ಉಡುಪಿ: ಉಡುಪಿ ತಾಲೂಕು ತುಳುವ ಮಹಾಸಭೆಯ ಸಂಚಾಲಕರ ಸಭೆ ನಗರದ ಹಿಂದಿ ಭವನದಲ್ಲಿ ನಡೆಯಿತು. ಸಭೆಯನ್ನು ಕಟೀಲಿನ ತುಳುವರ್ಲ್ಡ್ ಫೌಂಡೇಶನ್ ಕಾರ್ಯದರ್ಶಿ, ಹಿಂದೂಸ್ತಾನ್ ಪೆಟ್ರೋಲಿಯಂ ಲಿಮಿಟೆಡ್‌ನ ನಿವೃತ್ತ ಅಧಿಕಾರಿ ವಸಂತ ರೈ ಕುತ್ತೆತ್ತೂರು ಉದ್ಘಾಟಿಸಿದರು.ಸಭೆಯ ಅಧ್ಯಕ್ಷತೆ ವಹಿಸಿದ ತುಳುವರ್ಲ್ಡ್ ಫೌಂಡೇಶನ್‌ನ ಉಪಾಧ್ಯಕ್ಷೆ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯೆ ತಾರಾ ಉಮೇಶ್ ಆಚಾರ್ಯ ಮಾತನಾಡಿ, ತುಳುವ ಮಹಾಸಭೆಯನ್ನು ಪ್ರತಿಯೊಬ್ಬ ತುಳುವನೂ ಬೆಂಬಲಿಸಬೇಕು. ನಮ್ಮ ಹಿರಿಯರು ಕಟ್ಟಿದ ತುಳುನಾಡಿನ ಕನಸು ನನಸಾಗಲು ಇದು ಅಗತ್ಯ. ಸರ್ಕಾರಗಳಲ್ಲಿ ನಾವು ನಾಡು - ಬೀಡು ಕೇಳಿಲ್ಲ, ನಮ್ಮ ಭಾಷೆಗೆ ಗೌರವ ಕೇಳಿದ್ದೇವೆ. ತುಳುವ ಮಹಾಸಭೆ ಮೂಲಕ ತುಳುನಾಡು ಕಟ್ಟುವ ಸಂಕಲ್ಪ ಮಾಡೋಣ ಎಂದು ಹೇಳಿದರು.ತುಳುವರ್ಲ್ಡ್ ಫೌಂಡೇಶನ್ ನಿರ್ದೇಶಕ ಡಾ. ರಾಜೇಶ್ ಆಳ್ವ ಬದಿಯಡ್ಕ, ಪ್ರಧಾನ ಸಂಚಾಲಕ ಪ್ರಮೋದ್ ಸಪ್ರೆ, ಮಂಗಳೂರು ತಾಲೂಕು ತುಳುವ ಮಹಾಸಭೆ ಸಂಚಾಲಕ ಅರವಿಂದ ಬೆಳ್ಚಡ, ಕಾರ್ಯನಿರ್ವಾಹಕ ಸಂಚಾಲಕರಾದ ರಾಘವೇಂದ್ರ ಶೆಟ್ಟಿ ಅತ್ರಾಡಿ ಮತ್ತು ಹರಿಪ್ರಸಾದ್ ರೈ ಜಿ.ಕೆ. ಉಪಸ್ಥಿತರಿದ್ದರು.ಸಭೆಯಲ್ಲಿದ್ದ ಉಡುಪಿ ತಾಲೂಕು ಸಂಚಾಲಕ ಸುನಿಲ್ ಸಾಲಿಯಾನ್, ವೈದ್ಯರತ್ನ ಭಾಸ್ಕರ ಪೂಜಾರಿ, ಅಶೋಕ್ ಶೆಟ್ಟಿ ಉಡುಪಿ, ರಕ್ಷಿತ್ ಆಚಾರ್ಯ, ಮಾಲತಿ ಆಚಾರ್ಯ, ಆದಿತ್ಯ ಭಾಸ್ಕರ್, ಶಿವಪ್ರಸಾದ್ ಆಚಾರ್ಯ ಪೆರ್ಡೂರು, ಉಲ್ಲಾಸ್ ಮೂರೂರು, ರಂಜಿತ್ ಕಾರ್ಕಳ, ಪ್ರಶಾಂತ್ ಹಿರಿಯಡ್ಕ ಮೊದಲಾದವರು ಸಲಹೆ ಸೂಚನೆಗಳನ್ನು ನೀಡಿದರು.ತುಳುವ ಮಹಾಸಭೆಯ ಉಡುಪಿ ತಾಲೂಕು ಪ್ರಧಾನ ಸಂಚಾಲಕರಾಗಿರುವ ನಾಟಿ ವೈದ್ಯ ವಿಶ್ವನಾಥ ಆಚಾರ್ಯ ಸ್ವಾಗತಿಸಿದರು. ಸೌಮ್ಯರಾಣಿ ವಿ. ಆಚಾರ್ಯ ಪೆರ್ಡೂರು ಕಾರ್ಯಕ್ರಮ ನಿರ್ವಹಿಸಿದರು.ಸಭೆಯಲ್ಲಿ ಅ.6ರಿಂದ 11ರವರೆಗೆ ಬಾರ್ಕೂರಿನ ತುಳುವೇಶ್ವರ ದೇವಸ್ಥಾನದಲ್ಲಿ ನಡೆಯುವ ಅಷ್ಟಮಂಗಲ ಪ್ರಶ್ನಾಚಿಂತನೆಯಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳುವಂತೆ ಕಾರ್ಯಪ್ರವೃತ್ತರಾಗಲು ನಿರ್ಧರಿಸಲಾಯಿತು.