ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಂಯುಕ್ತಾಶ್ರಯದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಹಿರಿಯ ನಾಗರಿಕರ ಜಿಲ್ಲಾಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹಿರಿಯ ನಾಗರಿಕರು ವಯಸ್ಸಾಗಿದೆ ಎಂದು ಜೀವನದಲ್ಲಿ ಉತ್ಸಾಹ ಕಳೆದುಕೊಳ್ಳದೇ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಭಾಗವಹಿಸಬೇಕು. ಸೋಲು- ಗೆಲುವನ್ನು ಬದಿಗೆ ಸರಿಸಿ ಕ್ರೀಡಾಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವುದರಿಂದ ಜೀವನದುದ್ದಕ್ಕೂ ದೈಹಿಕ, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬಹುದು. ಪ್ರತಿನಿತ್ಯದ ಜೀವನದಲ್ಲಿ ಹೆಚ್ಚು ಲವಲವಿಕೆ ಹೊಂದಿ ಆತ್ಮವಿಶ್ವಾಸ ವೃದ್ಧಿಸಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.ಹಿರಿಯರ ಮೌಲ್ಯಯುತ ಜೀವನಾದರ್ಶಗಳು ಇಂದಿನ ಯುವಜನತೆಗೆ ಮಾರ್ಗದರ್ಶಿಯಾಗಿವೆ. ಸಮಾಜದಲ್ಲಿ ಹಿರಿಯರನ್ನು ಕಡೆಗಣಿಸದೇ ಮಕ್ಕಳು, ಪೋಷಕರು ಗೌರವದಿಂದ ನಡೆಸಿಕೊಳ್ಳಬೇಕು. ಹಿರಿಯ ನಾಗರಿಕರ ಅನುಭವಗಳು ನಮ್ಮೆಲ್ಲರಿಗೂ ದಾರಿದೀಪವಾಗಿವೆ. ಉತ್ತಮ ಸಮಾಜ ನಿರ್ಮಾಣಕ್ಕಾಗಿ ಮಕ್ಕಳು, ಯುವಜನರು ಸೇರಿದಂತೆ ಪ್ರತಿಯೊಬ್ಬರೂ ಹಿರಿಯರನ್ನು ಗೌರವಿಸುವಂತೆ ಜಿಲ್ಲಾಧಿಕಾರಿಗಳಾದ ಶ್ರೀರೂಪ ಅವರು ಸಲಹೆ ಮಾಡಿದರು.
ಜೀವನದಲ್ಲಿ ಸಾಕಷ್ಟು ಕಷ್ಟ- ಕಾರ್ಪಣ್ಯಗಳನ್ನು ದಾಟಿ ಬಂದಿರುವ ಹಿರಿಯರನ್ನು ಇತ್ತೀಚೆಗೆ ಕಡೆಗಣಿಸಿ ತುಚ್ಛವಾಗಿ ಕಾಣುತ್ತಿರುವುದು ಕಂಡುಬಂದಿದೆ. ಇದು ಸಲ್ಲದು, ಹಿರಿಯ ನಾಗರಿಕರನ್ನು ಗೌರವಾಧರಗಳಿಂದ ನೋಡಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಹಿರಿಯರ ಮಹತ್ವದ ಅನುಭವಗಳು ಯುವಜನಾಂಗಕ್ಕೆ ತುಂಬಾ ಅತ್ಯಗತ್ಯವಾಗಿವೆ. ಹಿರಿಯರ ಮಾರ್ಗದರ್ಶನಗಳು ನಮಗೆ ನಿರ್ದೇಶನಗಳಾಗಬೇಕು. ಪಿಂಚಣಿ, ಬಸ್‌ಗಳಲ್ಲಿ ರಿಯಾಯಿತಿ ದರದಲ್ಲಿ ಪ್ರಯಾಣ, ನ್ಯಾಯಾಲಯಗಳಲ್ಲಿ ಹಿರಿಯ ನಾಗರಿಕರ ಪ್ರಕರಣಗಳ ತ್ವರಿತ ಇತ್ಯರ್ಥ ಸೇರಿದಂತೆ ಹಲವು ಸೌಲಭ್ಯಗಳನ್ನು ಸರ್ಕಾರ ಒದಗಿಸಿದೆ ಎಂದು ತಿಳಿಸಿದರು.
ವೇದಿಕೆ ಕಾರ್ಯಕ್ರಮದ ಬಳಿಕ 60 ವರ್ಷ ಮೇಲ್ಪಟ್ಟ ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಬಿರುಸಿನ ನಡಿಗೆ, ಮ್ಯೂಸಿಕಲ್ ಚೇರ್ ಹಾಗೂ ಬಕೆಟ್‌ನಲ್ಲಿ ಬಾಲ್ ಎಸೆಯುವ ಕ್ರೀಡಾ ಸ್ಪರ್ಧೆಗಳು ಹಾಗೂ ಗಾಯನ ಹಾಗೂ ಏಕಪಾತ್ರಾಭಿನಯದ ಸಾಂಸ್ಕೃತಿಕ ಸ್ಫರ್ಧೆಗಳು ನಡೆದವು. ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ 150ಕ್ಕೂ ಅಧಿಕ ಮಂದಿ ಹಿರಿಯ ನಾಗರಿಕರು ಭಾಗವಹಿಸಿದ್ದರು.