಗಳ ಸಾಧನ-ಸಲಕರಣೆಗಳು ಹಾನಿಯಾಗಿದ್ದವು. ಆದರೆ, ಇದುವರೆಗೆ ಸಂಸ್ಥೆಗೆ ನಯಾಪೈಸೆ ಪರಿಹಾರ ದೊರೆತಿಲ್ಲ. ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಸರ್ಕಾರಿ ಸ್ವಾಮ್ಯದ ವಿದ್ಯುತ್ ಕಂಪನಿಗಳಿಗೆ ಪರಿಹಾರ ನೀಡುವಂತೆ ಈ ವಿದ್ಯುತ್ ಸಂಸ್ಥೆಗೂ ಸರ್ಕಾರ ಆರ್ಥಿಕ ಸಹಾಯ ಒದಗಿಸಿ ಹಲವು ದಶಕಗಳ ದೀಪ-ಬೆಳಕು ಆರದಂತೆ ನೋಡಿಕೊಳ್ಳಬೇಕಿದೆ.ಪ್ರಸಕ್ತ ಮಳೆಗಾಲದ ಅವಧಿಯಲ್ಲಿ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಂಘದಿಂದ ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಈಗಾಗಲೇ ವಿದ್ಯುತ್ ಸರಬರಾಜು ಯಂತ್ರಗಳ ಸ್ಥಿತಿಗತಿಗಳ ಬಗ್ಗೆ ಪರಿಶೀಲನೆ ಮಾಡಿ ಕೆಟ್ಟು ಹೋಗಿರುವ ಯಂತ್ರಗಳನ್ನು ಸರಿಪಡಿಸುವ ಕಾರ್ಯ ಮಾಡಲಾಗುತ್ತಿದೆ. ಇದರೊಂದಿಗೆ ಮಳೆಗಾಲದಲ್ಲೂ ಸಮರ್ಪಕ ವಿದ್ಯುತ್ ಪೂರೈಸಲಾಗುವುದು.

-ರಮೇಶ ಕತ್ತಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಹಾಗೂ ಸಂಸ್ಥೆಯ ಮಾರ್ಗದರ್ಶಕರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!