ಎಳ್ಳಾರೆ ಸರ್ಕಾರಿ ಶಾಲೆಗೆ ರಾಷ್ಟ್ರಮಟ್ಟದ ಪ್ರಶಸ್ತಿ ಗರಿ

KannadaprabhaNewsNetwork |  
Published : Jun 18, 2026, 02:45 AM IST
ಎಳ್ಳಾರೆ ಶಾಲೆ | Kannada Prabha

ಸಾರಾಂಶ

ಗ್ರಾಮೀಣ ಪ್ರದೇಶದಲ್ಲಿದ್ದರೂ ಸ್ವಚ್ಛತೆ, ಪರಿಸರ ಸಂರಕ್ಷಣೆ ಹಾಗೂ ವಿದ್ಯಾರ್ಥಿ ಕೇಂದ್ರಿತ ಶಿಕ್ಷಣ ಚಟುವಟಿಕೆಗಳ ಮೂಲಕ ರಾಜ್ಯದ ಗಮನ ಸೆಳೆದಿರುವ ಉಡುಪಿ ಜಿಲ್ಲೆಯ ಮುಳ್ಕಾಡು ಎಳ್ಳಾರೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ರಾಷ್ಟ್ರಮಟ್ಟದ ‘ಸ್ವಚ್ಛ ವಿದ್ಯಾಲಯ ಪುರಸ್ಕಾರ 2025-26’ಕ್ಕೆ ಆಯ್ಕೆಯಾಗಿದೆ. ಕೇಂದ್ರ ಸರಕಾರವು ಅಂತಿಮ‌ಪಟ್ಟಿ ಬಿಡುಗಡೆ ಮಾಡಲಾಗಿದೆ.

ರಾಂ ಅಜೆಕಾರು ಕಾರ್ಕಳ

ಕನ್ನಡಪ್ರಭ ವಾರ್ತೆ ಕಾರ್ಕಳ

ಗ್ರಾಮೀಣ ಪ್ರದೇಶದಲ್ಲಿದ್ದರೂ ಸ್ವಚ್ಛತೆ, ಪರಿಸರ ಸಂರಕ್ಷಣೆ ಹಾಗೂ ವಿದ್ಯಾರ್ಥಿ ಕೇಂದ್ರಿತ ಶಿಕ್ಷಣ ಚಟುವಟಿಕೆಗಳ ಮೂಲಕ ರಾಜ್ಯದ ಗಮನ ಸೆಳೆದಿರುವ ಉಡುಪಿ ಜಿಲ್ಲೆಯ ಮುಳ್ಕಾಡು ಎಳ್ಳಾರೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ರಾಷ್ಟ್ರಮಟ್ಟದ ‘ಸ್ವಚ್ಛ ವಿದ್ಯಾಲಯ ಪುರಸ್ಕಾರ 2025-26’ಕ್ಕೆ ಆಯ್ಕೆಯಾಗಿದೆ. ಕೇಂದ್ರ ಸರಕಾರವು ಅಂತಿಮ‌ಪಟ್ಟಿ ಬಿಡುಗಡೆ ಮಾಡಲಾಗಿದೆ.ಸ್ವಚ್ಛ ವಿದ್ಯಾಲಯ ಪುರಸ್ಕಾರ ಯೋಜನೆಯಡಿ ದೇಶದಾದ್ಯಂತ ಒಟ್ಟು 11,54,898 ಶಾಲೆಗಳು ನೋಂದಾಯಿಸಿಕೊಂಡಿ ದ್ದವು. ಕರ್ನಾಟಕದಿಂದ 71,369 ಶಾಲೆಗಳು ಹಾಗೂ ಉಡುಪಿ ಜಿಲ್ಲೆಯಿಂದ 1,072 ಶಾಲೆಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.

ರಾಜ್ಯದಿಂದ 20 ಶಾಲೆ ಶಿಫಾರಸು: ಉಡುಪಿ ಜಿಲ್ಲೆಯ ಎಂಟು ಶಾಲೆಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದು, ರಾಜ್ಯದಿಂದ 20 ಶಾಲೆಗಳು ರಾಷ್ಟ್ರ ಮಟ್ಟಕ್ಕೆ ಶಿಫಾರಸಾಗಿದ್ದವು. ಅಂತಿಮವಾಗಿ ದೇಶದಾದ್ಯಂತ 191 ಶಾಲೆಗಳು ರಾಷ್ಟ್ರ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಅವುಗಳಲ್ಲಿ ಮುಳ್ಕಾಡು ಎಳ್ಳಾರೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯೂ ಸ್ಥಾನ ಪಡೆದಿದೆ.ರಾಷ್ಟ್ರ ಮಟ್ಟದ ಮೌಲ್ಯಮಾಪನದಲ್ಲಿ ಮುಳ್ಕಾಡು ಸರ್ಕಾರಿ ಪ್ರಾಥಮಿಕ ಶಾಲೆ ಕರ್ನಾಟಕದಲ್ಲೇ ಪ್ರಥಮ ಸ್ಥಾನ ಗಳಿಸಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕನ್ನಮಂಗಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದ್ವಿತೀಯ ಹಾಗೂ ಮೈಸೂರಿನ ಅಟ್ಟಿಗೋಡು ಸರ್ಕಾರಿ ಪ್ರಾಥಮಿಕ ಶಾಲೆ ತೃತೀಯ ಸ್ಥಾನ ಪಡೆದಿವೆ.

ಸರ್ವ ಶಿಕ್ಷಣ ಅಭಿಯಾನದ ರಾಜ್ಯ ಕಚೇರಿ ತಂಡ ಶಾಲೆಗಳಿಗೆ ಭೇಟಿ ನೀಡಿ ಸ್ವಚ್ಛತೆ, ಮೂಲ ಸೌಕರ್ಯ, ಪರಿಸರ ಸ್ನೇಹಿ ಚಟುವಟಿಕೆಗಳು ಹಾಗೂ ವಿದ್ಯಾರ್ಥಿ ಕೇಂದ್ರಿತ ಶಿಕ್ಷಣ ಕ್ರಮಗಳನ್ನು ಪರಿಶೀಲಿಸಿತ್ತು. ಬಳಿಕ ಎನ್‌ಸಿಇಆರ್‌ಟಿ ಮತ್ತು ಯುನಿಸೆಫ್ ಮಾರ್ಗದರ್ಶನದಲ್ಲಿ ನಡೆದ ರಾಷ್ಟ್ರಮಟ್ಟದ ಮೌಲ್ಯಮಾಪನದಲ್ಲಿ ಶಾಲೆ ಆಯ್ಕೆಯಾಗಿದೆ.ಪ್ರಶಸ್ತಿಗಾಗಿ ಶೌಚಾಲಯ ವ್ಯವಸ್ಥೆ, ಕೈತೊಳೆಯುವ ಸೌಲಭ್ಯ, ಕಾರ್ಯಾಚರಣೆ ಮತ್ತು ನಿರ್ವಹಣೆ, ನಡವಳಿಕೆ ಬದಲಾವಣೆ, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಮಿಷನ್ ಲೈಫ್ ಚಟುವಟಿಕೆಗಳು ಸೇರಿದಂತೆ ಆರು ಪ್ರಮುಖ ವಿಭಾಗಗಳನ್ನು ಪರಿಗಣಿಸಲಾಗಿದೆ. ಶಾಲೆಯಲ್ಲಿನ ಸ್ವಚ್ಛತಾ ವ್ಯವಸ್ಥೆ, ಡ್ರೈನೇಜ್, ಪರಿಸರ ಸಂರಕ್ಷಣೆ, ತ್ಯಾಜ್ಯ ನಿರ್ವಹಣೆ ಹಾಗೂ ಪರಿಸರ ಆಧರಿತ ಕಾರ್ಯಕ್ರಮಗಳು ಮೌಲ್ಯಮಾಪಕರ ಮೆಚ್ಚುಗೆಗೆ ಪಾತ್ರವಾಗಿವೆ.

1959ರಲ್ಲಿ ಸ್ಥಾಪನೆಯಾದ ಈ ಶಾಲೆ ಬಸ್ ಸೌಲಭ್ಯವಿಲ್ಲದ ಗ್ರಾಮೀಣ ಪ್ರದೇಶದಲ್ಲಿದ್ದರೂ ಶಿಕ್ಷಣ ಮತ್ತು ಸ್ವಚ್ಛತೆಯಲ್ಲಿ ಮಾದರಿಯಾಗಿ ಬೆಳೆಯುತ್ತಿದೆ. ಪ್ರಸ್ತುತ 55 ವಿದ್ಯಾರ್ಥಿಗಳು ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಮುಖ್ಯೋಪಾಧ್ಯಾಯ ಜನಾರ್ದನ ಬೆಳ್ಳಿರಾಯ ನೇತೃತ್ವದಲ್ಲಿ ಶಾಲೆ ಪಠ್ಯ ಶಿಕ್ಷಣದ ಜೊತೆಗೆ ಜೀವನ ಕೌಶಲ್ಯಗಳನ್ನು ಬೆಳೆಸುವ ಶಿಕ್ಷಣ ಕೇಂದ್ರವಾಗಿ ರೂಪುಗೊಂಡಿದೆ.ಕಂಪ್ಯೂಟರ್ ತರಬೇತಿ, ಸ್ಪೋಕನ್ ಇಂಗ್ಲಿಷ್, ಯೋಗ, ಕರಾಟೆ, ಬ್ಯಾಂಡ್ ಸೆಟ್, ಆರೋಗ್ಯ ಶಿಕ್ಷಣ, ವಿಜ್ಞಾನ ಪ್ರಯೋಗಾಲಯ, ಔಷಧೀಯ ಸಸ್ಯ ತೋಟ, ಆಟದ ಬಾಳವನ, ಡೈನಿಂಗ್ ಹಾಲ್, ಸ್ವಚ್ಛ ಶೌಚಾಲಯಗಳು ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಶಾಲೆಯ ವಿಶೇಷತೆಗಳಾಗಿವೆ. ಪೋಷಕರು, ಹಳೆ ವಿದ್ಯಾರ್ಥಿಗಳು, ಗ್ರಾಮಸ್ಥರು, ದಾನಿಗಳು ಹಾಗೂ ವಿವಿಧ ಸಂಸ್ಥೆಗಳ ಸಹಕಾರದಿಂದ ಶಾಲೆ ನಿರಂತರ ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತಿದೆ.ಈ ಶಾಲೆ ಈಗಾಗಲೇ ಉಡುಪಿ ಜಿಲ್ಲಾ ಮಟ್ಟದ ಪರಿಸರ ಮಿತ್ರ ಪ್ರಶಸ್ತಿಗೆ ನಾಲ್ಕು ವರ್ಷಗಳ ಕಾಲ ನಿರಂತರ ಆಯ್ಕೆಯಾಗಿದ್ದು, ರಜತ ನೈರ್ಮಲ್ಯ ಪ್ರಶಸ್ತಿ, ಬೆಸ್ಟ್ ಎಸ್‌ಡಿಎಂಸಿ ಪ್ರಶಸ್ತಿ ಹಾಗೂ ತಾಲೂಕು ಮಟ್ಟದ ಉತ್ತಮ ಶಾಲೆ ಎಂಬ ಗೌರವಗಳನ್ನು ಪಡೆದಿದೆ.ರಾಷ್ಟ್ರ ಮಟ್ಟದ ಸ್ವಚ್ಛ ವಿದ್ಯಾಲಯ ಪುರಸ್ಕಾರದ ಭಾಗವಾಗಿ ಶಾಲೆಗೆ 1 ಲಕ್ಷ ರು. ನಗದು ಬಹುಮಾನ, ಪ್ರಮಾಣಪತ್ರ ಹಾಗೂ ರಾಷ್ಟ್ರ ಪ್ರಶಸ್ತಿ ಪ್ರದಾನವಾಗಲಿದ್ದು, ಗ್ರಾಮೀಣ ಶಾಲೆಯೊಂದು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದೆ.*ಶಾಲೆ ಕೇವಲ ಪಾಠ ಕಲಿಸುವ ಕೇಂದ್ರವಾಗಿರದೆ ಉತ್ತಮ ನಾಗರಿಕರನ್ನು ರೂಪಿಸುವ ತಾಣವಾಗಬೇಕು ಎಂಬ ಉದ್ದೇಶದಿಂದ ಹಲವು ವಿನೂತನ ಚಟುವಟಿಕೆಗಳನ್ನು ನಡೆಸಿದ್ದೇವೆ. ಅದರ ಫಲವೇ ಈ ರಾಷ್ಟ್ರಮಟ್ಟದ ಗೌರವ. -ಜನಾರ್ದನ ಬೆಳ್ಳಿರಾಯ, ಮುಖ್ಯೋಪಾಧ್ಯಾಯರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸೈಕಲ್ ಬಳಕೆ ಆರೋಗ್ಯ ವೃದ್ದಿಗೆ ಪೂರಕ: ವಿಜಯಾ ಕೋರಿಶೆಟ್ಟಿ
ಮತದಾರರ ಪಟ್ಟಿ ಪರಿಷ್ಕರಣೆ ಪಾರದರ್ಶಕವಾಗಿರಲಿ