ಕನ್ನಡಪ್ರಭ ವಾರ್ತೆ ಮಡಿಕೇರಿ
ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರನ್ನು ಕಂಡು ಒಂಟಿ ಸಲಗ ಅಟ್ಟಾಡಿಸಿದ್ದು ಕಾಡಾನೆಯನ್ನು ಕಂಡು ದಿಕ್ಕಾಪಾಲಾಗಿ ಓಡಿದ ಘಟನೆ ಕೊಡಗು ಜಿಲ್ಲೆಯ ಹಾತೂರು ಗ್ರಾಮದ ಬಳಿ ಶನಿವಾರ ಮುಂಜಾನೆ ನಡೆದಿದೆ.ಕಾಫಿ ತೋಟದಲ್ಲಿ ಕೆಲಸ ಮಾಡುವ ವೇಳೆಯಲ್ಲಿ 300 ಮೀ ದೂರದಲ್ಲಿ ಕಾಡಾನೆ ಪ್ರತ್ಯಕ್ಷವಾಗಿದೆ. ತೋಟದ ನಡುವೆ ತನ್ನ ಸೊಂಡಿಲಿನಿಂದ ಮಣ್ಣು ಹಾಕಿಕೊಳ್ಳುತ್ತಿದ್ದ ಕಾಡಾನೆಯನ್ನು ಕಂಡು ತಮ್ಮ ಮೊಬೈಲ್ ನಲ್ಲಿ ವಿಡಿಯೋ ಮಾಡಲು ಕಾರ್ಮಿಕರು ಮುಂದಾಗಿದ್ದರು. ಈ ವೇಳೆ ಕಾರ್ಮಿಕರನ್ನು ಗಮನಿಸಿದ ಕಾಡಾನೆ ವಿಡಿಯೋ ಸೆರೆ ಹಿಡಿಯುವ ವೇಳೆಗೆ ದಿಢೀರ್ ದಾಳಿಗೆ ಮುಂದಾಯಿತು.
ಕಾಡಾನೆಯಿಂದ ತಪ್ಪಿಸಿಕೊಳ್ಳಲು ತೋಟದ ಕಾರ್ಮಿಕರು ದಿಕ್ಕಾಪಾಲಾಗಿ ಓಡಿ ಪ್ರಾಣ ಉಳಿಸಿಕೊಂಡಿದ್ದಾರೆ. ಓಡುವ ಬರದಲ್ಲಿ ಕೆಲ ಕಾರ್ಮಿಕರಿಗೆ ಸಣ್ಣಪುಟ್ಟ ಗಾಯವಾಗಿದೆ.ಘಟನೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
-----------------------------ಎಸ್.ಆರ್.ಸರೋಜಗೆ ಜಾನಪದ ಗೌರವ ಪ್ರಶಸ್ತಿ
ಮಡಿಕೇರಿ: ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕು ಸಿದ್ದಾಪುರ ಅಂಚೆ ಕರಡಿಗೋಡು ಗ್ರಾಮದ ಗೂಡುಗದ್ದೆ ಹಾಡಿಯ ರಾಜು ಅವರ ಪತ್ನಿ ಎಸ್.ಆರ್.ಸರೋಜ (ದೂ.ಸಂ.8971879671) ಅವರಿಗೆ ಬುಡಕಟ್ಟು ಕೋಲಾಟ, ಜೇನು ಕೊಯ್ಯುವ ಹಾಡು ಮತ್ತು ನೃತ್ಯಕ್ಕೆ 2024ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಲಭಿಸಿದೆ.ಜ. 2 ರಂದು ಬೆಂಗಳೂರಿನಲ್ಲಿ ನಡೆದ ಸರ್ವಸದಸ್ಯರ ಸಭೆಯ ತೀರ್ಮಾನದಂತೆ ಜಾನಪದ ಕಲಾವಿದರು ಮತ್ತು ತಜ್ಞರನ್ನು 2024 ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿ ಹಾಗೂ ತಜ್ಞ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ.
1980 ರಿಂದ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಜಾನಪದ ಅಕಾಡೆಮಿಯ ಯೋಜನೆಗಳಲ್ಲಿ ಜಾನಪದ ಕಲೆಗಳಿಗೆ ತನ್ನನ್ನು ತಾನು ಅರ್ಪಿಸಿಕೊಂಡಿರುವ ಜಾನಪದ ಕಲಾವಿದರಿಗೆ, ಜಾನಪದ ಕ್ಷೇತ್ರ ತಜ್ಞರಿಗೆ ವಾರ್ಷಿಕ ಪ್ರಶಸ್ತಿಗಳನ್ನು ನೀಡಿ ಗೌರವಿಸುವುದು ಬಹುಮುಖ್ಯ ಭಾಗ. ಈ ನಿಟ್ಟಿನಲ್ಲಿ ಕರ್ನಾಟಕ ಜಾನಪದ ಅಕಾಡೆಮಿಯು1980 ರಿಂದ 2023 ರ ಸಾಲಿನ ವರೆಗೆ 1074 ಜಾನಪದ ಕಲಾವಿದರು, 113 ವಿದ್ವಾಂಸರು ಸೇರಿದಂತೆ ಅಕಾಡೆಮಿಯು ಒಟ್ಟಾರೆ 1187 ಗೌರವ ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಿದೆ.2024 ನೇ ಸಾಲಿನಲ್ಲಿ ರಾಜ್ಯದ 30 ಜಿಲ್ಲೆಗಳಿಂದ 30 ಹಿರಿಯ ಜಾನಪದ ಕಲಾವಿದರಿಗೆ ವಾರ್ಷಿಕ ಗೌರವ ಪ್ರಶಸ್ತಿ, ಇಬ್ಬರು ಜಾನಪದ ತಜ್ಞರಿಗೆ ತಜ್ಞ ಪ್ರಶಸ್ತಿ ನೀಡಲಾಗುವುದು. ಕಲಾವಿದರಿಗೆ ನೀಡುವ ಗೌರವ ಪ್ರಶಸ್ತಿಯ ಮೊತ್ತ 25,000 ರು. ಮತ್ತು ಇಬ್ಬರು ಕ್ಷೇತ್ರ ತಜ್ಞರಿಗೆ ತಲಾ 50,000 ರು. ಗಳು ಪ್ರಶಸ್ತಿ ಮೊತ್ತದ ಜೊತೆಗೆ ಸ್ಮರಣಿಕೆ, ಶಾಲು, ಹಾರ, ಫಲತಾಂಬೂಲ ನೀಡಿ ಗೌರವಿಸಲಾಗುವುದು.