ಆನೆ ದಾಳಿ: ಮಡಿಕೇರಿಯಲ್ಲಿ ಬಿಜೆಪಿ ದಿಢೀರ್ ಪ್ರತಿಭಟನೆ

KannadaprabhaNewsNetwork |  
Published : Aug 19, 2026, 02:30 AM IST
ಚಿತ್ರ : 17ಎಂಡಿಕೆ6 : ಮಡಿಕೇರಿಯಲ್ಲಿ ಬಿಜೆಪಿಯಿಂದ ಪ್ರತಿಭಟನೆ ನಡೆಸಲಾಯಿತು.  | Kannada Prabha

ಸಾರಾಂಶ

ಕೊಡಗು ಜಿಲ್ಲೆಯಲ್ಲಿ ವನ್ಯಪ್ರಾಣಿ-ಮಾನವ ಸಂಘರ್ಷದಿಂದ ನಿರಂತರವಾಗಿ ಪ್ರಾಣ ಹಾನಿ ಸಂಭವಿಸುತ್ತಿದ್ದರೂ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ಜಿಲ್ಲಾ ಬಿಜೆಪಿ ವತಿಯಿಂದ ನಗರದ ಅರಣ್ಯ ಭವನ ಮುಂಭಾಗ ಸೋಮವಾರ ದಿಢೀರ್ ಪ್ರತಿಭಟನೆ ನಡೆಯಿತು.

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ವನ್ಯಪ್ರಾಣಿ-ಮಾನವ ಸಂಘರ್ಷದಿಂದ ನಿರಂತರವಾಗಿ ಪ್ರಾಣ ಹಾನಿ ಸಂಭವಿಸುತ್ತಿದ್ದರೂ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ಜಿಲ್ಲಾ ಬಿಜೆಪಿ ವತಿಯಿಂದ ನಗರದ ಅರಣ್ಯ ಭವನ ಮುಂಭಾಗ ಸೋಮವಾರ ದಿಢೀರ್ ಪ್ರತಿಭಟನೆ ನಡೆಯಿತು. ಅರಣ್ಯ ಭವನದ ಎದುರು ಜಮಾಯಿಸಿದ ಕಾರ್ಯಕರ್ತರು ರಾಜ್ಯ ಸರ್ಕಾರ ಮತ್ತು ಅರಣ್ಯ ಇಲಾಖೆ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು.

ಪ್ರತಿಭಟನೆ ತೀವ್ರಗೊಂಡ ವೇಳೆ ಕೆಲ ಬಿಜೆಪಿ ಕಾರ್ಯಕರ್ತರು ಅರಣ್ಯ ಭವನದೊಳಗೆ ನುಗ್ಗಲು ಯತ್ನಿಸಿದರು. ಪೊಲೀಸರು ಹಾಕಿದ್ದ ಬ್ಯಾರಿಕೇಡ್‌ಗಳನ್ನು ತೆಗೆದುಹಾಕಲು ಮತ್ತು ಅದರ ಮೇಲೆ ಹತ್ತಲು ಪ್ರಯತ್ನಿಸಿದರು. ಆದಾಗ್ಯೂ ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿ ಮಧ್ಯಪ್ರವೇಶಿಸಿ ಪ್ರತಿಭಟನಾಕಾರರನ್ನು ನಿಯಂತ್ರಿಸಿ ಪರಿಸ್ಥಿತಿ ಶಾಂತಗೊಳಿಸಿದರು. ಕೊಡಗು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೋನಲ್ ವೃಷ್ಠಿ ಅವರಿಗಾಗಿ ಕಾಯುತ್ತಿದ್ದ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಅಧಿಕಾರಿಗಳು ಕೇವಲ ಚೆಕ್‌ಗೆ ಸಹಿ ಮಾಡಲು ಮಾತ್ರ ಇದ್ದಾರೆಯೇ? ಕೆಲಸ ಮಾಡಲು ಆಗದಿದ್ದರೆ ವರ್ಗಾವಣೆ ಮಾಡಿಸಿಕೊಳ್ಳಲಿ. ಅಧಿಕಾರಿಗಳ ಮನೆಗೆ ಆನೆ ನುಗ್ಗಿದರೆ ಏನು ಮಾಡುತ್ತಿದ್ದರು? ಎಂದು ಪ್ರಶ್ನಿಸಿದರು. ಪ್ರತಿಭಟಿಸುವುದು ಪ್ರಜಾಸತ್ತಾತ್ಮಕ ಹಕ್ಕು, ಅದಕ್ಕೆ ಅಡ್ಡಿಪಡಿಸಬಾರದು ಎಂದು ಆಗ್ರಹಿಸಿದರು.

ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ, ಪ್ರತಿ ದಿನ ಕಾಡು ಪ್ರಾಣಿಗಳಿಂದ ಜನರು ಮತ್ತು ಬೆಳೆಗಳು ನಾಶವಾಗುತ್ತಿವೆ. ಆನೆಗಳು ನೇರವಾಗಿ ಪಟ್ಟಣದೊಳಗೆ ಬರುತ್ತಿವೆ. ಆದರೂ ಅರಣ್ಯ ಇಲಾಖೆ ಮತ್ತು ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ಪ್ರಸ್ತಾವನೆ ಕಳಿಸುತ್ತೇವೆ ಎಂಬುದೇ ಉತ್ತರ. ಇನ್ನೂ ಎಷ್ಟು ಜನ ಸತ್ತ ಬಳಿಕ ಕ್ರಮ? ಎಂದು ಪ್ರಶ್ನಿಸಿದರು. ಆ.೨೦ರೊಳಗೆ ಅರಣ್ಯ ಸಚಿವರು ಜಿಲ್ಲೆಗೆ ಬಂದು ಶಾಸಕರು, ಮುಖಂಡರೊಂದಿಗೆ ಸಭೆ ನಡೆಸಬೇಕು. ಇಲ್ಲದಿದ್ದರೆ ಇನ್ನೂ ಬೃಹತ್ ಹೋರಾಟ ಮಾಡಲಾಗುವುದು. ಕೆಲಸ ಮಾಡಲು ಇಷ್ಟವಿಲ್ಲದ ಅಧಿಕಾರಿಗಳು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ ಮಾತನಾಡಿ, ಕಂಡಂಗಾಲ ಎಡವನಾಡಿನಲ್ಲಿ ದಾಳಿ ಮಾಡಿದ ಆನೆಯನ್ನು ೨ ದಿನದಲ್ಲಿ ಹಿಡಿಯುವುದಾಗಿ ಹೇಳಿದ್ದರು. ಆದರೆ ಈವರೆಗೆ ಏನೂ ಆಗಿಲ್ಲ. ಮತ್ತೊಂದು ಜೀವ ಹೋಗಿದೆ. ೨ ದಿನದಲ್ಲಿ ಆನೆ ಸೆರೆ ಕಾರ್ಯಾಚರಣೆ ನಡೆಸಬೇಕು. ಪಿಸಿಸಿಎಫ್ ಕೂಡ ೨ ದಿನದಲ್ಲಿ ಜಿಲ್ಲೆಗೆ ಬರಬೇಕು ಎಂದು ಒತ್ತಾಯಿಸಿದರು.

ಪ್ರತಿಕ್ರಿಯಿಸಿದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೋನಲ್ ವೃಷ್ಠಿ, ಜಿಲ್ಲೆಯಲ್ಲಿ ೩ ಆನೆಗಳನ್ನು ಸೆರೆ ಹಿಡಿಯಲು ಕ್ರಮ ಕೈಗೊಳ್ಳಲಾಗುವುದು. ೧೫ ಕಿ.ಮೀ. ರೈಲ್ವೇ ಬ್ಯಾರಿಕೇಡ್‌ಗೆ ಪ್ರಸ್ತಾವನೆ ನೀಡಲಾಗಿದ್ದು, ೮ ಕಿ.ಮೀ.ಗೆ ಟೆಂಡರ್ ಆಗಿದೆ. ೫೬೦ ಗ್ರಾಮಗಳಲ್ಲಿ ೩೪೦ ಗ್ರಾಮಗಳಲ್ಲಿ ಆನೆ ಹಾವಳಿ ಇದೆ. ಆ. ೨೨ರಂದು ಹಿರಿಯ ಅಧಿಕಾರಿಗಳೊಂದಿಗೆ ಸಭೆ ಇದೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಮಹೇಶ್ ಜೈನಿ, ನೆರವಂಡ ಅನಿತಾ ಪೂವಯ್ಯ, ಅರುಣ್ ಕುಮಾರ್, ರಾಬೀನ್ ದೇವಯ್ಯ, ಬಿ.ಕೆ. ಜಗದೀಶ್, ಸತೀಶ್, ರವಿ ಕುಶಾಲಪ್ಪ ಸೇರಿದಂತೆ ನೂರಾರು ಕಾರ್ಯಕರ್ತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸದ್ಭಾವನಾ ವೇದಿಕೆ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ
ನಿರಂತರ ಶ್ರಮದಿಂದ ಯಶಸ್ಸು: ಸಿಎ ರಾಘವೇಂದ್ರ ಶೆಟ್ಟಿ