ಕಾರ್ಕಳ ಕ್ರಿಯೇಟಿವ್ ಕಾಲೇಜಿನಲ್ಲಿ ‘ಪುಸ್ತಕ ಧಾರೆ’ 23 ಕೃತಿಗಳ ಅನಾವರಣ
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಕೆ. ಚಿನ್ನಪ್ಪ ಗೌಡ ಮಾತನಾಡಿ, ಲೇಖಕರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಮಾಡಿರುವುದು ಹೆಮ್ಮೆಯ ವಿಷಯ. ಪುಸ್ತಕಮನೆ ಪ್ರಕಾಶನದ ಮಾದರಿ ರೂಪಿಸಿಕೊಳ್ಳುವುದು ಅತ್ಯಂತ ಮುಖ್ಯ. ವಿದ್ಯಾರ್ಥಿ ಕೇಂದ್ರಿತವಾಗಿ ನೈತಿಕ ಮೌಲ್ಯಗಳನ್ನು ಹೆಚ್ಚಿಸುವ ಪರಂಪರೆಯ ಸೃಷ್ಟಿಗೆ ಇದು ದಾರಿ ಮಾಡಿಕೊಟ್ಟಿದೆ ಎಂದರು.ಮಂಡ್ಯದ ಸಾಹಿತಿ ಡಾ. ಪ್ರದೀಪಕುಮಾರ ಹೆಬ್ರಿ ಮಾತನಾಡಿ, ವಿದ್ಯಾರ್ಥಿಗಳು, ಪೋಷಕರು ಹಾಗೂ ಉಪನ್ಯಾಸಕರಿಗಾಗಿ ನಿರ್ದಿಷ್ಟ ವಿಷಯಗಳ ಪುಸ್ತಕಗಳನ್ನು ಮೀಸಲಿಡಬೇಕು. ಪುಸ್ತಕಗಳ ಮೌಲ್ಯವನ್ನು ತಿಳಿಸುವಂತಹ ಕಾರ್ಯಗಳು ನಡೆಯಬೇಕು ಎಂದರು.ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಂಸ್ಥಾಪಕ ಅಶ್ವತ್ ಎಸ್.ಎಲ್. ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತಿಭಾವಂತ ಸಾಹಿತ್ಯದ ಪುಟಗಳು , ಓದುಗರ ಹೃದಯ ಬಾಗಿಲು ತಟ್ಟುತ್ತಿವೆ. ಪ್ರಕಟಣೆಯ ಕಿರಣಗಳು ಅನೇಕ ವಿನೂತನ ಆಲೋಚನೆಗಳಿಗೆ ಜೀವ ತುಂಬುತ್ತಿವೆ. ಈಗಾಗಲೇ ರಾಜ್ಯದಾದ್ಯಂತ 63,000 ಪುಸ್ತಕಗಳು ಜ್ಞಾನರಶ್ಮಿಗಳಂತೆ ಹರಡಿ, ಸಾವಿರಾರು ಮನಸ್ಸುಗಳಿಗೆ ಬೆಳಕು ಹರಿಸಿವೆ ಎಂದರು.
ಹೊಸ ಓದುಗರನ್ನು ಸೃಷ್ಟಿಸುವ ಪವಿತ್ರ ಯಜ್ಞದಲ್ಲಿ ಕ್ರಿಯೇಟಿವ್ ಕಾಲೇಜು ಮುಂಚೂಣಿಯಲ್ಲಿದೆ. ಇಲ್ಲಿ ಈಗಾಗಲೇ 4,000 ವಿದ್ಯಾರ್ಥಿಗಳು ವಿದ್ಯೆಯ ಅಂಗಳದಲ್ಲಿ ತೊಡಗಿಕೊಂಡಿದ್ದಾರೆ. ಪುಸ್ತಕಗಳ ಸುವಾಸನೆ, ಸಾಹಿತ್ಯದ ಸೊಬಗು, ಕಲ್ಪನೆಯ ಅನಂತ ಗಗನ ಇವೆಲ್ಲವನ್ನು ವಿದ್ಯಾರ್ಥಿಗಳ ಮನದಲ್ಲಿ ಬಿತ್ತುವ ಕಾರ್ಯದಲ್ಲಿ ಈ ಸಂಸ್ಥೆ ನಿರಂತರ ಶ್ರಮಿಸುತ್ತಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ವಿದ್ವಾನ್ ಗಣಪತಿ ಭಟ್ ಮಾತನಾಡಿ, ಸಾಹಿತ್ಯ ಬದುಕಿನ ರಹದಾರಿ ಎಂದರು. ಕಾರ್ಕಳ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ್ ಶೆಟ್ಟಿ ಮಾತನಾಡಿ, ಪುಸ್ತಕಮನೆ ಅತಿ ಬೆಲೆಬಾಳುವ ಮನೆಯಾಗಿದೆ ಎಂದರು. ಚಂದ್ರಕಾಂತ ಪೋಕಳೆ ಬರೆದ ‘ಯಾತ್ರೆ’, ಎಲ್.ಪಿ. ಕುಲಕರ್ಣಿ ಬರೆದ ‘ವಿಜ್ಞಾನ ಕೌತುಕಗಳ ಮಹಾಯಾನ’, ಪೌಝಿಯಾ ಸಲೀಂ ಬರೆದ ‘ಹರ್ಷ ರಾಗ’, ಪದ್ಮಲತಾ ಮೋಹನ್ ಬರೆದ ‘ಹಿತಶತ್ರು’, ಸದಾಶಿವ ಸೊರಟೂರು ಬರೆದ ‘ಪುಟ್ಟ ದೇವರ ಕಣ್ಣೀರು’, ಕುಮಾರಸ್ವಾಮಿ ತೆಕ್ಕುಂಜ ಬರೆದ ‘ಬದುಕು ಮಾಯೆಯ ಮಾಟ’, ನಾಗೇಶ್ ಜೆ. ನಾಯಕ ಬರೆದ ‘ಕಾವ್ಯ ಧ್ಯಾನ’, ಪ್ರಜ್ವಲಾ ಶೆಣೈ ಬರೆದ ‘ನಿನಗೆ ನೀನೇ ಬೆಳಕು’, ಮನು ಗುರುಸ್ವಾಮಿ ಬರೆದ ‘ನಿನ್ನ ಇಚ್ಛೆಯಂತೆ ನಡೆವೆ’, ಸಂತೆಬೆನ್ನೂರು ಫೈಜ್ನಟರಾಜ್ ಬರೆದ ‘ಕಣ್ಣ ಬಾಗಿಲಿಗೆ ಬಂದ ನೀರು’, ಎಂ. ಮನೋಹರ ಪೈ ಬರೆದ ‘ಸ್ವಾತಿ ಬೊಂಬಾಟ್’, ಮಂಜುನಾಥ್ ಕುಂಬಾರ್ ಬರೆದ ‘ಗ್ಯಾಂಗ್ ಸ್ಟರ್ ಮತ್ತು ಅವಳು’, ಸಂದೇಶ್ ಎಚ್. ನಾಯ್ಕ್ ಬರೆದ ‘ಇದೊಳ್ಳೆ ವರಸೆ’, ಡಾ. ಪ್ರದೀಪ ಕುಮಾರ ಹೆಬ್ರಿ ಬರೆದ ‘ಮಾಂಡವ್ಯ ದೀಪ’ ಮತ್ತು ‘ಬೆಳ್ದೀಪ’, ಡಾ. ಸುಮತಿ ಪಿ. ಬರೆದ ‘ನಿಲುಕದ ನಕ್ಷತ್ರ’, ಸಿಹಿಜೀವಿ ಸಿ.ಜಿ. ವೆಂಕಟೇಶ್ವರ ಬರೆದ ‘ಸಿಹಿಜೀವಿ ಕಂಡ ಅಂಡಮಾನ್’, ಶುಭಲಕ್ಷ್ಮಿ ಆರ್. ನಾಯಕ್ ಬರೆದ ‘ಅನುಭವ ದೀಪ್ತಿ’, ಶ್ಯಾಮಲಾ ಗೋಪಿನಾಥ್ ಬರೆದ ‘ಈ ಪಯಣದಲ್ಲಿ’, ರಾಜೇಂದ್ರ ಭಟ್. ಕೆ. ಬರೆದ ‘ಸಂಗೀತ ಶರಧಿ’, ಅಕ್ಷತಾ ರಾಜ್ ಪೆರ್ಲ ಬರೆದ ‘ಅಸಂಗತ’, ಎಲ್.ಪಿ. ಕುಲಕರ್ಣಿ ಬರೆದ ‘ವಿಜ್ಞಾನ ವಿಶಾರದರು’ ಪುಸ್ತಕಗಳು ಬಿಡುಗಡೆಯಾದವು.ಕಾಲೇಜು ಸಂಸ್ಥಾಪಕರಾದ ಅಮೃತ್ ರೈ, ಅಶ್ವಥ್ ಎಸ್ ಎಲ್ , ಗಣಪತಿ ಭಟ್, ಗಣನಾಥ್ ಶೆಟ್ಟಿ, ಆದರ್ಶ ಎಂ ಕೆ., ವಿದ್ವಾನ್ ಗಣಪತಿಭಟ್ , ವಿಮಲ್ ರಾಜ್ ಮೊದಲಾದವರು ಇದ್ದರು.ಉಪನ್ಯಾಸಕ ಲೋಹಿತ್ ನಿರೂಪಿಸಿ, ವಂದಿಸಿದರು.