ಮಡಿಕೇರಿ : ರಾಜಾಸೀಟ್ ಉದ್ಯಾನವನದಲ್ಲಿ ಗಾಜಿನ ಸೇತುವೆ ನಿರ್ಮಾಣಕ್ಕೆ ಮುಂದಾಗಿರುವುದು, ಟೂರಿಸಂ ಹೆಸರಿನಲ್ಲಿ ಹಣ ಕೊಳ್ಳೆ ಹೊಡೆಯುವ ದುರುದ್ದೇಶದಿಂದ ಕೂಡಿದೆ ಎಂದು ಆರೋಪಿಸಿರುವ ಮಾಜಿ ಜಿ.ಪಂ ಅಧ್ಯಕ್ಷ ಹಾಗೂ ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆಯ ಮಾಜಿ ರಾಜ್ಯಾಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ ಸ್ಥಳೀಯರು ಇಂತಹ ಯೋಜನೆಯನ್ನು ವಿರೋಧಿಸಬೇಕೆಂದು ಮನವಿ ಮಾಡಿದ್ದಾರೆ.ನಗರದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯಾಗಬೇಕು ಅದಕ್ಕೂ ಒಂದು ಮಿತಿ ಇರಬೇಕು. ಅದು ಸಾರ್ವಜನಿಕರಿಗೆ ಹಾಗೂ ಸ್ಥಳೀಯ ವಾತಾವರಣಕ್ಕೆ ಮಾರಕವಾಗಿರಬಾರದು.
ಜನಬೆಂಬಲವಿಲ್ಲದ ಯೋಜನೆಯನ್ನು ಜಾರಿಗೆ ತರುವುದು ಸರಿಯಲ್ಲ. ಅಪಾಯಕಾರಿ ಜಾಗದಲ್ಲಿ ಜಿಲ್ಲಾಡಳಿತ ಭವನ ನಿರ್ಮಿಸಿದ್ದೇ ದೊಡ್ಡ ದುರಂತ. ಹೀಗಿದ್ದಾಗ ಪ್ರವಾಸೋದ್ಯಮದ ಅಭಿವೃದ್ಧಿ ಹೆಸರಿನಲ್ಲಿ ಮತ್ತೊಮ್ಮೆ ತಪ್ಪು ನಿರ್ಧಾರಕ್ಕೆ ಮುಂದಾಗಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಸುರಕ್ಷಿತವಲ್ಲದ ಇಂತಹ ಯೋಜನೆ ಜಿಲ್ಲೆಯ ಜನರಿಗೆ ಅವಶ್ಯಕತೆಯಿಲ್ಲ. ನಿಸರ್ಗದತ್ತವಾಗಿ ಎಲ್ಲರ ಗಮನ ಸೆಳೆಯುತ್ತಿರುವ ನಮ್ಮ ಜಿಲ್ಲೆಯನ್ನು ಹಾಗೆ ಉಳಿಸುವಂತಾಗಬೇಕು.ಈಗಾಗಲೇ ವಾಹನ ದಟ್ಟಣೆ, ಪಾರ್ಕಿಂಗ್ ಸಮಸ್ಯೆ ಹೆಚ್ಚಿರುವ ಮಡಿಕೇರಿಯಲ್ಲಿ ಗ್ಲಾಸ್ ಬ್ರಿಡ್ಜ್ ನಿರ್ಮಾಣಗೊಂಡರೆ, ಜನ ಮತ್ತಷ್ಟು ಸಂಕಷ್ಟ ಅನುಭವಿಸುವಂತಾಗುತ್ತದೆ. ಆದುದರಿಂದ ಮಡಿಕೇರಿಗೆ ಮಾರಕವಾದ ಗ್ಲಾಸ್ ಬ್ರಿಡ್ಜ್ ನಿರ್ಮಾಣ ಯೋಜನೆಗೆ ಸ್ಥಳೀಯ ಜನತೆ ಕೂಡ ವಿರೋಧ ವ್ಯಕ್ತಪಡಿಸಬೇಕೆಂದು ಎಂದು ಮನವಿ ಮಾಡಿದರು.ಕಳೆದ ಕೆಲ ವರ್ಷಗಳಿಂದ ಜಿಲ್ಲೆಯಲ್ಲಿ ಸಂಭವಿಸಿರುವ ಪ್ರಕೃತಿ ವಿಕೋಪದಂತಹ ಘಟನೆಗಳು ಮತ್ತೆ ಸಂಭವಿಸಿದಂತೆ ಸ್ಥಳೀಯ ಶಾಸಕರು ಚಿಂತಿಸಿ ಕ್ರಮ ಕೈಗೊಳ್ಳುವಂತಾಗಬೇಕು ಎಂದರು.ಮುಡಾ ಮಾಜಿ ಅಧ್ಯಕ್ಷ ರಮೇಶ್ ಹೊಳ್ಳ, ಅಖಿಲ ಭಾರತ ವೀರಶೈವ ಮಹಾಸಭಾದ ಕೊಡಗು ಜಿಲ್ಲಾಧ್ಯಕ್ಷ ಎಚ್.ವಿ.ಶಿವಪ್ಪ, ಪ್ರದಾನ ಕಾರ್ಯದರ್ಶಿ ಶಾಂಭಶಿವ, ಖಜಾಂಚಿ ಉದಯ್ ಕುಮಾರ್, ಮಾಜಿ ಜಿ.ಪಂ ಸದಸ್ಯ ಧರ್ಮಪ್ಪ ಸುದ್ದಿಗೋಷ್ಠಿಯಲ್ಲಿದ್ದರು.
ಅನಧಿಕೃತ ಕಟ್ಟಡಗಳ ತೆರವಿಗೆ ಆಗ್ರಹ::ಮಡಿಕೇರಿಯ ರಾಜರ ಗದ್ದುಗೆಗೆ ಸೇರಿದ ಜಾಗದಲ್ಲಿ ಅನಧಿಕೃತವಾಗಿ ನಿರ್ಮಾಣವಾಗಿರುವ ಮನೆ, ಕಟ್ಟಡಗಳನ್ನು ತೆರವುಗೊಳಿಸಲು ನ್ಯಾಯಾಲಯದ ಆದೇಶವಿದ್ದರೂ ಜಿಲ್ಲಾಡಳಿತ ಕ್ರಮ ಕೈಗೊಳ್ಳಲು ಮುಂದಾಗದಿರುವುದು ವಿಪರ್ಯಾಸ ಎಂದಿರುವ ಮಾಜಿ ಜಿ.ಪಂ ಅಧ್ಯಕ್ಷ ಹಾಗೂ ಗದ್ದುಗೆ ಸಂರಕ್ಷಣಾ ಸಮಿತಿ ಅಧ್ಯಕ್ಷ ರವಿ ಕುಶಾಲಪ್ಪ, ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ತಕ್ಷಣ ತೆರವು ಕಾರ್ಯ ಆರಂಭಿಸುವಂತೆ ಆಗ್ರಹಿಸಿದರು.ರಾಜ್ಯ ಸಂರಕ್ಷಿತ ಸ್ಮಾರಕವಾದ ಮಡಿಕೇರಿಯ ರಾಜರ ಗದ್ದುಗೆಗೆ ಸೇರಿದ 19.86 ಎಕರೆ ಜಾಗದಲ್ಲಿ 1.18 ಎಕರೆ ಜಮೀನು ಒತ್ತುವರಿಯಾಗಿದೆ. ಅಲ್ಲಿ ಅನಧಿಕೃತವಾಗಿ ವಾಸದ ಮನೆ, ಶಾಲೆ, ಹೊಟೇಲ್, ವಸತಿ ನಿಲಯದ ಕಟ್ಟಡಗಳಿವೆ. ಒತ್ತುವರಿ ತೆರವಿಗೆ 2024ರ ನವೆಂಬರ್ 4ರಂದು ಜಿಲ್ಲಾಡಳಿತಕ್ಕೆ ಆದೇಶ ಬಂದಿದೆ. 15 ದಿನದೊಳಗೆ ತೆರವುಗೊಳಿಸುವಂತೆ ಸರ್ಕಾರ ಆದೇಶಿಸಿತ್ತು. ಆದರೆ ಇದುವರೆಗೂ ತೆರವುಗೊಳಿಸದಿರುವುದು ನ್ಯಾಯಾಲಯದ ಆದೇಶದ ಉಲ್ಲಂಘನೆಯಾಗಿದೆ.ಜಿಲ್ಲಾಧಿಕಾರಿಗಳು ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಕೋರ್ಟ್ ಆದೇಶ ಪಾಲಿಸಬೇಕು. ಒತ್ತುವರಿ ತೆರವಿಗೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ ರವಿ ಕುಶಾಲಪ್ಪ, ಕೋರ್ಟ್ ಆದೇಶ ಪಾಲಿಸದೆ ದಿನ ದೂಡಿದಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಸಿದರು.