ಕನ್ನಡಪ್ರಭ ವಾರ್ತೆ ನಾಪೋಕ್ಲು
ಕೊಡಗಿನ ಚೆಂಬು ಗ್ರಾಮದ ದಬ್ಬಡ್ಕ ಭಾಗದಲ್ಲಿ ಬುಧವಾರ ರಾತ್ರಿ ಆನೆ ದಾಳಿಯಿಂದ ಕೊಪ್ಪದ ಶಿವಪ್ಪ (72) ಎಂಬ ರೈತ ಮೃತಪಟ್ಟ ಘಟನೆ ನಡೆದಿದೆ.ಕೊಪ್ಪದ ಶಿವಪ್ಪ ತನ್ನ ಮನೆಯ ಮುಂಭಾಗದಲ್ಲಿ ರಾತ್ರಿ 8:30 ಗಂಟೆಗೆ ಸದ್ದು ಕೇಳಿ ಬಂದ ಹಿನ್ನೆಲೆಯಲ್ಲಿ ಮನೆಯಿಂದ ಹೊರಬಂದು ಮನೆಯ ಮುಂಭಾಗದಿಂದ 30 ಮೀಟರ್ ದೂರದಲ್ಲಿ ನಡೆದು ಕೊಂಡು ಹೋದಾಗ ಕಾಡಾನೆ ದಿಢೀರ್ ದಾಳಿ ನಡೆಸಿದೆ ಎಂದು ಹೇಳಲಾಗಿದೆ. ಆನೆ ದಾಳಿಯಿಂದ ಎದೆ ಭಾಗ ಹಾಗೂ ಬೆನ್ನಿನ ಭಾಗಕ್ಕೆ ತೀವ್ರ ಸ್ವರೂಪದ ಗಾಯಗಳು ಉಂಟಾಗಿ ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ಸಾಗಿಸುವ ಸಂದರ್ಭ ಶಿವಪ್ಪ ಮೃತಪಟ್ಟಿದ್ದಾರೆ.ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ಗುರುವಾರ ಭೇಟಿ ನೀಡಿ ರೈತನ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು . ಬಳಿಕ ಮನೆಯವರಿಗೆ ಸಾಂತ್ವನ ಹೇಳಿದ ಶಾಸಕರು ಪರಿಹಾರ ಚೆಕ್ ನ ಮೊದಲ ಕಂತನ್ನು ಮನೆ ಯವರಿಗೆ ಹಸ್ತಾಂತರಿಸಿದರು. ಬಳಿಕ ಜನರ ಆತಂಕವನ್ನು ಆಲಿಸಿ ಈಗಾಗಲೇ ಮಾನವ ಪ್ರಾಣಿ ಸಂಘರ್ಷ ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಇದನ್ನು ಸಹ ಗಂಭೀರವಾಗಿ ಪರಿಗಣಿಸಿ ಪರಿಹಾರ ಕಂಡುಕೊಳ್ಳುವುದಾಗಿ ಹೇಳಿದರು. ದಬ್ಬಡ್ಕ ಭಾಗದಲ್ಲಿ ರೈಲ್ವೆ ಬ್ಯಾರಿಕೆಡ್ ಸೋಲಾರ್ ದೀಪ ಹೆಚ್ಚುವರಿ ಇ ಟಿ ಎಫ್ ಹಾಗೂ ಆರ್ ಆರ್ ಎಫ್ ಪಡೆಗಳನ್ನು ಕರೆ ತರಲಾಗುವುದು ಹಾಗೂ ಶಾಲಾ ಮಕ್ಕಳ ಓಡಾಟಕ್ಕೆ ಇಲಾಖೆ ವತಿಯಿಂದ ಒಂದು ವಾಹನ ವ್ಯವಸ್ಥೆಯನ್ನು ಮಾಡುವಂತೆಯೂ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯರಾದ ಸಂಕೇತ್ ಪೂವಯ್ಯ, ಇಸ್ಮಾಯಿಲ್ ನಾಪೋಕ್ಲು, ರವಿರಾಜ್ ಹೊಸೂರು, ಸೂರಜ್ ಹೊಸೂರು, ಪದ್ಮನಾಭ ಮಂಗಳಪ್ಪಾರೆ, ರಘುನಾಥ್ ಬಾಲಂಬಿ, ಮಧು ಹೊಸೂರು, ಜಯಂತ ಹೊಸೂರು, ಡಿ ಸಿ ಎಫ್, ವಲಯ ಅರಣ್ಯ ಅಧಿಕಾರಿ, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.