ಕನ್ನಡಪ್ರಭ ವಾರ್ತೆ ಕುಶಾಲನಗರಭದ್ರಾ ಜಲಾಶಯದ ಬಳಿ ಅಭಯಾರಣ್ಯದಲ್ಲಿ ಕಾಡಾನೆಗಳನ್ನು ಸೆರೆಹಿಡಿದು ಬಿಡುವ ಯೋಜನೆಯ ರೀತಿಯಲ್ಲಿ ಕೊಡಗು ಜಿಲ್ಲೆಯ ವ್ಯಾಪ್ತಿಯಲ್ಲಿ ಇದೇ ರೀತಿಯ ಯೋಜನೆ ರೂಪಿಸಲು ಸರ್ಕಾರದೊಂದಿಗೆ ಚಿಂತನೆ ಹರಿಸಲಾಗಿದೆ ಎಂದು ವನ್ಯಜೀವಿ ಮಂಡಳಿ ಸದಸ್ಯರಾದ ಮೇರಿಯಂಡ ಸಂಕೇತ್ ಪೂವಯ್ಯ ತಿಳಿಸಿದರು. ಅವರು ಕುಶಾಲನಗರ ಸಮೀಪ ಹಾರಂಗಿ ಸಾಕಾನೆ ಶಿಬಿರದಲ್ಲಿ ವಿಶ್ವ ಆನೆ ಹಬ್ಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಕೊಡಗು ಜಿಲ್ಲೆಯಲ್ಲಿ ನಿರಂತರ ಆನೆ ಮಾನವ ಸಂಘರ್ಷ ನಡೆಯುತ್ತಿದ್ದು ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಅರಣ್ಯ ಇಲಾಖೆ, ಕಾರ್ಯಾಚರಣೆ ಕೈಗೊಳ್ಳುತ್ತಿದೆ. ಆನೆಗಳ ಪುನರ್ವಸತಿಗಾಗಿ ಕೇಂದ್ರ ಸ್ಥಾಪನೆ ಅಗತ್ಯವಾಗಿದೆ ಎಂದರು. ಆನೆ ಕಾರ್ಯಪಡೆ ಸಿಬ್ಬಂದಿಗಳಿಗೆ ತರಬೇತಿ ನೀಡುವ ಕಾರ್ಯಗಳು ಇಲಾಖೆ ಮೂಲಕ ನಡೆಯುತ್ತಿವೆ. ಆನೆಗಳಿಗೆ ಶಾಶ್ವತ ಪುನರ್ವಸತಿ ಕಲ್ಪಿಸುವ ಯೋಜನೆ, ಕಾರ್ಯಗತಗೊಳಿಸಲು ರಾಜ್ಯ ಕೇಂದ್ರ ಸರ್ಕಾರಗಳು ಯೋಜನೆ ರೂಪಿಸುತ್ತಿವೆ ಎಂದು ಹೇಳಿದರು. ಅಂಕಿ ಅಂಶಗಳ ಪ್ರಕಾರ, ವಿಶ್ವದಲ್ಲಿ 4 ಲಕ್ಷಕ್ಕಿಂತಲೂ ಅಧಿಕ ಆನೆಗಳು ಇದ್ದು ಪ್ರಸಕ್ತ ಆನೆಗಳ ಸಂಖ್ಯೆ ಕ್ಷೀಣ ಗೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.ಭಾರತ ದೇಶದಲ್ಲಿ ಒಟ್ಟು 27 ಸಾವಿರ ಆನೆಗಳ ಸಂಖ್ಯೆ ಹೊಂದಿದ್ದು ರಾಜ್ಯದಲ್ಲಿ 6,395 ಆನೆಗಳ ಸಂಖ್ಯೆ ಇರುವುದಾಗಿ ಮಾಹಿತಿ ನೀಡಿದ ಸಂಕೇತ್ ಪೂವಯ್ಯ ಅವರು ಕೊಡಗು ಜಿಲ್ಲೆ ಅತ್ಯಧಿಕ ಆನೆಗಳನ್ನು ಹೊಂದಿದ ಜಿಲ್ಲೆಯಾಗಿದೆ ಎಂದರು. ಆನೆಗಳ ಪಾತ್ರ ಸಂರಕ್ಷಣೆ ವೈಜ್ಞಾನಿಕವಾಗಿ ನಡೆಯಬೇಕಾಗಿದ್ದು ಈ ಹಿನ್ನಲೆಯಲ್ಲಿ ತಂತ್ರಜ್ಞಾನ ಬಳಕೆ ಅಗತ್ಯವಾಗಿದೆ ಎಂದರು.ಪ್ರಕೃತಿಗೆ ಪ್ರಕೃತಿ ಮಡಿಲು ಪ್ರಯೋಗಶಾಲೆಯಾಗಿದ್ದು ಈ ಹಿನ್ನೆಲೆಯಲ್ಲಿ ಪ್ರಕೃತಿ ಜೊತೆ ಮಕ್ಕಳು ಬೆಳೆಯಬೇಕು. ಪ್ರಕೃತಿ ವನ್ಯಜೀವಿ ಸಂರಕ್ಷಣೆ ಬಗ್ಗೆ ಶಾಲಾ ಮಕ್ಕಳ ಮೂಲಕ ಅರಿವು ಮೂಡಬೇಕಾಗಿದೆ. ಮಕ್ಕಳಿಗೆ ಅರಣ್ಯ ಪ್ರವಾಸ ಹಮ್ಮಿಕೊಳ್ಳುವ ಮೂಲಕ ಪ್ರಕೃತಿಯ ಬಗ್ಗೆ ಜಾಗೃತಿ ಮೂಡಿಸಲು ಸಾಧ್ಯ ಎಂದರು. ಮಡಿಕೇರಿ ಉಪ ವಿಭಾಗದ ಸಂರಕ್ಷಣಾಧಿಕಾರಿ ಅಭಿಷೇಕ್ ಅವರು ಮಾತನಾಡಿ ಪ್ರಕೃತಿ ರಕ್ಷಣೆ ವನ್ಯಜೀವಿಗಳ ಸಂರಕ್ಷಣೆ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಬೇಕು. ಈ ಸಂಬಂಧ ಇಲಾಖೆ ಮೂಲಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.ಅರಣ್ಯ ಪರಿಸರದಲ್ಲಿ ಆನೆಗಳ ಪಾತ್ರ ಉಳಿವಿನ ಬಗ್ಗೆ ಮತ್ತು ಜವಾಬ್ದಾರಿ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾಗಿದೆ ಎಂದರು. ವನಜೀವಿ ವಿಭಾಗದ ಉಪ ಸಂರಕ್ಷಣಾಧಿಕಾರಿ ಕೆ ಕೆ ನೆಹರು ಅವರು ಮಾತನಾಡಿ, ವನ್ಯಜೀವಿಗಳ ಉಳಿವಿಗೆ ಇಲಾಖೆಯೊಂದಿಗೆ ಪ್ರತಿಯೊಬ್ಬರ ಸಹ ಭಾಗಿತ್ವ ಅಗತ್ಯವಾಗಿದೆ. ಮಾನವನ ಅತಿಯಾಸೆ ಮೂಲಕ ಆನೆ ಮಾನವ ಸಂಘರ್ಷ ಏರಿಕೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು. ಈ ಸಂದರ್ಭ ಪಶ್ಚಿಮ ಘಟ್ಟ ಮತ್ತು ಆನೆ ಮಾನವ ಸಂಘರ್ಷ ವಿಚಾರವಾಗಿ ವನ್ಯಜೀವಿ ತಜ್ಞ ವೈದ್ಯರಾದ ಡಾ ಚಿಟ್ಟಿಯಪ್ಪ, ಭುವನೇಶ್ ಕುಕ್ಕೆ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು.