ಅಸಮಾನತೆ ಹೋಗಲಾಡಿಸಿ ಸಮಾನತೆ ಹಾದಿಯಲ್ಲಿ ನಡೆಯೋಣ: ಡಿಸಿ ದಿವಾಕರ

KannadaprabhaNewsNetwork | Published : Aug 21, 2024 12:43 AM

ಸಾರಾಂಶ

ಹುಟ್ಟುತ್ತಲೆ ಅರಸು ಮನೆತನದಿಂದ ಬಂದವರಾದರೂ ಬಡತನವನ್ನು ಕಣ್ಣಾರೆ ಕಂಡವರು.

ಹೊಸಪೇಟೆ: ಸಮಾಜದಲ್ಲಿ ಬೇರೂರಿರುವ ಸಾಮಾಜಿಕ ಪಿಡುಗುಗಳನ್ನು ತೊಲಗಿಸಿ ಸಮಾನತೆಯ ಹಾದಿಯಲ್ಲಿ ನಡೆಯೋಣ ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್‌ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಡಿ.ದೇವರಾಜ ಅರಸು ಅವರ 109ನೇ ಜನ್ಮ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಕರ್ನಾಟಕ ಕಂಡ ಧೀಮಂತ ನಾಯಕ. ಹೇಗೆ ಡಾ.ಬಿ.ಆರ್.ಆಂಬೆಡ್ಕರ್ ಅವರು ದೇಶಕ್ಕೆ ಅಪಾರ ಕೊಡುಗೆ ನೀಡಿದ್ದಾರೋ ಹಾಗೆ ಡಿ.ದೇವರಾಜ ಅರಸು ರವರು ಕರ್ನಾಟಕ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಎರಡು ಬಾರಿ ಮುಖ್ಯಮಂತ್ರಿಗಳಾಗಿದ್ದ, ಅವರು ಸಣ್ಣ ಗ್ರಾಮದಿಂದ ಬಂದಂತವರು, ಹುಟ್ಟುತ್ತಲೆ ಅರಸು ಮನೆತನದಿಂದ ಬಂದವರಾದರೂ ಬಡತನವನ್ನು ಕಣ್ಣಾರೆ ಕಂಡವರು. ಡಿ.ದೇವರಾಜ ಅರಸು ಅವರು ಬಡವರ ಬಗ್ಗೆ ಅಪಾರ ಕಾಳಜಿ ಹೊಂದಿದವರಾಗಿದ್ದರು. ಚಳವಳಿಗಳ ಮೂಲಕ ಸಾಮಾಜದಲ್ಲಿನ ಪಿಡಗುಗಳನ್ನು ಹೋಗಲಾಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು. ಇಂತಹ ಮಹಾನ್ ವ್ಯಕ್ತಿಗಳ ಹಾದಿಯಲ್ಲಿ ನಾವೆಲ್ಲ ನಡೆಯೋಣ ಎಂದು ಹೇಳಿದರು.

ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷರು ಹಾಗೂ ನಿವೃತ್ತ ಉಪನ್ಯಾಸಕ ವೈ.ಯಮುನೇಶ ವಿಶೇಷ ಉಪನ್ಯಾಸ ನೀಡಿ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಬಹಳ ಕೊಡುಗೆ ನೀಡಿದ್ದಾರೆ. ಸಮಾಜದ ಏಳಿಗೆಗೆ ಅಪಾರ ಕಾಳಜಿ ಹೊಂದಿದ್ದ ಇವರು 1972 ರಿಂದ 1977ರವರೆಗೆ ಹಾಗೂ 1978-1980 ವರೆಗೆ ಎರಡು ಆವಧಿಗೆ ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿಗಳಾಗಿದ್ದರು. ಡಿ.ದೇವರಾಜ ಅರಸು ಅವರು ತಮ್ಮ ಅವಧಿಯಲ್ಲಿ ರಾಜ್ಯದ ಅಭಿವೃದ್ಧಿಗೆ, ಕರ್ನಾಟಕದಲ್ಲಿ ತುಳಿತಕ್ಕೊಳಗಾದ ಜಾತಿಗಳು ಮತ್ತು ಹಿಂದುಳಿದ ವರ್ಗಗಳನ್ನು ಗುರಿಯಾಗಿಸಿಕೊಂಡು ಅವರ ಸುಧಾರಣೆಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದರು ಎಂದರು.

2023-24ನೇ ಸಾಲಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳಲ್ಲಿನ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಎಸ್‌ಎಸ್‌ಎಲ್‌ಸಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಾದ ಎಲ್.ದ್ರಾವಿಡ್ ನಾಯ್ಕ ಪ್ರಥಮ ಸ್ಥಾನ, ಪವಿತ್ರಾ ಪಿ.ಎಸ್. ದ್ವಿತೀಯ ಸ್ಥಾನ, ಸುನೀತಾ ತೃತೀಯ ಸ್ಥಾನ ಹಾಗೂ ಪಿಯುಸಿ ವಿಭಾಗದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಾದ ಅಕ್ಷತಾ ಪ್ರಥಮ ಸ್ಥಾನ, ಆರ್.ಎಸ್.ಶಾಂತಿ ದ್ವಿತೀಯ ಸ್ಥಾನ ಹಾಗೂ ಗಂಗಮ್ಮ ತೃತೀಯ ಸ್ಥಾನ ಮತು ವಿಜ್ಞಾನ ವಿಭಾಗದಲ್ಲಿ ಸಾಧನೆ ಮಾಡಿದ ವಿರೇಶ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಜಿಪಂ ಉಪ ಕಾರ್ಯದರ್ಶಿ ಭೀಮಪ್ಪ ಲಾಳಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ರಾಮಚಂದ್ರಪ್ಪ, ಜಿಲ್ಲಾ ಕಾರ್ಮಿಕ ಅಧಿಕಾರಿ ಸೂರಪ್ಪ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ಸಂಘ-ಸಂಸ್ಥೆಗಳ ಮುಖಂಡರು ಮತ್ತು ಶಾಲಾ ವಿದ್ಯಾರ್ಥಿಗಳು ಇದ್ದರು.

Share this article