ಬೇಸಿಗೆ ಆರಂಭಕ್ಕೂ ಮೊದಲೇ ವಿದ್ಯುತ್ ಕಣ್ಣಾಮುಚ್ಚಾಲೆ: ರೈತ ಸಂಘದಿಂದ ಬೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ

KannadaprabhaNewsNetwork |  
Published : Jan 29, 2025, 01:32 AM IST
28ಕೆಬಿಪಿಟಿ.2.ಬಂಗಾರಪೇಟೆ ಬೆಸ್ಕಾಂ ಕಚೇರಿ ಮುಂದೆ ರೈತ ಸಂಘದ ಕಾರ್ಯಕರ್ತರು ವಿದ್ಯುತ್ ಸಮಸ್ಯೆ ವಿರೋಧಿಸಿ ಪ್ರತಿಭಟನೆ ಮಾಡಿದರು. | Kannada Prabha

ಸಾರಾಂಶ

ವಿದ್ಯುತ್ ನಂಬಿ ರೈತರು ಬೇಸಾಯ ಮಾಡುವರು, ಆದರೆ ಇತ್ತೀಚೆಗೆ ಎಲ್ಲಾ ಹೋಬಳಿಗಳಲ್ಲಿ ವಿದ್ಯುತ್ ಸಮಯಕ್ಕೆ ಸರಬರಾಜು ಆಗದೆ ಕೈಕೊಡುತ್ತಿದೆ, ಇದರಿಂದ ಬೆಳೆಗಳಿಗೆ ಸಮಯಕ್ಕೆ ಸರಿಯಾಗಿ ನೀರು ಕಟ್ಟಲಾಗದೆ ಬೆಳೆಗಳು ಒಣಗುತ್ತಿವೆ, ರೈತರಿಗೆ ಬೆಳೆ ನಷ್ಟವಾದರೆ ಅದಕ್ಕೆ ಅಧಿಕಾರಿಗಳೇ ನೇರ ಹೊಣೆಗಾರರಾಗುತ್ತಾರೆ ಹಾಗೂ ಅಧಿಕಾರಿಗಳು ರೈತರಿಗೆ ಬೆಳೆ ನಷ್ಟದ ಪರಿಹಾರ ತುಂಬಬೇಕೆಂದು ಎಚ್ಚರಿಕೆ ನೀಡಿದರು.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ತಾಲೂಕಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆಯಾಡುತ್ತಿದ್ದು ಇದರಿಂದ ರೈತರ ಬೆಳೆಗಳು ಕಣ್ಣ ಮುಂದೆಯೇ ಒಣಗುವಂತಾಗಿದೆ, ಆದ್ದರಿಂದ ಬೆಸ್ಕಾಂ ಅಧಿಕಾರಿಗಳು ವಿದ್ಯುತ್ ಕಡಿತಗೊಳಿಸದೇ ಕೂಡಲೇ ನಿರಂತರ ವಿದ್ಯುತ್ ಸರಬರಾಜು ಮಾಡಬೇಕೆಂದು ಆಗ್ರಹಿಸಿ ಬೆಸ್ಕಾಂ ಕಚೇರಿ ಮುಂದೆ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಕೆಲಕಾಲ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ಸಂಘದ ಜಿಲ್ಲಾಧ್ಯಕ್ಷ ಟಿ.ಎನ್.ರಾಮೇಗೌಡ ಮಾತನಾಡಿ, ಬೇಸಿಗೆ ಆರಂಭಕ್ಕೂ ಮೊದಲೇ ವಿದ್ಯುತ್ ಕೈಕೊಡುತ್ತಿರುವುದನ್ನು ನೋಡಿದರೆ ಇನ್ನು ಬೇಸಿಗೆ ಕಾಲದಲ್ಲಿ ಪರಿಸ್ಥಿತಿ ಹೇಗಿರಬೇಕು ಎಂದು ಊಹಿಸಲು ಕಷ್ಟವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.ವಿದ್ಯುತ್ ನಂಬಿ ರೈತರು ಬೇಸಾಯ ಮಾಡುವರು, ಆದರೆ ಇತ್ತೀಚೆಗೆ ಎಲ್ಲಾ ಹೋಬಳಿಗಳಲ್ಲಿ ವಿದ್ಯುತ್ ಸಮಯಕ್ಕೆ ಸರಬರಾಜು ಆಗದೆ ಕೈಕೊಡುತ್ತಿದೆ, ಇದರಿಂದ ಬೆಳೆಗಳಿಗೆ ಸಮಯಕ್ಕೆ ಸರಿಯಾಗಿ ನೀರು ಕಟ್ಟಲಾಗದೆ ಬೆಳೆಗಳು ಒಣಗುತ್ತಿವೆ, ರೈತರಿಗೆ ಬೆಳೆ ನಷ್ಟವಾದರೆ ಅದಕ್ಕೆ ಅಧಿಕಾರಿಗಳೇ ನೇರ ಹೊಣೆಗಾರರಾಗುತ್ತಾರೆ ಹಾಗೂ ಅಧಿಕಾರಿಗಳು ರೈತರಿಗೆ ಬೆಳೆ ನಷ್ಟದ ಪರಿಹಾರ ತುಂಬಬೇಕೆಂದು ಎಚ್ಚರಿಕೆ ನೀಡಿದರು.

ಟ್ರಾನ್ಸ್‌ಫಾರ್ಮರ್ ಗಳು ಸುಟ್ಟು ಹೋದಾಗ ಲೈನ್‌ಮೆನ್‌ಗಳು ಹಾಗೂ ಇನ್ಸ್‌ಪೆಕ್ಟರ್‌ಗಳಿಗೆ ದೂರು ನೀಡಿದರೂ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು. ಬೆಸ್ಕಾಂನ ಕೆಲ ವಿದ್ಯುತ್ ಗುತ್ತಿಗೆದಾರರು ನಿಗದಿಯಾಗಿರುವ ಸ್ಥಳದಲ್ಲಿ ಕೆಲಸ ಮಾಡದೆ, ಬೇರೆಡೆ ಕೆಲಸ ಮಾಡುವ ಮೂಲಕ ರಾಜಕೀಯ ಮಾಡುವರು. ಇವರಿಗೆ ಹೋಬಳಿಗಳ ಇನ್ಸ್‌ಪೆಕ್ಟರ್‌ಗಳ ಕುಮ್ಮಕ್ಕೇ ಕಾರಣವಾಗಿದೆ, ಇಂತಹ ಗುತ್ತಿಗೆದಾರರನ್ನು ಇಲಾಖೆ ಕಪ್ಪು ಪಟ್ಟಿಗೆ ಸೇರಿಸಬೇಕೆಂದು ಒತ್ತಾಯಿಸಿದರು.

ಬೇಸಿಗೆ ಆರಂಭದಲ್ಲಿ ಯಾವುದೇ ವಿದ್ಯುತ್ ಸಮಸ್ಯೆ ಉಂಟಾಗದಂತೆ ಈಗಿನಿಂದಲೇ ಇಲಾಖೆ ಮುಂಜಾಗ್ರತೆ ವಹಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇಲಾಖೆ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಧರಣಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿ ಬೆಸ್ಕಾಂ ಎಇಇ ರಾಜುಗೆ ಮನವಿ ಪತ್ರ ನೀಡಿದರು.

ಮುನಿವೆಂಕಟಪ್ಪ, ರವಿ, ಶ್ರೀನಿವಾಸ್, ನಾರಾಯಣಗೌಡ, ಜಯರಾಮರೆಡ್ಡಿ, ರಮೇಶ್, ಮುರಳಿ, ನಾರಾಯಣಪ್ಪ ಮೋಹನ್, ಬಸಪ್ಪ, ಬಾಲಚಂದ್ರ ಇತರರು ಇದ್ದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ