ಕನ್ನಡಪ್ರಭ ವಾರ್ತೆ ತುಮಕೂರುಅಂತರ್ಜಾತಿ ವಿವಾಹ ಮನುಷ್ಯರು ಸೃಷ್ಟಿಸಿಕೊಂಡಿರುವ ಅನೇಕ ತಾರತಮ್ಯದ ಗೋಡೆಗಳನ್ನು ಒಡೆದು ಸಮಸಮಾಜವನ್ನು ನಿರ್ಮಿಸುವ ಒಂದು ಮಹತ್ವದ ದಾರಿಯಾಗಿದೆ ಎಂದು ಲೇಖಕಿ ಮಲ್ಲಿಕಾ ಬಸವರಾಜು ಅಭಿಪ್ರಾಯಪಟ್ಟರು.
ಒಲವಿನ ಅಥವಾ ಅಂತರ್ಜಾತಿ ವಿವಾಹಗಳು ಜಾತಿಯ ಕಟ್ಟಳೆಗಳನ್ನು ಒಡೆಯುವ ಪ್ರಯತ್ನ ಮಾಡಿದರೆ, ಶಿಕ್ಷಣ ನಮ್ಮಅರಿವಿನ ಎಲ್ಲೆಗಳನ್ನು ವಿಸ್ತರಿಸಿ ಅನಂತ ಸಾಧ್ಯತೆಗಳನ್ನು ನಮಗೆ ಕಾಣಿಸುವ ಕೆಲಸ ಮಾಡುತ್ತದೆ. ತಾವು ಪಿಯುಸಿ ಮುಗಿಸಿ ಪದವಿಯ ಹಂತಕ್ಕೆ ಬಂದಾಗ ಭಾರತದ ಶ್ರೇಷ್ಠ ತತ್ತ್ವಜ್ಞಾನಿಗಳಾದ ಮಹಾತ್ಮಗಾಂಧಿ, ರಾಮ್‌ಮನೋಹರ ಲೋಹಿಯಾ, ಡಾ ಬಿ ಆರ್ ಅಂಬೇಡ್ಕರ್, ಕುವೆಂಪು ಮತ್ತು ಕಿಶನ್ ಪಟ್ನಾಯಕ್ ಇವರ ಚಿಂತನೆಗಳು ತಮ್ಮ ಯೋಚನೆಯ ದಾರಿಯನ್ನು ಬದಲಾಯಿಸಿದವು ಎಂದರು.
ಸಾಮಾಜಿಕ ಸಂರಚನೆಗಳಿಗೆ ಎದುರಾಗಿ ಹೊರಟವರು ಅನುಭವಿಸಬೇಕಾಗಿ ಬರುವ ಅನೇಕ ಸಂಕಟಗಳು ಮತ್ತು ಜವಾಬ್ದಾರಿಗಳನ್ನು ತಮ್ಮದೇ ಬದುಕಿನ ಅಂತರ್ಜಾತಿ ಪ್ರೇಮ ವಿವಾಹದ ಉದಾಹರಣೆಯೊಂದಿಗೆ ವಿವರಿಸಿದರು. ಡಿವಿಜಿ ಕನ್ನಡ ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ ನಿತ್ಯಾನಂದ ಬಿ.ಶೆಟ್ಟಿ, ಪ್ರಾಧ್ಯಾಪಕಿ ಪ್ರೊ.ಅಣ್ಣಮ್ಮ, ಸಹ ಪ್ರಾಧ್ಯಾಪಕಿ ಡಾ.ಗೀತಾ ವಸಂತ, ಕಥೆಗಾರ ಮಿರ್ಜಾ ಬಷೀರ್, ಲೇಖಕಿಯರಾದ ಮುಮ್ತಾಜ್, ಇಂದಿರಮ್ಮ, ಅಕ್ಷತಾ, ರಂಗಮ್ಮ ಹೊದೇಕಲ್ ಉಪಸ್ಥಿತರಿದ್ದರು.