ರಾಜ್ಯ ಸರ್ಕಾರ ವಿದ್ಯುತ್ ವಿತರಣಾ ವಲಯವನ್ನು ಖಾಸಗೀಕರಣಗೊಳಿಸಲು ಮುಂದಾಗಿರುವುದನ್ನು ತೀವ್ರವಾಗಿ ಖಂಡಿಸಿ ಹಾಗೂ ಸಾರ್ವಜನಿಕರ ಮತ್ತು ರೈತರ ಹಿತರಕ್ಷಣೆಗಾಗಿ ಖಾಸಗೀಕರಣ ಪ್ರಕ್ರಿಯೆ ಕೂಡಲೇ ಕೈ ಬಿಡಬೇಕೆಂದು ಆಗ್ರಹಿಸಿ ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ.ಬಿ.ವಿನಯ್ ಕುಮಾರ್ ನೇತೃತ್ವದಲ್ಲಿ ಪದಾಧಿಕಾರಿಗಳು ಶುಕ್ರವಾರ ಸರ್ಕಾರಕ್ಕೆ ಉಪವಿಭಾಗಾಧಿಕಾರಿ ಎಚ್.ಬಿ.ಚನ್ನಪ್ಪ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
- ಹೊನ್ನಾಳಿಯಲ್ಲಿ ವಿನಯಕುಮಾರ ಹೇಳಿಕೆ । ಎಸಿ ಎಚ್.ಬಿ.ಚನ್ನಪ್ಪ ಮೂಲಕ ಸರ್ಕಾರಕ್ಕೆ ಮನವಿ
- - -
ಕನ್ನಡಪ್ರಭ ವಾರ್ತೆ ಹೊನ್ನಾಳಿ
ರಾಜ್ಯ ಸರ್ಕಾರ ವಿದ್ಯುತ್ ವಿತರಣಾ ವಲಯವನ್ನು ಖಾಸಗೀಕರಣಗೊಳಿಸಲು ಮುಂದಾಗಿರುವುದನ್ನು ತೀವ್ರವಾಗಿ ಖಂಡಿಸಿ ಹಾಗೂ ಸಾರ್ವಜನಿಕರ ಮತ್ತು ರೈತರ ಹಿತರಕ್ಷಣೆಗಾಗಿ ಖಾಸಗೀಕರಣ ಪ್ರಕ್ರಿಯೆ ಕೂಡಲೇ ಕೈ ಬಿಡಬೇಕೆಂದು ಆಗ್ರಹಿಸಿ ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ.ಬಿ.ವಿನಯ್ ಕುಮಾರ್ ನೇತೃತ್ವದಲ್ಲಿ ಪದಾಧಿಕಾರಿಗಳು ಶುಕ್ರವಾರ ಸರ್ಕಾರಕ್ಕೆ ಉಪವಿಭಾಗಾಧಿಕಾರಿ ಎಚ್.ಬಿ.ಚನ್ನಪ್ಪ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಜಿ.ಬಿ.ವಿನಯ್ ಕುಮಾರ್ ಮಾತನಾಡಿ, ರಾಜ್ಯದ ಜನಸಾಮಾನ್ಯರು ಮತ್ತು ರೈತರ ಜೀವನಾಡಿಯಾಗಿರುವ ವಿದ್ಯುತ್ ವಿತರಣಾ ವಲಯವನ್ನು ಖಾಸಗಿ ಕಂಪನಿಗಳಿಗೆ ಒಪ್ಪಿಸಲು ಕರ್ನಾಟಕ ವಿದ್ಯುಚ್ಥಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ಮುಂದಾಗಿರುವುದು ಅತ್ಯಂತ ಕಳವಳಕಾರಿ ಸಂಗತಿ ಎಂದು ಹೇಳಿದರು.
ಮುಂಚೂಣಿ ಸಂಸ್ಥೆಯಾದ ಟಾಟಾ ಪವರ್ ಕಂಪನಿ ರಾಜ್ಯದ ಸುಮಾರ್ 19 ಜಿಲ್ಲೆಗಳಲ್ಲಿ ವಿದ್ಯುತ್ ವಿತರಣಾ ಪರವಾನಗಿ ಕೋರಿ ಅರ್ಜಿ ಸಲ್ಲಿಸಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆತಂಕ ಸೃಷ್ಠಿಸಿದೆ, ಈ ಹಿನ್ನೆಲೆ ಸ್ವಾಭಿಮಾನಿ ಬಳಗ ಖಾಸಗೀಕರಣ ತೀವ್ರವಾಗಿ ಖಂಡಿಸುತ್ತದೆ ಎಂದ ಅವರು, ರೈತ ಸಮುದಾಯಕ್ಕೆ ಅಗುವ ಅನ್ಯಾಯಗಳು ಮತ್ತು ತೊಂದರೆಗಳು ಸರ್ಕಾರ ಅರಿಯಬೇಕು ಎಂದರು.
ಉಚಿತ ವಿದ್ಯುತ್ ಯೋಜನೆಗೆ ಕುತ್ತು:
ಪ್ರಸ್ತುತ ಸರ್ಕಾರ ರೈತರ ಐ.ಪಿ. ಸೆಟ್‌ಗಳಿಗೆ ನೀಡುತ್ತಿರುವ ಉಚಿತ ಮತ್ತು ರಿಯಾಯಿತಿ ದರದ ವಿದ್ಯುತ್ ಯೋಜನೆಗಳು ಭವಿಷ್ಯದಲ್ಲಿ ಸ್ಥಗಿತಗೊಳ್ಳುವ ಅಪಾಯವಿದೆ. ಖಾಸಗಿ ಕಂಪನಿಗಳು ಕೇವಲ ಲಾಭ ಆಧಾರಿತ ಸೇವೆ ಮಾತ್ರ ನೀಡಬಲ್ಲವಾಗಿವೆ. ಅನಿಯಂತ್ರಿಕ ವಿದ್ಯುತ್ ದರ ಏರಿಕೆ ಭವಿಷ್ಯದಲ್ಲಿ ವಿದ್ಯುತ್ ದರಗಳನ್ನು ಖಾಸಗಿ ಕಂಪನಿಗಳೇ ನಿರ್ಧರಿಸುವಂತಾಗಿ ಸಾಮಾನ್ಯ ಹಾಗೂ ಮಧ್ಯಮ ವರ್ಗಗಳ ಗ್ರಾಹಕರಿಗೆ ಆರ್ಥಿಕ ಹೊರೆ ಬೀಳಲಿದೆ. ಗೃಹಜ್ಯೋತಿಯಂತಹ ಯೋಜನೆಗೆಳು ಸ್ಥಗಿತಗೊಳ್ಳುವ ಅಪಾಯ ಕೂಡ ಇದೆ ಎಂದರು.
ನೌಕರರ ಉದ್ಯೋಗ ಭದ್ರತೆಗೆ ಕೂಡ ಧಕ್ಕೆಯಾಗಲಿದ್ದು, ರಾಜ್ಯದಲ್ಲಿ 83 ಸಾವಿರ ಹುದ್ದೆಗಳಿದ್ದು, 56 ಸಾವಿರ ಹುದ್ದೆಗಳು ಭರ್ತಿಯಾಗಿದ್ದು,ಇನ್ನೂ 27ಸಾವಿರ ಹುದ್ದೆ ಖಾಲಿ ಇವೆ ಎಂದು ಮಾಹಿತಿ ನೀಡಿದ ಅವರು ಒಟ್ಟಾರೆಯಾಗಿ ರೈತರು ಕೃಷಿ ಚಟುವಟಿಕೆಯಿಂದಲೇ ವಿಮುಖರಾಗುವ ಪರಿಸ್ಥಿತಿ ವಿದ್ಯುತ್ ಖಾಸಗೀಕರಣದಿಂದ ಬರಲಿದೆ. ಈ ಬಗ್ಗೆ ರಾಜ್ಯ ಮುಖ್ಯಮಂತ್ರಿ, ಇಂಧನ ಸಚಿವರಿಗೂ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.
ರೈತ ಮುಖಂಡ ಕಡದಕಟ್ಟೆ ಜಗದೀಶ್ ಮಾತನಾಡಿ, ವಿದ್ಯುತ್ ಖಾಸಗೀಕರಣದಿಂದಾಗಿ ರೈತರು ವಿದ್ಯುತ್ ಬಿಲ್ ಕಟ್ಟಲಾಗದೇ ಕೃಷಿ ಚಟುವಟಿಕೆಗಳ ಮೇಲಿನ ದುಷ್ಪರಿಣಾಮಗಳಿಂದಾಗಿ ರೈತ ಆತ್ಮಹತ್ಯೆ ಪ್ರಕರಣಗಳು ಖಂಡಿತಾ ಹೆಚ್ಚಾಗುವ ಸಾಧ್ಯತೆಗಳಿವೆ ಎಂದರು.
ಈ ಸಂದರ್ಭದಲ್ಲಿ ರಾಜು ಕಡಗಣ್ಣಾರ, ದೇವರಾಜ್, ಮಂಜು, ಭೋಜ್ಯಾನಾಯ್ಕ, ಶ್ರೀಧರ ಗೌಡ, ಹಳದಪ್ಪ ಪಿರಗಿ, ಪ್ರಕಾಶ್, ಮನು ಬಳ್ಳೇಶ್ವರ, ಶಿವರಾಜ್, ಮಂತಾದವರು ಇದ್ದರು.
- - -
-19ಎಚ್‌ಎಲ್ಐ2:
ವಿದ್ಯುತ್ ವಿತರಣಾ ವಲಯ ಖಾಸಗೀಕರಣ ಉದ್ದೇಶ ಕೂಡಲೇ ಕೈಬಿಡಬೇಕೆಂದು ಆಗ್ರಹಿಸಿ ಸ್ವಾಭಿಮಾನಿ ಬಳಗದಿಂದ ಶುಕ್ರವಾರ ಸರ್ಕಾರಕ್ಕೆ ಎಸಿ ಎಚ್.ಬಿ.ಚನ್ನಪ್ಪ ಮೂಲಕ ಮನವಿ ಸಲ್ಲಿಸಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.