ಕುಷ್ಟಗಿ: ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಉತ್ತಮಪಡಿಸಲು ವಿಶೇಷ ಯೋಜನೆ ಹಾಕಿಕೊಳ್ಳುವದರ ಜತೆಗೆ ಮಕ್ಕಳಲ್ಲಿರುವ ಪರೀಕ್ಷಾ ಭಯ ಹೋಗಲಾಡಿಸುವ ಕೆಲಸ ಮಾಡಬೇಕು ಎಂದು ಶಿಕ್ಷಣ ಇಲಾಖೆ ಉಪನಿರ್ದೇಶಕ ಸೋಮಶೇಖರಗೌಡ ಪಾಟೀಲ ಹೇಳಿದರು.
ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರು ಜೊತೆಗೂಡಿ ಸಮನ್ವಯತೆಯಿಂದ ಕಾರ್ಯ ನಿರ್ವಹಿಸುವ ಮೂಲಕ ಈ ಬಾರಿ ಉತ್ತಮ ಫಲಿತಾಂಶ ತಂದುಕೊಡಬೇಕು ಎಂದ ಅವರು, ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಪರೀಕ್ಷೆಯ ಕುರಿತು ಆತ್ಮವಿಶ್ವಾಸ ಮೂಡಿಸಬೇಕು ಎಂದರು.
ಇಲಾಖೆ ಹೊರಡಿಸಿರುವ 29 ಅಂಶಗಳನ್ನು ಅನುಸರಿಸಿ ಬೋಧನೆ ಮಾಡುವ ಮೂಲಕ ಶಿಕ್ಷಕರು ಧನಾತ್ಮಕ ಕಾರ್ಯಗಳು ವಿಶೇಷ ಯೋಜನೆಗಳೊಂದಿಗೆ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಬೇಕಿದೆ. ಈಗಾಗಲೆ ಒಂದು ಹಂತದ ಪರೀಕ್ಷೆಗಳು ಮುಗಿದಿದ್ದು ಕಡಿಮೆ ಅಂಕ ಪಡೆದಿರುವ ಮಕ್ಕಳ ಬಗ್ಗೆ ಹೆಚ್ಚಿನ ನಿಗಾ ವಹಿಸುವ ಮೂಲಕ ಎಲ್ಲರೂ ಪಾಸಾಗುವಂತೆ ಮಕ್ಕಳನ್ನು ತಯಾರು ಮಾಡಬೇಕು ಎಂದು ತಿಳಿಸಿದರು.ಶಿಕ್ಷಕರು ಮಕ್ಕಳ ಮನೆಗಳಿಗೆ ಭೇಟಿ ನೀಡುವ ಮೂಲಕ ಮಕ್ಕಳ ಓದಿನ ಕಡೆ ಗಮನ ಕೊಡಬೇಕು ಎಂದು ಪಾಲಕರಿಗೆ ತಿಳಿಸಬೇಕು ಇದರ ಜತೆಗೆ ವಸತಿ ನಿಲಯಕ್ಕೆ ಭೇಟಿ ನೀಡಿ ಮಕ್ಕಳ ಅಭ್ಯಾಸದ ಕುರಿತು ಗಮನ ವಹಿಸಬೇಕು ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ಜಗದೀಶಪ್ಪ ಮೆಣೆದಾಳ ಮಾತನಾಡಿ, ಹತ್ತನೇಯ ತರಗತಿಯ ಒಂದನೆ ಹಂತದ ಪರೀಕ್ಷೆಗಳು ಮುಗಿದಿದ್ದು, ಕಡಿಮೆ ಅಂಕಗಳಿಸಿದ ಮಕ್ಕಳಿಗೆ ಹೆಚ್ಚು ಗಮನ ಕೊಡುವ ಮೂಲಕ ಉತ್ತಮ ಫಲಿತಾಂಶ ಕೊಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವದು ಎಂದು ತಿಳಿಸಿದರು.ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಎಂ.ಎಂ. ಗೊಣ್ಣಾಗರ, ತರಬೇತಿ ನೋಡಲ್ ಅಧಿಕಾರಿ ರಾಜೇಂದ್ರ ಬೆಳ್ಳಿ ಇತರರು ಮಾತನಾಡಿದರು.
ಸಂಪನ್ಮೂಲ ವ್ಯಕ್ತಿ ರಾಮಚಂದ್ರ ಬಡಿಗೇರ, ಶರಣಬಸವ ಮಾಟೂರು ತರಬೇತಿಯಲ್ಲಿ ಶಿಕ್ಷಕರಿಗೆ ಅಗತ್ಯ ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಎಂ.ಎಂ. ಸವದತ್ತಿ, ಮಹಾಂತೇಶ ಜಾಲಿಹಾಳ, ಪ್ರಭಾಕರ ಅವರೆಡ್ಡಿ, ಯಮನಪ್ಪ ಚೂರಿ, ಸಂಗಪ್ಪ ಕಿರಸೂರ ಸೇರಿದಂತೆ ವಿವಿಧ ಪ್ರೌಢಶಾಲೆಗಳ ಮುಖ್ಯಶಿಕ್ಷಕರು ಇದ್ದರು.