ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಚಿಕನಕುರಳಿ ಎಸ್‌ಟಿಜಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜಿನ ಕಲಾ, ವಿಜ್ಞಾನ, ಗಣಕ, ವಾಣಿಜ್ಯ ಹಾಗೂ ನಿರ್ವಹಣಾ ವಿಭಾಗವು ಆಂತರಿಕ ಗುಣಮಟ್ಟ ಭರವಸೆ ಕೋಶ ಘಟಕದ ವತಿಯಿಂದ ಅಭಿವಿನ್ಯಾಸ ಕಾರ್‍ಯಕ್ರಮದಲ್ಲಿ 2026-27ನೇ ಸಾಲಿಗೆ ದಾಖಲಾದ ಬಿಎ, ಬಿಎಸ್ಸಿ, ಬಿಸಿಎ, ಬಿಕಾಂ ಹಾಗೂ ಬಿಬಿಎ ತರಗತಿಗಳ ಸುಮಾರು ಮುನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಇನ್ನೂರಕ್ಕೂ ಹೆಚ್ಚು ಪೋಷಕರು ಕಾರ್‍ಯಕ್ರಮದಲ್ಲಿ ಶಾರದಾ ಮಾತೆ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ನಾವು ಆಯ್ಕೆ ಮಾಡಿಕೊಂಡಿರುವ ವಿಷಯ ಯಾವುದು, ಯಾವುದಕ್ಕಾಗಿ ಓದಬೇಕು ಎಂಬುದನ್ನು ತಿಳಿದು ನಮ್ಮ ಮುಂದಿನ ಗುರಿಯೊಂದಿಗೆ ಹೆಜ್ಜೆಗಳನ್ನು ಹಾಕಬೇಕು. ನಿಮಗಾಗಿ ತಂದೆ- ತಾಯಿ ಹಾಕುವ ಪರಿಶ್ರಮವನ್ನು ಸದಾಕಾಲ ನೆನೆಯಬೇಕು. ಇದರಿಂದ ಜೀವನದಲ್ಲಿ ಯಶಸ್ಸು ಸಾಧಿಸಬಹುದು ಎಂದರು.ಸಂಸ್ಥೆ ಆಡಳಿತಾಧಿಕಾರಿ ನಿವೇದಿತಾ ನಾಗೇಶ್ ಮಾತನಾಡಿ, ಪದವಿ ಹಂತದ ಈ ಮೂರು ವರ್ಷದಲ್ಲಿ ನೀವು ಹಂತ ಹಂತವಾಗಿ ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ವಹಿಸಬೇಕು. ತಾಂತ್ರಿಕತೆ, ನಮ್ಮ ಆಡಳಿತ ಭಾಷೆ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಪ್ರಬುದ್ಧತೆಯನ್ನು ಸಾಧಿಸಿದಾಗ ಮಾತ್ರ ಮುಂದಿನ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಲು ಸಾಧ್ಯ ಎಂದು ತಿಳಿಸಿದರು.
ಮೂರು ವರ್ಷದ ಪದವಿ ಯೋಜನೆ ಸ್ಫೋಕನ್ ಇಂಗ್ಲಿಷ್, ವ್ಯಕ್ತಿತ್ವ ವಿಕಸನ, ಟ್ಯಾಲಿ, ಸ್ಪರ್ಧಾತ್ಮಕ ತರಬೇತಿಗಳನ್ನು ಸಂಸ್ಥೆ ನೀಡುತ್ತಿದ್ದು, ಎಲ್ಲಾ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಬಳಿಕ ದ್ವಿತೀಯ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು.