ಎಳ್ಳಮಾವಾಸ್ಯೆ ಜಾತ್ರೆ: ತೀರ್ಥಸ್ನಾನದಲ್ಲಿ ಮಿಂದೆದ್ದ ಭಕ್ತರು

KannadaprabhaNewsNetwork | Published : Dec 31, 2024 1:00 AM

ಸಾರಾಂಶ

Ellamavasya Fair: Devotees bathe in holy water

-ತುಂಗಾನದಿ ರಾಮಕೊಂಡ ತೀರ್ಥಸ್ನಾನದಲ್ಲಿ ದಾಖಲೆ ಸಂಖ್ಯೆಯಲ್ಲಿ ಸೇರಿದ್ದ ಭಕ್ತರು । ಶ್ರೀರಾಮೇಶ್ವರ ದೇವರ ಉತ್ಸವಮೂರ್ತಿ ಪೂಜೆ

-----

ಕನ್ನಡಪ್ರಭವಾರ್ತೆ ತೀರ್ಥಹಳ್ಳಿಎಳ್ಳಮಾವಾಸ್ಯೆ ಜಾತ್ರೆಯ ಅಂಗವಾಗಿ ತುಂಗಾ ನದಿಯಲ್ಲಿರುವ ರಾಮಕೊಂಡದಲ್ಲಿ ನಡೆದ ತೀರ್ಥಸ್ನಾನದಲ್ಲಿ ಹತ್ತಾರು ಸಾವಿರಕ್ಕೂ ಮೀರಿ ದಾಖಲೆ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.

ನಸುಕಿನಲ್ಲಿಯೇ ತುಂಗಾನದಿಯ ಮಧ್ಯದಲ್ಲಿರುವ ರಾಮಕೊಂಡಕ್ಕೆ ಶ್ರೀರಾಮೇಶ್ವರ ದೇವರ ಉತ್ಸವಮೂರ್ತಿ ಆಗಮಿಸಿ ಪೂಜೆ ಸಲ್ಲಿಸುವುದರೊಂದಿಗೆ ತೀರ್ಥಸ್ನಾನ ಪ್ರಾರಂಭಗೊಂಡಿದ್ದು, ಮುಂಜಾನೆಯಿಂದಲೇ ನದಿದಡದಲ್ಲಿ ಉದ್ದನೆಯ ಕ್ಯೂ ನಿರ್ಮಾಣವಾಗಿದ್ದು, ಮಧ್ಯಾಹ್ನ 4 ಗಂಟೆಯವರೆಗೂ ನದಿಯಲ್ಲಿ ರಾಮಕೊಂಡದಿಂದ ರಾಮೇಶ್ವರ ದೇವಸ್ಥಾನದವರೆಗೂ ಜನರ ಉದ್ದನೆಯ ಸಾಲು ನಿರ್ಮಾಣಗೊಂಡಿತ್ತು.

ರಾಮಕೊಂಡದ ಬಳಿ ಜನರನ್ನು ನಿಯಂತ್ರಿಸಿ ನದಿಯಲ್ಲಿ ತೀರ್ಥಸ್ನಾನ ಮಾಡಿಸುವಲ್ಲಿ ಪೋಲಿಸರು ಹಾಗೂ ಸ್ವಯಂ ಸೇವಕರು ನಿರತರಾಗಿದ್ದರು. ನದಿಯಲ್ಲಿ ಈ ವರ್ಷ ನೀರಿನ ಹರಿವು ಹೆಚ್ಚಿದ್ದ ಕಾರಣ ಜನರ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಲಾಗಿದ್ದು, ಸ್ಥಳೀಯ ಆಡಳಿತ ಹೆಚ್ಚಿನ ಮುತುವರ್ಜಿ ವಹಿಸಿ ಜಾತ್ರೆಯ ಸಿದ್ದತೆ ನಡೆಸಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಡಿವೈಎಸ್‍ಪಿ ಗಜಾನನ ಸುತಾರ ಅವರ ಮಾರ್ಗದರ್ಶನ ಹಾಗೂ ಪೋಲಿಸ್ ಇನ್ಸ್‌ಪೆಕ್ಟರ್ ಅಶ್ವಥಗೌಡ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಉಪಾಹಾರ ಮತ್ತು ಅನ್ನಸಂತರ್ಪಣೆ: ರಾಮೇಶ್ವರ ದೇವಸ್ಥಾನದ ಆವರಣದಲ್ಲಿ ತೀರ್ಥಸ್ನಾನ ಮತ್ತು ದೇವರ ದರ್ಶನಕ್ಕೆ ಆಗಮಿಸಿದ್ದ ಎಲ್ಲ ಭಕ್ತರಿಗೆ ಇಲ್ಲಿನ ಟಿಎಸ್‍ಪಿ ಕೇಟರಿಂಗ್ ಮಾಲೀಕ ಪ್ರಸನ್ನ ಸೊಗಸಾದ ಉಪಹಾರವನ್ನು ವ್ಯವಸ್ಥೆಗೊಳಿಸಿದ್ದರು. ಪ್ರತಿವರ್ಷದಂತೆ ಜಾತ್ರೆಗೆ ಆಗಮಿಸಿದವರಿಗೆ ಶ್ರೀ ರಾಮೇಶ್ವರ ಅನ್ನದಾಸೋಹ ಮಿತ್ರವೃಂದದವರಿಂದ ಏರ್ಪಡಿಸಿದ್ದ ಸಾರ್ವಜನಿಕ ಅನ್ನಸಂತರ್ಪಣೆಯಲ್ಲಿ ಏಳು ಸಾವಿರ ಮಂದಿ ಪಾಲ್ಗೊಂಡಿದ್ದರು.

---------------------

ಫೋಟೋ: ಎಳ್ಳಮಾವಾಸ್ಯೆ ಜಾತ್ರೆಯ ಅಂಗವಾಗಿ ತುಂಗಾ ನದಿಯಲ್ಲಿರುವ ರಾಮಕೊಂಡದಲ್ಲಿ ನಡೆದ ತೀರ್ಥಸ್ನಾನದಲ್ಲಿ ದಾಖಲೆ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು.

Share this article