ಗ್ರಾಮೀಣ ಪ್ರದೇಶಗಳಲ್ಲೂ ಅಲ್ಲಲ್ಲಿ ರ್ಯಾ.ಗಿಂಗ್ ನಡೆಯುತ್ತಿರುವ ಬಗ್ಗೆ ವರದಿಯಾಗುತ್ತಿರುವುದು ಅತೀವ ಬೇಸರದ ಸಂಗತಿ ಎಂದು ಡಾ. ರೇವತಿ ರಾವ್ ಹೇಳಿದರು.
ಕುಮಟಾ: ಇಂದಿನ ಶೈಕ್ಷಣಿಕ ಕ್ಷೇತ್ರದಲ್ಲಿ ರ್‍ಯಾಗಿಂಗ್ ಎನ್ನುವುದು ದೊಡ್ಡ ಪಿಡುಗಾಗಿ ಪರಿಣಮಿಸಿದ್ದು, ಈ ಕುರಿತು ಗಂಭೀರವಾಗಿ ಚಿಂತಿಸಿ ರ್‍ಯಾಗಿಂಗ್ ಪಿಡುಗನ್ನು ತೊಲಗಿಸಿ ಸ್ವಸ್ಥ ಶೈಕ್ಷಣಿಕ ವಾತಾವರಣ ನಿರ್ಮಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಡಾ. ಬಾಳಿಗಾ ವಾಣಿಜ್ಯ ಕಾಲೇಜಿನ ಪ್ರಾಚಾರ್ಯೆ ಡಾ. ರೇವತಿ ರಾವ್ ತಿಳಿಸಿದರು.
ಇಲ್ಲಿನ ಡಾ. ಎ.ವಿ. ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದಲ್ಲಿ ರ್‍ಯಾಗಿಂಗ್ ವಿರೋಧಿ ವಾರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ದೊಡ್ಡ ದೊಡ್ಡ ನಗರ, ಪಟ್ಟಣಗಳಲ್ಲಿ ಮಾತ್ರ ನಡೆಯುತ್ತಿದ್ದ ಇಂತಹ ಹೀನ ಚಟುವಟಿಕೆ ಗ್ರಾಮೀಣ ಪ್ರದೇಶಗಳಲ್ಲೂ ಅಲ್ಲಲ್ಲಿ ನಡೆಯುತ್ತಿರುವ ಬಗ್ಗೆ ವರದಿಯಾಗುತ್ತಿರುವುದು ಅತೀವ ಬೇಸರದ ಸಂಗತಿ ಆಗಿದೆ. ಇದರಿಂದ ಶೈಕ್ಷಣಿಕ ವಾತಾವರಣ ಹದಗೆಡುತ್ತಿದ್ದು, ರ್‍ಯಾಗಿಂಗ್ ಒಳಗಾದ ಹಲವಾರು ವಿದ್ಯಾರ್ಥಿಗಳು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ. ಇಂತಹ ದುಷ್ಟ ಪ್ರವೃತ್ತಿಗೆ ಕಡಿವಾಣ ಹಾಕುವುದು ಎಲ್ಲರ ಜವಾಬ್ದಾರಿ. ಈ ಕುರಿತು ಶೈಕ್ಷಣಿಕ ಸಂಸ್ಥೆಗಳು, ಪೊಲೀಸ್ ಇಲಾಖೆ, ವಿದ್ಯಾರ್ಥಿ ಸಂಘಟನೆಗಳು, ಪಾಲಕರು, ಶಿಕ್ಷಕರು ಎಲ್ಲರೂ ಸೇರಿ ರ್‍ಯಾಗಿಂಗ್ ತಡೆಗಟ್ಟಲು ಗಂಭೀರವಾಗಿ ಪ್ರಯತ್ನಿಸಬೇಕು ಎಂದರು.
ಕಾರ್ಯಕ್ರಮ ಅಂಗವಾಗಿ ಆಯೋಜಿಸಿದ್ದ ರ್‍ಯಾಗಿಂಗ್ ವಿರೋಧಿ ಸ್ಲೋಗನ್, ಪ್ರಬಂಧ ಸ್ಪರ್ಧೆ, ಪೋಸ್ಟರ್ ಮೇಕಿಂಗ್, ಲೋಗೋ ಡಿಸೈನಿಂಗ್, ಭಾಷಣ, ಶಾರ್ಟ್ ಫಿಲಂಸ್ ಡಾಕ್ಯುಮೆಂಟರಿ ಮೂವೀಸ್ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ರ್‍ಯಾಗಿಂಗ್ ವಿರೋಧಿ ಕೋಶದ ಸಂಯೋಜಕರಾದ ಪ್ರೊ. ಮೇಘನಾ ಪಟಗಾರ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿ, ಪರಿಚಯಿಸಿದರು. ಧನು ಹೆಗಡೆ ವಂದಿಸಿದರು. ಪ್ರೊ. ಸಂತೋಷ ಶಾನಭಾಗ, ಪ್ರೊ. ರಾಘವೇಂದ್ರ ನಾಯ್ಕ, ಡಾ. ಶ್ರೀನಿವಾಸ ಹರಿಕಂತ್ರ, ಪ್ರೊ. ನಿರ್ಮಲಾ ಪ್ರಭು, ಪ್ರೊ. ಮೋಹಿನಿ ನಾಯ್ಕ, ಪ್ರೊ. ಸುಷ್ಮಾ ನಾಯ್ಕ ಇತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.