ವರ್ಷವಿಡೀ ಆನೆ, ಹುಲಿ, ಮಾದಪ್ಪನದ್ದೇ ದರ್ಬಾರು

KannadaprabhaNewsNetwork | Published : Dec 31, 2023 1:31 AM

ಸಾರಾಂಶ

2023 ವರ್ಷ ಮುಗಿದು 2024ಕ್ಕೆ ಕಾಲಿಡುತ್ತಿದ್ದು 2023 ರ ವರ್ಷ ಗಡಿಜಿಲ್ಲೆಯಲ್ಲಿ ಹಲವು ಪ್ರಮುಖ ರಾಜಕೀಯ ಪಲ್ಲಟಗಳಾಗಿವೆ, ಪ್ರಧಾನಿ ಭೇಟಿ ಸೇರಿ ಹುಲಿ, ಆನೆಗಳ‌ ಸಂಖ್ಯೆಯಲ್ಲಿ ಚಾಮರಾಜನಗರ ಮೊದಲ ಸ್ಥಾನ ಪಡೆಯುವ ಮೂಲಕ ಹಲವು ಮಹತ್ವದ ಸಂಗತಿಗಳು ನಡೆದಿವೆ.

ಕನ್ನಡಪ್ರಭ ವಾರ್ತೆ ಚಾಮರಾಜನಗರ 2023 ವರ್ಷ ಮುಗಿದು 2024ಕ್ಕೆ ಕಾಲಿಡುತ್ತಿದ್ದು 2023 ರ ವರ್ಷ ಗಡಿಜಿಲ್ಲೆಯಲ್ಲಿ ಹಲವು ಪ್ರಮುಖ ರಾಜಕೀಯ ಪಲ್ಲಟಗಳಾಗಿವೆ, ಪ್ರಧಾನಿ ಭೇಟಿ ಸೇರಿ ಹುಲಿ, ಆನೆಗಳ‌ ಸಂಖ್ಯೆಯಲ್ಲಿ ಚಾಮರಾಜನಗರ ಮೊದಲ ಸ್ಥಾನ ಪಡೆಯುವ ಮೂಲಕ ಹಲವು ಮಹತ್ವದ ಸಂಗತಿಗಳು ನಡೆದಿವೆ.

ಚಾಮರಾಜನಗರ ವಿವಿ ಆರಂಭ:

ಬಿಜೆಪಿ ಸರ್ಕಾರ 2022ರ ಬಜೆಟ್‌ನಲ್ಲಿ ಘೋಷಿಸಿದ್ದ ಪ್ರತ್ಯೇಕ ವಿವಿ ಸ್ಧಾಪನೆ ಆದೇಶ ವರ್ಷಾರಂಭದಲ್ಲೇ ಬಂದಿತು. ಮಾ. 20ರಂದು ಕುಲಪತಿಯಾಗಿ ಪ್ರೊ. ಎಂ.ಆರ್‌. ಗಂಗಾಧರ್‌ ನೇಮಕವಾದರು.

ಕಾಂಗ್ರೆಸ್ ಜಯಭೇರಿ:ಜಿಲ್ಲೆಯಲ್ಲಿ ಚಾಮರಾಜನಗರ, ಗುಂಡ್ಲುಪೇಟೆ, ಹನೂರು ಹಾಗೂ ಕೊಳ್ಳೇಗಾಲ ಎಂಬ 4 ವಿಧಾನಸಭಾ ಕ್ಷೇತ್ರಗಳಿದ್ದು 4 ರಲ್ಲಿ ಮೂರು ಕ್ಷೇತ್ರಗಳಲ್ಲಿ ಈ ಬಾರಿ ಕಾಂಗ್ರೆಸ್ ಜಯಭೇರಿ ಬಾರಿಸಿದರೇ ಹನೂರಿನಲ್ಲಿ ಜೆಡಿಎಸ್‌ನ ಎಂ.ಆರ್. ಮಂಜುನಾಥ್ ಗೆದ್ದು ನಗೆ ಬೀರಿದರು. ಗುಂಡ್ಲುಪೇಟೆ ಕ್ಷೇತ್ರದಲ್ಲಿ ಗಣೇಶ್ ಪ್ರಸಾದ್‌, ಹನೂರಿನಲ್ಲಿ ಮಂಜುನಾಥ್ ಮೊದಲ ಬಾರಿ ಶಾಸಕರಾದರೇ ಚಾಮರಾಜನಗರದಲ್ಲಿ ಬಿಜೆಪಿ ಪ್ರಬಲ ನಾಯಕ ಸೋಮಣ್ಣ ಅವರ ವಿರುದ್ಧ ಸಿ.ಪುಟ್ಟರಂಗಶೆಟ್ಟಿ ಸತತ 4ನೇ ಬಾರಿ ವಿಜಯಮಾಲೆ ಧರಿಸಿದರು.‌ ಕೊಳ್ಳೇಗಾಲ ಕ್ಷೇತ್ರದಿಂದ ಎ.ಆರ್‌. ಕೃಷ್ಣಮೂರ್ತಿ19 ವರ್ಷದ ಬಳಿಕ ಶಾಸಕರಾದರು.

ಶಾ, ರಾಗಾ, ನಡ್ಡಾ ಪ್ರಚಾರದ ರಂಗು:

2023 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರದ ರಂಗು ಜೋರಾಗಿತ್ತು.‌ ಚುನಾವಣೆ ಯಾತ್ರೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮಲೆ ಮಹದೇಶ್ವರ ಬೆಟ್ಟದಿಂದ ಚಾಲನೆ ಕೊಟ್ಟರು. ಇನ್ನು, ಚುನಾವಣಾ ಪ್ರಚಾರದಲ್ಲಿ ಅಮಿತ್ ಶಾ , ನಟ ಸುದೀಪ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಜಿಲ್ಲೆಗೆ ಭೇಟಿ ಕೊಟ್ಟು ಅಬ್ಬರದ ಪ್ರಚಾರ ನಡೆಸಿದ್ದರು.

ಧ್ರುವನಾರಾಯಣ ನಿಧನ:

ರಾಜಕೀಯದಲ್ಲಿ ತಮ್ಮದೇ ಛಾಪು‌ ಮೂಡಿಸಿದ್ದ, ರಾಷ್ಟ್ರ ರಾಜಕಾರಣದಿಂದ ರಾಜ್ಯ ರಾಜಕೀಯದತ್ತ ಹೊರಳಿದ್ದ ಆರ್.ಧ್ರುವನಾರಾಯಣ ಅಕಾಲಿಕವಾಗಿ ನಿಧನ ಹೊಂದಿದರು. ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇದ್ದ ಹೊತ್ತಲ್ಲಿ ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಓರ್ವ ಉತ್ತಮ ಸಂಘಟನಾ ಚತುರನನ್ನು ಕಳೆದುಕೊಂಡಿತು. ಸದ್ಯ, ಧ್ರುವನಾರಾಯಣ ಅವರ ಪುತ್ರ ದರ್ಶನ್ ಜನರ ಒತ್ತಾಯಕ್ಕೆ ಮಣಿದು ನಂಜನಗೂಡಿನಲ್ಲಿ ಸ್ಪರ್ಧೆ ಮಾಡಿ ಶಾಸಕರಾದರು. ಜಿಲ್ಲೆಯ ಹಿರಿಯ ಸಾಹಿತಿ ಮಲೆಯೂರು ಗುರುಸ್ವಾಮಿ ಅನಾರೋಗ್ಯದಿಂದ ಮಾ. 9ರಂದು ಮೈಸೂರಿನಲ್ಲಿ ನಿಧನರಾದರು. ಇಬ್ಬರು ಸ್ವಾತಂತ್ರ್ಯ ಹೋರಾಟಗಾರರ ನಿಧನ:

ಚಾಮರಾಜನಗರ ತಾಲೂಕಿನ ಕರಿನಂಜನಪುರ ನಿವಾಸಿ ಸ್ವಾತಂತ್ರ್ಯಹೋರಾಟಗಾರ ಕೆ.ಎಂ. ತೋಟಪ್ಪ (92) ಫೆ. 12 ರಂದು ಮತ್ತು ಸ್ವಾತಂತ್ರ್ಯ ಹೋರಾಟಗಾರ ಶ್ರೀನಿವಾಸರಾವ್‌ (96) ಅವರು ಸೆ. 13 ರಂದು ನಿಧನರಾದರು.

ತರಬೇತಿ ವಿಮಾನ ಪತನ:

ಭಾರತೀಯ ವಾಯುಪಡೆಯ ಕಿರಣ್‌ ತರಬೇತಿ ವಿಮಾನವೊಂದು ಜೂ. 1ರಂದು ಚಾಮರಾಜನಗರ ತಾಲೂಕಿನ ಸಪ್ಪನಯ್ಯನಪುರದಲ್ಲಿ ಪತನಗೊಂಡಿತು. ವಿಮಾನದಲ್ಲಿದ್ದ ಇಬ್ಬರು ಪೈಲೆಟ್‌ಗಳು ವಿಮಾನ ನಿಯಂತ್ರಣ ತಪ್ಪುತ್ತಲೇ ಪ್ಯಾರಾಚೂಟ್‌ ಮೂಲಕ ಸುರಕ್ಷಿತವಾಗಿ ಕೆಳಕ್ಕೆ ಇಳಿದರು. ಜಿಲ್ಲೆಯ ಇಬ್ಬರ ಬಗ್ಗೆ ಮೋದಿ ಮೆಚ್ಚುಗೆ:

ಏಕತಾ ದಿನದ ಅಂಗವಾಗಿ ಕೇಂದ್ರ ಸರ್ಕಾರ ಆಯೋಜಿಸಿದ್ದ ಜೋಗುಳ ಹಾಡು ರಚನಾ ಸ್ಪರ್ಧೆಯಲ್ಲಿ ಕೊಳ್ಳೇಗಾಲದ ಸಾಹಿತಿ ಮಂಜುನಾಥ್‌ ಬಾಳಗುಣಸೆ ಅವರಿಗೆ ಮೊದಲ ಬಹುಮಾನ ಲಭಿಸಿತು. ಉಮ್ಮತ್ತೂರಿನಲ್ಲಿ ಬಾಳೆ ದಿಂಡಿನ ನಾರಿನಿಂದ ಕರಕುಶಲ ವಸ್ತುಗಳನ್ನು ತಯಾರಿಸುವ ಎಂಟೆಕ್‌ ಪದವೀಧರೆ ವರ್ಷಾ ಅವರ ಸಾಧನೆಯನ್ನು ಪ್ರಧಾನಿ ಮೋದಿ ಅವರು ಆಕಾಶವಾಣಿಯ ಮನದಮಾತು ಕಾರ್ಯಕ್ರಮದಲ್ಲಿ ಘೋಷಿಸಿ, ಮೆಚ್ಚುಗೆ ಸೂಚಿಸಿದರು.

ಇಬ್ಬರಿಗೆ ರಾಜ್ಯೋತ್ಸವ ಪ್ರಶಸ್ತಿ:

2023ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಜಿಲ್ಲೆಯ ಇಬ್ಬರು ಸಾಧಕರು ಆಯ್ಕೆಯಾದರು. ಸಾಹಿತ್ಯ ಕ್ಷೇತ್ರದಲ್ಲಿ ಗುಂಡ್ಲುಪೇಟೆ ತಾಲೂಕಿನ ಪ್ರೊ. ಸಿ. ನಾಗಣ್ಣ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಕೊಳ್ಳೇಗಾಲದವರಾದ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಧೆಯಲ್ಲಿ (ಐಐಎಸ್‌ಸಿ) ಸೇವೆ ಸಲ್ಲಿಸುತ್ತಿರುವ ಪ್ರೊ. ಗೋಪಾಲನ್‌ ಜಗದೀಶ್‌ ಭಾಜನರಾದರು.

ಹುಲಿ-ಆನೆಗಳ ಬೀಡಾದ ಗಡಿಜಿಲ್ಲೆ:

2023 ರಲ್ಲಿ ಹುಲಿ ಹಾಗೂ ಆನೆ ಗಣತಿ ವರದಿ ಬಿಡುಗಡೆಯಾಯಿತು. ಅತ್ಯಧಿಕ ಸಂಖ್ಯೆಯಲ್ಲಿ ಕರ್ನಾಟಕದಲ್ಲಿ ಹುಲಿ ಮತ್ತು ಆನೆಗಳ ಸಂತತಿ ಇರುವುದು ಚಾಮರಾಜನಗರದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಎಂಬುದಕ್ಕೆ ಪಾತ್ರವಾಯಿತು.

ಕಾವೇರಿ ಕಿಚ್ಚು- ಬರಪಟ್ಟಿಗೆ ಗಡಿಜಿಲ್ಲೆ:

ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸುವುದನ್ನು ಖಂಡಿಸಿ ರೈತ ಸಂಘ, ಕನ್ನಡಪರ ಹೋರಾಟಗಾರರು ಬೀದಿಗಿಳಿದು ಆಕ್ರೋಶ ಹೊರಹಾಕಿದರು‌. ಕಾವೇರಿ ಕಿಚ್ಚು ಹೊರಹಾಕಲು ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಚಾಮರಾಜನಗರ ಜಿಲ್ಲೆ ಸಂಪೂರ್ಣ ಸ್ತಬ್ಧವಾಗಿ ಬಂದ್ ಗೆ ಉತ್ತಮ ಬೆಂಬಲ ವ್ಯಕ್ತವಾಯಿತು. ಕನ್ನಡಪರ ಹೋರಾಟಗಾರರು ನಿರಂತರವಾಗಿ 117 ದಿನ ಪ್ರತಿಭಟನೆ ನಡೆಸಿ ಅಕ್ರೋಶ ಹೊರಹಾಕುತ್ತಿದ್ದಾರೆ.ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬಾರದ ಹಿನ್ನೆಲೆ ಚಾಮರಾಜನಗರ ಜಿಲ್ಲೆಯ 5 ತಾಲೂಕುಗಳನ್ನು ಸರ್ಕಾರ ಬರಪಟ್ಟಿಗೆ ಸೇರಿಸಿದೆ. ಬಿಜೆಪಿಯೂ ಜಿಲ್ಲೆಯ ವಿವಿಧ ಭಾಗಗಳಿಗೆ ಭೇಟಿ ನೀಡಿ ಬರ ಅಧ್ಯಯನ ನಡೆಸಿತು.

ಚಾಮರಾಜನಗರ ಜಿಲ್ಲೆಯಲ್ಲಿ ಈ ವರ್ಷ ಹಲವು ಸಿಹಿ- ಕೆಲವು ಕಹಿ ಘಟನೆಗಳಿಗೆ ಸಾಕ್ಷಿಯಾಯಿತು.

ಪಿಎಂ ಮೋದಿ‌ ಸಫಾರಿ

ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಯೋಜನೆಗೆ 50 ವರ್ಷ ತುಂಬಿದ ಅಂಗವಾಗಿ ಕೇಂದ್ರದ ಅರಣ್ಯ ಸಚಿವ ಭೂಪೇಂದರ್‌ ಯಾದವ್‌ ಅವರು ಜ.3 ರಂದು ಯುವ ಮಿತ್ರ ಯೋಜನೆಗೆ ಚಾಲನೆ ನೀಡಿದರು. ಭಾರತದ ಜನಪ್ರಿಯ ರಕ್ಷಿತಾರಣ್ಯಗಳಲ್ಲಿ‌ ಒಂದಾದ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ನರೇಂದ್ರ ಮೋದಿ ಸಫಾರಿ ನಡೆಸುವ ಮೂಲಕ ಬಂಡೀಪುರಕ್ಕೆ ಹೊಸ ಮೆರುಗನ್ನು ತಂದುಕೊಟ್ಟರು. ಏ.9 ರಂದು ವಿಶೇಷ ಹೆಲಿಕಾಪ್ಟರ್​​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಬಂಡೀಪುರಕ್ಕೆ ಆಗಮಿಸಿ ಟೈಗರ್ ರಿಸರ್ವ್ ಲೋಗೋ ಇರುವ ಜಾಕೆಟ್, ಅರಣ್ಯ ಇಲಾಖೆ ಸಮವಸ್ತ್ರ ಹೋಲುವ ಟೀ ಶರ್ಟ್​​ ಅನ್ನು ಮೋದಿ ಧರಿಸುವ ಮೂಲಕ ಮಿಂಚಿದ್ದರು. ಒಂದೂವರೆ ತಾಸು ಬಂಡೀಪುರ ಕಾಡಲ್ಲಿ ಸಫಾರಿ ನಡೆಸಿ ಹಲವು ಫೋಟೋಗಳನ್ನು ಕ್ಲಿಕ್ಕಿಸಿದ್ದರು.

ಮಾದಪ್ಪನ ಪ್ರತಿಮೆ ಉದ್ಘಾಟನೆ:

ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳ ಮಲೆ ಮಹದೇಶ್ವರ ಬೆಟ್ಟದ ದೀಪದ ಗಿರಿ ಒಡ್ಡುವಿನಲ್ಲಿ ನಿರ್ಮಿಸಲಾಗಿದ್ದ ಮಲೆಮಹದೇಶ್ವರ ಸ್ವಾಮೀಜಿಯ 108 ಅಡಿ ಎತ್ತರದ ಪ್ರತಿಮೆಯನ್ನು ಮುಖ್ಯಮಂತ್ರಿಯಾಗಿದ್ದ ಬಸವರಾಜಬೊಮ್ಮಾಯಿ ಅವರು ಮಾ.18ರಂದು ಉದ್ಘಾಟಿಸಿದರು. ಅಂದೇ ಮಾದಪ್ಪನ ಹೊಸ ಬೆಳ್ಳಿ ರಥದ ಸಮರ್ಪಣೆ ಕೂಡ ನಡೆಯಿತು.

Share this article