ಪಂಚ ಗ್ಯಾರಂಟಿಯಿಂದ ಅರ್ಹ ಫಲಾನುಭವಿ ವಂಚಿತರಾಗಬಾರದು: ಬಿ.ಬಿ.ಅಸೂಟಿ

KannadaprabhaNewsNetwork |  
Published : Sep 22, 2026, 02:15 AM IST
ಸಭೆಯನ್ನು ಉದ್ದೇಶಿಸಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ ಮಾತನಾಡಿದರು. | Kannada Prabha

ಸಾರಾಂಶ

ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳ ಸೌಲಭ್ಯದಿಂದ ಯಾವುದೇ ಅರ್ಹ ಫಲಾನುಭವಿ ವಂಚಿತರಾಗದಂತೆ ಅಧಿಕಾರಿಗಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು.

ಕನ್ನಡಪ್ರಭ ವಾರ್ತೆ ಗದಗ

ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳ ಸೌಲಭ್ಯದಿಂದ ಯಾವುದೇ ಅರ್ಹ ಫಲಾನುಭವಿ ವಂಚಿತರಾಗದಂತೆ ಅಧಿಕಾರಿಗಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ ಹೇಳಿದರು.

ಸೋಮವಾರ ಗದಗ ಜಿಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬಡವರ ಆರ್ಥಿಕ ಸಬಲೀಕರಣಕ್ಕಾಗಿ ಜಾರಿಗೆ ತಂದಿರುವ ಈ ಯೋಜನೆಗಳು ನಿಗದಿತ ಸಮಯದಲ್ಲಿ ತಲುಪಬೇಕು. ಗೃಹಲಕ್ಷ್ಮಿ ಯೋಜನೆಯು ಮಹಿಳೆಯರ ಸ್ವಾವಲಂಬನೆಗೆ ಸಹಕಾರಿಯಾಗಿದ್ದು, ಅರ್ಹರಿಗೆ ತ್ವರಿತವಾಗಿ ತಲುಪಿಸಲು ಶ್ರಮಿಸಬೇಕು. ನಗರದ ಹಳೇ ಹಾಗೂ ಹೊಸ ಬಸ್ ನಿಲ್ದಾಣಗಳು ಸೇರಿ ತಾಲೂಕು ಕೇಂದ್ರಗಳ ಬಸ್ ನಿಲ್ದಾಣಗಳಲ್ಲಿ ಸ್ವಚ್ಛತೆ, ಅಂಗವಿಕಲರಿಗೆ ಪ್ರತ್ಯೇಕ ಶೌಚಾಲಯ ಹಾಗೂ ಮಹಿಳೆಯರಿಗೆ ವಿಶ್ರಾಂತಿ ಕೊಠಡಿಯ ಮೂಲಸೌಕರ್ಯಗಳನ್ನು ಕಲ್ಪಿಸಬೇಕು ಎಂದರು.

ಪ್ರಾಧಿಕಾರದ ಸದಸ್ಯ ಅಶೋಕ ಮಂದಾಲಿ ಮಾತನಾಡಿ, ಐತಿಹಾಸಿಕ ಲಕ್ಕುಂಡಿಗೆ ಪ್ರವಾಸೋದ್ಯಮ ಉದ್ದೇಶಕ್ಕಾಗಿ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಯೋಜನೆಗಳು ಫಲಾನುಭವಿಗಳಿಗೆ ತಲುಪುವಲ್ಲಿ ವಿಳಂಬವಾಗಬಾರದು ಎಂದರು. ಜಿಪಂ ಸಿಇಒ ಮುಕುಲ್ ಜೈನ್ ಮಾತನಾಡಿ, ಯೋಜನೆಗಳ ಮುಖ್ಯಸ್ಥರು ಸಮರ್ಪಕ ಅನುಷ್ಠಾನದ ಕುರಿತು ಪರಾಮರ್ಶೆ ನಡೆಸಿ, ಜನಸಾಮಾನ್ಯರ ಆರ್ಥಿಕ ಬೆಳವಣಿಗೆಗೆ ನೆರವಾಗಬೇಕು ಎಂದರು.

ಸಭೆಯಲ್ಲಿ ಹೊಳೆಆಲೂರು ಬಸ್ ನಿಲ್ದಾಣಕ್ಕೆ ಆಲೂರು ವೆಂಕಟರಾಯರ ಬಸ್ ನಿಲ್ದಾಣ ಎಂದು ನಾಮಕರಣ ಮಾಡುವ ಬಗ್ಗೆ ಹಾಗೂ ರಾಮಗಿರಿ ಮತ್ತು ಮಾಗಡಿ ಪಂಚಾಯಿತಿ ವ್ಯಾಪ್ತಿಯಲ್ಲಿ ವಿದ್ಯುತ್ ಕಂಬಗಳ ವ್ಯವಸ್ಥೆ ಕಲ್ಪಿಸಲು ಚರ್ಚಿಸಲಾಯಿತು. ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಶರಣು ಗೋಗೇರಿ ಯುವಜನತೆಯನ್ನು ಸೃಜನಶೀಲ ಕಾರ್ಯಗಳಲ್ಲಿ ತೊಡಗಿಸಲು ಭಾರತ ಜೋಡೋ ಯುವ ಸಂಘಗಳ ಸ್ಥಾಪನೆಗೆ ಸಮಿತಿ ಸದಸ್ಯರ ಸಹಕಾರ ಕೋರಿದರು.

ಸಭೆಯಲ್ಲಿ ಪ್ರಾಧಿಕಾರದ ಉಪಾಧ್ಯಕ್ಷೆ ನೀಲಮ್ಮ ಬೋಳನವರ, ಪಿ.ಬಿ. ಅಗಳವಾಡಿ, ದೀಪಕ ಲಮಾಣಿ, ಫಕ್ರುಸಾಬ ಚಿಕ್ಕಮಣ್ಣೂರ, ಸದಸ್ಯರಾದ ಶರೀಫ್ ಬಿಳೆಯಲಿ, ನಾಗರಾಜ ಮಡಿವಾಳರ, ವಿವೇಕ ಯಾವಗಲ್, ದೇವಪ್ಪ ಮೋರನಾಳ, ಹನಮರಡ್ಡಿ ಮಲ್ಲಪ್ಪ ಮೇಟಿ, ಈಶಣ್ಣ ಹುಣಸೀಕಟ್ಟಿ, ಗೀತಾ ಬೀರಣ್ಣವರ, ವೀರಯ್ಯ ಮಠಪತಿ, ಜಿಪಂ ಯೋಜನಾ ನಿರ್ದೇಶಕ ಎಂ.ವಿ. ಚಳಗೇರಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.ಯೋಜನೆಗಳ ಪ್ರಗತಿ ವಿವರ

ಗೃಹಲಕ್ಷ್ಮಿ ನೊಂದಣಿಯಾದ 263579 ಅರ್ಜಿಗಳಲ್ಲಿ 242804 ಅರ್ಜಿಗಳಿಗೆ ಮಂಜೂರಾತಿ ನೀಡಲಾಗಿದ್ದು, ಶೇ. 92.08ರಷ್ಟು ಸಾಧನೆಯಾಗಿದೆ.

ಶಕ್ತಿ ಯೋಜನೆಯಡಿ ವಾಕರಸಾ ಸಂಸ್ಥೆಯಿಂದ 1769.06 ಲಕ್ಷ ಮಹಿಳಾ ಪ್ರಯಾಣಿಕರು ಸಂಚರಿಸಿದ್ದು, 60728.67 ಲಕ್ಷ ಮೌಲ್ಯದ ಟಿಕೆಟ್ ಆದಾಯವಾಗಿದೆ. ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಜಿಲ್ಲೆಯ 257656 ಪಡಿತರ ಚೀಟಿದಾರರಿಗೆ 35900 ಕ್ವಿಂಟಲ್ ಅಕ್ಕಿ ವಿತರಿಸಲಾಗಿದೆ. ಯುವನಿಧಿ ಸ್ವೀಕೃತಗೊಂಡ 9568 ಅರ್ಜಿಗಳ ಪೈಕಿ 8282 ಅರ್ಹ ನಿರುದ್ಯೋಗಿಗಳಿಗೆ ಡಿಬಿಟಿ ಮೂಲಕ 25.74 ಕೋಟಿ ವರ್ಗಾಯಿಸಲಾಗಿದೆ. ಗೃಹಜ್ಯೋತಿ ಯೋಜನೆಯಡಿ 275318 ಸ್ಥಾವರಗಳು ನೊಂದಣಿಯಾಗಿದ್ದು ಶೇ. 98.51 ರಷ್ಟು ಪ್ರಗತಿ ದಾಖಲಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೋದಿ ಜನ್ಮದಿನ: ನಾಳೆ ಬೃಹತ್ ರಕ್ತದಾನ ಶಿಬಿರ
ಸಮಾಜಮುಖಿ ಚಿಂತನೆ, ಅಭಿವೃದ್ಧಿಗೆ ಸದಾಕಾಲ ಮನ್ನಣೆ: ಸಂಸದ ಬೊಮ್ಮಾಯಿ