ಸಕ್ರೆಬೈಲು ಆನೆ ಬಿಡಾರದಲ್ಲಿ ಹೊಸ ಅತಿಥಿ: ಹೆಣ್ಣುಮರಿಗೆ ಜನ್ಮ ನೀಡಿದ ಭಾನುಮತಿ

KannadaprabhaNewsNetwork | Published : Nov 5, 2023 1:16 AM

ಸಾರಾಂಶ

22ಕ್ಕೆ ಏರಿದ ಆನೆಗಳ ಸಂಖ್ಯೆ

- ದಸರಾ ಮೆರವಣಿಗೆಗೆ ಆಗಮಿಸಿದ್ದ ಆನೆ ನೇತ್ರಾವತಿ ಗರ್ಭಿಣಿ ಎಂಬ ಸುಳಿವು ನೀಡದೇ ಮರಿಹಾಕಿ ಎಲ್ಲರನ್ನು ಅಚ್ಚರಿಗೊಳಿಸಿತ್ತು

- ಭಾನುಮತಿ, ನೇತ್ರಾವತಿ ಆನೆಗಳ ವಿಚಾರಗಳ ಬಗ್ಗೆ ಸಕಾಲಕ್ಕೆ ಮಾಹಿತಿ ಬಹಿರಂಗಪಡಿಸುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ: ಕಾರಣ?

- - - ಕನ್ನಡಪ್ರಭ ವಾರ್ತೆ ಶಿವಮೊಗ್ಗ

ತಾಲೂಕಿನ ಸಕ್ರೆಬೈಲಿನ ಆನೆ ಬಿಡಾರದಲ್ಲಿ 15 ದಿನಗಳ ಅವಧಿಯಲ್ಲಿ ಇಬ್ಬರು ಹೊಸ ಅತಿಥಿಗಳ ಆಗಮನವಾಗಿದೆ. ವಿಜಯದಶಮಿಯ ಹಿಂದಿನ ದಿನ ಹೆಣ್ಣುಮರಿಗೆ ನೇತ್ರಾವತಿ ಹೆಸರಿನ ಆನೆ ಜನ್ಮ ನೀಡಿತ್ತು. ಈಗ ಗರ್ಭಿಣಿಯಾಗಿದ್ದ ಭಾನುಮತಿ ಹೆಣ್ಣುಮರಿಗೆ ಜನ್ಮ ನೀಡಿದ್ದಾಳೆ.

ಗರ್ಭಿಣಿಯಾಗಿದ್ದ ಭಾನುಮತಿ ಕಾಡಿಗೆ ಮೇಯಲು ಹೋಗಿದ್ದಾಗ ಬಾಲಕ್ಕೆ ಆಳವಾದ ಗಾಯವಾಗಿತ್ತು. ಚಿಕಿತ್ಸೆ ಬಳಿಕ ಆನೆ ಚೇತರಿಸಿಕೊಂಡಿತ್ತು. ಈ ಘಟನೆ ನಡೆದು ಮೂರು ವಾರಗಳ ಬಳಿಕ ಭಾನುಮತಿ ಹೆಣ್ಣುಮರಿಗೆ ಜನ್ಮ ನೀಡಿದೆ. ಇದರಿಂದ ಬಿಡಾರದಲ್ಲೇ ಈಗ ಆನೆಗಳ ಸಂಖ್ಯೆ 22ಕ್ಕೆ ಏರಿಕೆಯಾಗಿದೆ. ಬಿಡಾರದಲ್ಲಿ ಸದ್ಯಕ್ಕೆ 6 ಹೆಣ್ಣು ಹಾಗೂ 16 ಗಂಡು ಆನೆಗಳಿವೆ.

ಅನುಮಾನ ಹುಟ್ಟಿಸಿದ ಅಧಿಕಾರಿಗಳ ನಡೆ:

ದಸರಾ ಮೆರವಣಿಗೆಗೆ ಆಗಮಿಸಿದ್ದ ನೇತ್ರಾವತಿ ಆನೆ ಗರ್ಭಿಣಿ ಎಂಬ ಸುಳಿವು ನೀಡದೇ ಮರಿಹಾಕಿ ಎಲ್ಲರನ್ನು ಅಚ್ಚರಿಗೊಳಿಸಿತ್ತು. ನೇತ್ರಾವತಿ ಗರ್ಭಿಣಿಯಾಗಿದ್ದು ಬಿಡಾರದ ಸಿಬ್ಬಂದಿಗೂ ಗೊತ್ತಿರಲಿಲ್ಲ. ಈ ವಿಚಾರ ಬಿಡಾರದ ಅಧಿಕಾರಿಗಳ ವಿರುದ್ಧ ಬೊಟ್ಟು ಮಾಡಿ ತೋರಿಸಿತ್ತು. ಈಗ ಗರ್ಭಿಣಿಯಾಗಿದ್ದ ಭಾನುಮತಿ ಆನೆ ಶುಕ್ರವಾರವೇ ಹೆಣ್ಣುಮರಿಗೆ ಜನ್ಮ ನೀಡಿದೆ. ಆದರೆ, ಈ ವಿಚಾರವನ್ನೇ ಅರಣ್ಯ ಇಲಾಖೆ ವನ್ಯಜೀವಿ ವಿಭಾಗದ ಅಧಿಕಾರಿಗಳು ಬಹಿರಂಗಪಡಿಸಿಲ್ಲ. ಆನೆಗಳ ಆರೋಗ್ಯದ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆನೆಗಳ ವಿಚಾರದಲ್ಲಿ ಅಧಿಕಾರಿಗಳು ನಡೆದುಕೊಳ್ಳುವ ರೀತಿ ಬಿಡಾರದಲ್ಲಿ ಎಲ್ಲವೂ ಸರಿ ಎಂಬುದನ್ನು ತೋರಿಸುವಂತಿದೆ.

ಭಾನುಮತಿ ತುಂಬು ಗರ್ಭಿಣಿ ಆಗಿದ್ದಾಗ ಆನೆ ಬಾಲಕ್ಕೆ ಆಳವಾದ ಗಾಯವಾಗಿತ್ತು. ಯಾರೋ ಮಚ್ಚಿನಿಂದ ಹೊಡೆದು ಗಾಯ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಆಗಲೂ ಅರಣ್ಯ ಇಲಾಖೆ ಅಧಿಕಾರಿಗಳಿಂದ ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಾಗಿರಲಿಲ್ಲ. ಈಗ ಭಾನುಮತಿ ಮರಿಹಾಕಿರುವ ವಿಚಾರವನ್ನೂ ಅಧಿಕಾರಿಗಳು ಬಹಿರಂಗಪಡಿಸಿಲ್ಲ. ನೇತ್ರಾವತಿ ಆನೆ ವಿಚಾರದಲ್ಲೂ ಅಧಿಕಾರಿಗಳು ಮೌನ ಮುರಿಯಲಿಲ್ಲ. ಸಕ್ರೆಬೈಲ್ ಆನೆ ಬಿಡಾರದಲ್ಲಿ ಏನೋ ನಡೆಯುತ್ತಿದೆ ಎಂಬ ಅನುಮಾನಕ್ಕೆ ಈ ರೀತಿಯ ಚಟುವಟಿಕೆಗಳು ಪುಷ್ಟಿ ನೀಡುತ್ತಿವೆ ಎನ್ನುತ್ತಿದ್ದಾರೆ ಸ್ಥಳೀಯ ನಿವಾಸಿಗಳು.

- - - -4ಎಸ್‌ಎಂಜಿಕೆಪಿ03: ಶಿವಮೊಗ್ಗ ತಾಲೂಕಿನ ಸಕ್ರೆಬೈಲು ಆನೆ ಬಿಡಾರದಲ್ಲಿ ಹೆಣ್ಣುಮರಿಗೆ ಜನ್ಮ ನೀಡಿದ ಭಾನುಮತಿ ಆನೆ.

Share this article