ಹೊಸಪೇಟೆ: ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ತಲೆದೋರದಂತೆ ಉತ್ಪಾದನೆಗೆ ಆದ್ಯತೆ ನೀಡಲಾಗಿದೆ. ಇದರ ಫಲವಾಗಿ ಹಳ್ಳಿ, ಹೋಬಳಿ ಮಟ್ಟದಲ್ಲೂ ವಿದ್ಯುತ್ ಉಪ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗುತ್ತಿದೆ. ರೈತರ ಸಮಸ್ಯೆಗಳನ್ನು ಹೋಗಲಾಡಿಸಲು ವಿದ್ಯುತ್ ಉಪಕೇಂದ್ರಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸ್ಥಾಪನೆ ಮಾಡಲಾಗುತ್ತಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದರು.
ರಾಜ್ಯ ವಿದ್ಯುತ್ ಪ್ರಸರಣ ನಿಗಮ ನಿಯಮಿತದಿಂದ ತಾಲೂಕಿನ ಬೈಲುವದ್ದಿಗೇರಿ ಗ್ರಾಮದಲ್ಲಿ ನಿರ್ಮಾಣಗೊಂಡಿರುವ 110/11 ಕೆವಿ ವಿದ್ಯುತ್ ಉಪಕೇಂದ್ರ ಲೋಕಾರ್ಪಣೆ ಹಾಗೂ ಹೊಸಪೇಟೆ ನಗರ, ನಾಗೇನಹಳ್ಳಿ ಮತ್ತು ಕೂಡ್ಲಿಗಿಯ ನರಸಿಂಹಗಿರಿ ಗ್ರಾಮದಲ್ಲಿ ನಿರ್ಮಾಣಗೊಳ್ಳುತ್ತಿರುವ 110/11 ಕೆವಿ ವಿದ್ಯುತ್ ಉಪಕೇಂದ್ರದ ಶಂಕುಸ್ಥಾಪನೆ ಸಮಾರಂಭಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು.40 ಎಕರೆ ಜಾಗವನ್ನು ನೀಡಿದರೆ, ರೈತರ ಹಿತದೃಷ್ಟಿಯಿಂದ ವಿಜಯನಗರ ಕ್ಷೇತ್ರದಲ್ಲೇ 220/ಕೆವಿ ವಿದ್ಯುತ್ ಉತ್ಪಾದನಾ ಕೇಂದ್ರ ಸ್ಥಾಪನೆ ಮಾಡಲಾಗುವುದು. ಇದರಿಂದ 10 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಿ; ರೈತರ ಪಂಪ್‌ಸೆಟ್‌ಗಳಿಗೆ ಒದಗಿಸಲಾಗುವುದು. ರೈತರ ಬದುಕು ಹಸನಾದರೆ, ದೇಶ ಹಸನಾಗಲಿದೆ ಎಂದರು.
ಈಗಾಗಲೇ 2400 ಮೆಗಾವ್ಯಾಟ್ ವಿದ್ಯುತ್ ಅನ್ನು ಸ್ಥಳೀಯ ಮಟ್ಟದಲ್ಲೇ ಉತ್ಪಾದಿಸಲು ಟೆಂಡರ್ ಮಾಡಿದ್ದೇವೆ. ರೈತರ ಹಿತಕ್ಕಾಗಿ ನಾವು ಈ ಕ್ರಮ ಕೈಗೊಂಡಿದ್ದೇವೆ. ಗೃಹಜ್ಯೋತಿ ಮೂಲಕ ₹9 ಸಾವಿರ ಕೋಟಿ ಮೊತ್ತದ ಉಚಿತ ವಿದ್ಯುತ್ ನೀಡುತ್ತಿದ್ದೇವೆ. ರೈತರ ಹಾಗೂ ಬಡವರ ಕಾಳಜಿಯನ್ನು ಸರ್ಕಾರ ಹೊಂದಿದೆ. ಈ ಹಿನ್ನೆಲೆಯಲ್ಲೇ ಪಂಚ ಗ್ಯಾರಂಟಿಗಳನ್ನು ಜಾರಿ ಮಾಡಲಾಗಿದೆ ಎಂದರು.ತಲಾ ಆದಾಯ ನಂಬರ್ ಒನ್ ಸ್ಥಾನ:
ಮುಖ್ಯಮಂತ್ರಿ ಸಿದ್ದರಾಮಯ್ಯನವರು ವರ್ಷಕ್ಕೆ ₹55 ಸಾವಿರ ಕೋಟಿ ಪಂಚ ಗ್ಯಾರಂಟಿಗಳಿಗೆ ನೀಡುತ್ತಿದ್ದಾರೆ. ರಾಜ್ಯದ ಬಜೆಟ್ ₹4 ಲಕ್ಷ ಕೋಟಿ ಇದ್ದು, ನೇರ ತೆರಿಗೆ ಪಾವತಿದಾರರು ಕಡಿಮೆ ಇದ್ದಾರೆ. ಜನಸಾಮಾನ್ಯರು ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಪಾವತಿ ಮಾಡುತ್ತಿದ್ದಾರೆ. ಹಾಗಾಗಿ, ನಾವು ಜನರ ದುಡ್ಡು ಜನರಿಗೆ ಕೊಡುತ್ತಿದ್ದೇವೆ. ಐದು ಗ್ಯಾರಂಟಿಗಳನ್ನು ನೀಡುತ್ತಿದ್ದೇವೆ. ಇದರ ಫಲವಾಗಿ ಕರ್ನಾಟಕ ರಾಜ್ಯದಲ್ಲೇ ತಲಾ ಆದಾಯದಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ. ಜಿಎಸ್‌ಟಿ ಪಾವತಿಯಲ್ಲಿ ದೇಶದಲ್ಲಿ ಎರಡನೇ ಸ್ಥಾನದಲ್ಲಿದ್ದೇವೆ. ಯುವಕರಿಗೆ ಉದ್ಯೋಗ ಕೊಡುವ ನಿಟ್ಟಿನಲ್ಲೂ ನಾವು ಕೆಲಸ ಮಾಡುತ್ತಿದ್ದೇವೆ. ಯುವ ನಿಧಿ ಕೂಡ ನೀಡುತ್ತಿದ್ದೇವೆ. ಕೌಶಲ್ಯ ಯೋಜನೆಗಳನ್ನು ರೂಪಿಸಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ಸರ್ವರ ಹಿತ ಕಾಪಾಡುವ ಸರ್ಕಾರ ಆಗಿದೆ ಎಂದರು.ಇಂಧನ ಇಲಾಖೆಯಲ್ಲೂ ಆರ್ಥಿಕ ಶಿಸ್ತು ಕಾಪಾಡಲು, ಪಂಚಾಯಿತಿಗಳು ನಮಗೆ ಕೊಡಬೇಕಾದ ಬಾಕಿ ವಸೂಲಿ ಕೆಲಸ ಮಾಡುತ್ತಿದ್ದೇವೆ. ಬೃಹತ್ ನೀರಾವರಿ ಇಲಾಖೆ, ಸಣ್ಣ ನೀರಾವರಿ ಇಲಾಖೆಗಳಿಂದಲೂ ನಮಗೇ ಬಾಕಿ ಹಣ ಬರಬೇಕಿದೆ. ಈಗ ನಾವು ವಸೂಲಿ ಮಾಡುವ ಕೆಲಸ ಮಾಡುತ್ತಿದ್ದೇವೆ. ಇಲಾಖೆಯನ್ನು ಬಲವರ್ಧನೆ ಮಾಡುವುದರೊಂದಿಗೆ ವಿದ್ಯುತ್ ಉತ್ಪಾದನೆಗೆ ಆದ್ಯತೆ ನೀಡಲಾಗಿದೆ ಎಂದು ಸಚಿವರು ಹೇಳಿದರು.
ಬಳ್ಳಾರಿ ಲೋಕಸಭೆ ಕ್ಷೇತ್ರದಿಂದ ಸೋನಿಯಾ ಗಾಂಧಿ ಅವರನ್ನು ಈ ಭಾಗದ ಜನರು ಆಯ್ಕೆ ಮಾಡಿ ಕಳುಹಿಸಿದ್ದರು. ಪ್ರಧಾನಿ ಹುದ್ದೆಯನ್ನೇ ತ್ಯಾಗ ಮಾಡಿದ ಸೋನಿಯಾ ಗಾಂಧಿ ಅವರಂಥ ನಾಯಕಿಯನ್ನು ಆಯ್ಕೆ ಮಾಡಿ ಸಂಸತ್‌ಗೆ ಕಳುಹಿಸಿದ್ದು, ಬಳ್ಳಾರಿ, ವಿಜಯನಗರ ಜಿಲ್ಲೆಗಳ ಜನರು ಎಂಬುದನ್ನು ಮರೆಯುವಂತಿಲ್ಲ. ಇಂದಿರಾ ಗಾಂಧಿ ಅವರು 1979ರಲ್ಲಿ ಗಂಗಾವತಿಗೂ ಪ್ರಚಾರಕ್ಕೆ ಆಗಮಿಸಿದ್ದರು ಎಂದು ಸಚಿವರು ಸ್ಮರಿಸಿದರು.ಸಂಸದ ಈ. ತುಕಾರಾಂ ಮಾತನಾಡಿ, ಕಾಂಗ್ರೆಸ್ ಹಸಿರು ಕ್ರಾಂತಿ ಮಾಡಿದೆ, ಉಳುವವನೇ ಭೂ ಒಡೆಯ ಕಾಯ್ದೆ ತಂದು ಜನರಿಗೆ ಸ್ವಾವಲಂಬಿ ಬದುಕು ಕಲ್ಪಿಸಿದೆ. ನುಡಿದಂತೆ ನಡೆದು ಈಗ ರಾಜ್ಯದಲ್ಲಿ ಜನಪರ ಸರ್ಕಾರ ನೀಡುತ್ತಿದ್ದೇವೆ. ಬಿಜೆಪಿಯವರು ಬರೀ ಬೊಗಳೆ ಬೀಡುತ್ತಿದ್ದಾರೆ ಎಂದು ಹರಿಹಾಯ್ದರು.
ಶಾಸಕ ಎಚ್.ಆರ್. ಗವಿಯಪ್ಪ ಮಾತನಾಡಿ, ಬೈಲುವದ್ದಿಗೇರಿ ಗ್ರಾಮದಲ್ಲಿ 110/11 ಕೆವಿ ಉಪ ಕೇಂದ್ರ ಸ್ಥಾಪನೆಗಾಗಿ ಅರಣ್ಯ ಇಲಾಖೆ ಜೊತೆಗೆ ಚರ್ಚಿಸಿ ಸಮಸ್ಯೆ ಬಗೆಹರಿಸಿದ ಫಲವಾಗಿ ಈಗ ಕೇಂದ್ರ ಸ್ಥಾಪನೆ ಆಗಿದೆ. ಹೊಸಪೇಟೆ ಭಾಗದಲ್ಲೂ 220/ಕೆವಿ ವಿದ್ಯುತ್ ಉತ್ಪಾದನಾ ಕೇಂದ್ರ ಸ್ಥಾಪನೆ ಆಗಬೇಕಿದೆ. ರೈತರು ಬೆಳೆ ನಷ್ಟ ಹೊಂದುತ್ತಿದ್ದಾರೆ. ಹಾಗಾಗಿ ವಿಜಯನಗರ ಕ್ಷೇತ್ರದ ರೈತರ ಹಿತಕ್ಕಾಗಿ ವಿದ್ಯುತ್ ಕೇಂದ್ರ ಹಾಗೂ ಉಪಕೇಂದ್ರಗಳ ಸ್ಥಾಪನೆಗೆ ಆದ್ಯತೆ ನೀಡಿರುವೆ ಎಂದರು.ಶಾಸಕಿ ಎಂ.ಪಿ. ಲತಾ, ಶಾಸಕ ಡಾ. ಎನ್.ಟಿ. ಶ್ರೀನಿವಾಸ್, ತುಕಾರಾಂ, ಹುಡಾ ಅಧ್ಯಕ್ಷ ಎಚ್‌ಎನ್‌ಎಫ್ ಇಮಾಮ್, ಪಂಕಜ್ ಕುಮಾರ ಪಾಂಡೆ, ಕ.ವಿ.ಪ್ರ.ನಿ.ನಿ. ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ, ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಮತ್ತಿತರರು ಪಾಲ್ಗೊಂಡಿದ್ದರು.ಸಿಎಲ್‌ಪಿ ಸಭೆಯಲ್ಲಿ ಯಾವುದೇ ಒಪ್ಪಂದ ಆಗಿಲ್ಲ: ಕೆ.ಜೆ. ಜಾರ್ಜ್
ಹೊಸಪೇಟೆ: ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದ ಬಳಿಕ ನಡೆದ ಸಿಎಲ್‌ಪಿ ಸಭೆಯಲ್ಲಿ ಮುಖ್ಯಮಂತ್ರಿ ಆಯ್ಕೆ ಮಾಡುವಾಗ ಯಾವ ಒಪ್ಪಂದವೂ ಆಗಿಲ್ಲ. ಸಿಎಂ ಸಿದ್ದರಾಮಯ್ಯ ಅವರನ್ನು ಎಲ್ಲ ಶಾಸಕರು ಯಾವ ಒಪ್ಪಂದವಿಲ್ಲದೇ, ಒಮ್ಮತದಿಂದ ಆಯ್ಕೆ ಮಾಡಿದ್ದಾರೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಸ್ಪಷ್ಟಪಡಿಸಿದರು.ವಿಜಯನಗರ ಜಿಲ್ಲೆಯ ಬೈಲುವದ್ದಿಗೇರಿ ಗ್ರಾಮದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಲ್‌ಪಿ ಸಭೆಯಲ್ಲಿ ಸಿದ್ದರಾಮಯ್ಯನ ಅವರನ್ನು ಆಯ್ಕೆ ಮಾಡಿದಾಗ, ಅಧಿಕಾರದ ಹಂಚಿಕೆ, ಫಿಫ್ಟಿ-ಫಿಫ್ಟಿ ಅಂತ ಏನೂ ಚರ್ಚೆಯಾಗಿಲ್ಲ. ಸಿಎಲ್‌ಪಿ ಸಭೆಯಲ್ಲಿ ಶಾಸಕರ ಒಮ್ಮತದಿಂದ ಸಿಎಂ ಆಯ್ಕೆ ಮಾಡಲಾಗಿದೆ. ಎಐಸಿಸಿ ಮುಖಂಡರು ಕೂಡ ಬಂದಿದ್ದರು. ಎಲ್ಲರೂ ಸಿಎಂ ಸಿದ್ದರಾಮಯ್ಯ ಅಂತನೇ ಹೇಳಿದ್ದಾರೆ ಎಂದರು.
ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ, ಎಐಸಿಸಿ ನಾಯಕ ಕೆ.ಸಿ. ವೇಣುಗೋಪಾಲ ರಾಜ್ಯಕ್ಕೆ ಭೇಟಿ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಪಕ್ಷದವರು, ಬಂದು ಹೋಗುತ್ತಾರೆ, ಪಕ್ಷದ ಹಲವು ವಿಷಯಗಳನ್ನು ಚರ್ಚೆ ಮಾಡುತ್ತೇವೆ. ಇದೇ ವಿಚಾರ, ಅದೇ ವಿಚಾರ ಅಂತ ಏನಿಲ್ಲ? ಅಧಿಕಾರ ಹಂಚಿಕೆ, ಸಿಎಂ ಬದಲಾವಣೆ ಹೈಕಮಾಂಡ್ ಗೆ ಬಿಟ್ಟ ವಿಚಾರ ಆಗಿದೆ. ಒಪ್ಪಂದದ ವಿಚಾರ ನನಗೆ ಗೊತ್ತಿಲ್ಲ ಎಂದರು.ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರನ್ನು ಭೇಟಿಯಾದ ವಿಷಯದಲ್ಲಿ ಯಾವುದೇ ವಿಶೇಷತೆ ಇಲ್ಲ. ಅವರು ನಮ್ಮ ಡಿಸಿಎಂ ಆಗಿದ್ದಾರೆ. ನಮ್ಮ ಪಕ್ಷದ ನಾಯಕ ಡಿ.ಕೆ. ಶಿವಕುಮಾರ ಅವರನ್ನು ಭೇಟಿ ಮಾಡಿರುವೆ. ಇದಕ್ಕೆ ಮಹತ್ವ ನೀಡುವಂತಹದೇನಿಲ್ಲ ಎಂದರು.
ಶಾಸಕರ ಖರೀದಿ ಸಂಸ್ಕೃತಿ ಕಾಂಗ್ರೆಸ್ಸಿನಲ್ಲಿಲ್ಲ. ಕಾಂಗ್ರೆಸ್ ಯಾವತ್ತೂ ಶಾಸಕರನ್ನು ಖರೀದಿಸಿಲ್ಲ. ನಾವು ಒಗ್ಗಟ್ಟಾಗಿಯೇ ಇದ್ದೇವೆ. ಬಿಜೆಪಿಯವರೇ ಬೆಂಕಿ ಹಾಕುವ ಕೆಲಸ ಮಾಡುತ್ತಿದ್ದಾರೆ. ರಾಜ್ಯ ಬಿಜೆಪಿ ಒಡೆದ ಮನೆ ಆಗಿದೆ. ಬಿಜೆಪಿಯಲ್ಲಿ ಮೂರು ಬಣಗಳಿವೆ. ಇದನ್ನು ಬಿಟ್ಟು ಆರ್. ಅಶೋಕ್ ಹಾಗೂ ವಿಜಯೇಂದ್ರ ಬಾಲಿಶ ಹೇಳಿಕೆ ನೀಡುತ್ತಿದ್ದಾರೆ ಎಂದರು.ಕಾಂಗ್ರೆಸ್ ರಾಷ್ಟ್ರೀಯ ಪಕ್ಷ ಅಲ್ಲ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರ್ ಸ್ವಾಮಿ ಹೇಳಿಕೆಗೆ ಗರಂ ಆದ ಸಚಿವ ಕೆ.ಜೆ. ಜಾರ್ಜ್, ನಿಖಿಲ್ ಕುಮಾರಸ್ವಾಮಿ ರಾಜಕೀಯಕ್ಕೆ ಯಾವಾಗ ಬಂದಿದ್ದಾರೆ ಎಂಬುದನ್ನು ಅರಿತುಕೊಳ್ಳಬೇಕು. ಅವರ ತಾತ ಎಚ್.ಡಿ. ದೇವೇಗೌಡರು ಪ್ರಧಾನಿಯಾದವರು, ಅವರು ಪ್ರಶ್ನಿಸಿದರೆ ನಾವು ಉತ್ತರಿಸಬಹುದು. ನಿಖಿಲ್ ಕುಮಾರಸ್ವಾಮಿ ಹೇಳಿಕೆಗೆ ನಾವುಯ ಉತ್ತರ ಕೊಡಬೇಕಾ? ನೀವು ಅವರನ್ನೇ ಕೇಳಿ ಎಂದು ಸಚಿವ ಕೆ.ಜೆ. ಜಾರ್ಜ್ ಗರಂ ಆದರು.
ಶಾಸಕರಾದ ಎಚ್.ಆರ್. ಗವಿಯಪ್ಪ, ಎಂ.ಪಿ. ಲತಾ, ಎನ್.ಟಿ. ಶ್ರೀನಿವಾಸ್, ಸಂಸದ ಈ. ತುಕಾರಾಂ ಮತ್ತಿತರರಿದ್ದರು.