ತಂತ್ರಜ್ಞಾನದ ಪ್ರಭಾವದಿಂದಾಗಿ ವಿದ್ಯಾರ್ಥಿಗಳ ಕಿರು ಮಾಹಿತಿ ( ನೋಟ್ಸ್) ಬರೆಯುವ ಪ್ರವೃತ್ತಿ ಕಡಿಮೆ ಆಗುತ್ತಿದೆ. ತಂತ್ರಜ್ಞಾನವನ್ನು ಒಂದು ಸಾಧನವಾಗಿ ಬಳಕೆ ಮಾಡಿಕೊಳ್ಳಬೇಕು.
ಧಾರವಾಡ:
ವಿದ್ಯಾರ್ಥಿಗಳು ನಿರ್ದಿಷ್ಟ ಗುರಿ ಇಟ್ಟುಕೊಂಡು ಛಲದಿಂದ ಅದನ್ನು ಸಾಧಿಸಲು ಪ್ರಯತ್ನಿಸಬೇಕು. ಮಾನವೀಯ ಗುಣ ಅಳವಡಿಕೊಂಡು ದೇಶಕ್ಕೆ, ನಾಡಿಗೆ ಉತ್ತಮ ಪ್ರಜೆಯಾಗಲು ಕವಿವಿ ಕುಲಪತಿ ಪ್ರೊ. ಎ.ಎಂ. ಖಾನ್ ಹೇಳಿದರು.
ಕರ್ನಾಟಕ ಕಲಾ ಕಾಲೇಜಿನ ಜಮಖಾನಾ ವಿಭಾಗವು ಹಮ್ಮಿಕೊಂಡ ಪ್ರತಿಭಾ ಪುರಸ್ಕಾರ ಉದ್ಘಾಟಿಸಿದ ಅವರು, ತಂತ್ರಜ್ಞಾನದ ಪ್ರಭಾವದಿಂದಾಗಿ ವಿದ್ಯಾರ್ಥಿಗಳ ಕಿರು ಮಾಹಿತಿ ( ನೋಟ್ಸ್) ಬರೆಯುವ ಪ್ರವೃತ್ತಿ ಕಡಿಮೆ ಆಗುತ್ತಿದೆ. ತಂತ್ರಜ್ಞಾನವನ್ನು ಒಂದು ಸಾಧನವಾಗಿ ಬಳಕೆ ಮಾಡಿಕೊಳ್ಳಬೇಕು. ಸಮರ್ಪಕವಾಗಿ ಆಧುನಿಕ ತಂತ್ರಜ್ಞಾನದ ಸಾಧನ ಬಳಸಬೇಕು. ಹೊಸ ಆಲೋಚನಾ ಶಕ್ತಿ ಹೊಂದಬೇಕು ಎಂದರು.
ಶಿಕ್ಷಣ ಒಂದು ಪ್ರಬುದ್ಧ ಚಿಂತನೆಯನ್ನು ಬೆಳೆಸುತ್ತದೆ ಎಂದ ಅವರು, ನಾನು ಕೂಡ ಕರ್ನಾಟಕ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಯಾಗಿ ಅನೇಕ ನೆನಪುಗಳನ್ನು ಹೊಂದಿದೆ. ಕೆಸಿಡಿಯಲ್ಲಿ ಓದುವುದೇ ಒಂದು ಭಾಗ್ಯ ಎಂದು ಹೇಳಿದರು.
ರಂಗ ನಿರ್ದೇಶಕಿ ವಿಶ್ವೇಶ್ವರಿ ಹಿರೇಮಠ ಮಾತನಾಡಿ, ಕರ್ನಾಟಕ ಕಾಲೇಜಿಗೆ ದೊಡ್ಡ ಇತಿಹಾಸವಿದೆ. ಅನೇಕ ಸಾಹಿತಿ, ನಾಟಕಕಾರರು, ಬರಹಗಾರರು, ನ್ಯಾಯಾಧೀಶರು, ಆಡಳಿತಗಾರರನ್ನು ದೇಶಕ್ಕೆ ನೀಡಿದೆ ಎಂದು ತಿಳಿಸಿದರು.
ಡಾ. ಬಿ.ಎಸ್. ಭಜಂತ್ರಿ ಪ್ರಾಸ್ತಾವಿಕ ಮಾತನಾಡಿದರು. ಕರ್ನಾಟಕ ಕಾಲೇಜಿನ ಪ್ರಾಚಾರ್ಯ ಪ್ರೊ. ಐ.ಸಿ. ಮುಳಗುಂದ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ 2024-25ನೇ ಸಾಲಿನ ನಿನಾದ ವಾರ್ಷಿಕ ಸಂಚಿಕೆ ಬಿಡುಗಡೆ ಮಾಡಲಾಯಿತು. 2025-26ನೇ ಸಾಲಿನಲ್ಲಿ ಪಠ್ಯ, ಪಠ್ಯೇತರ, ಕ್ರೀಡೆ, ಎನ್‌ಸಿಸಿ, ಎನ್‌ಎಸ್‌ಎಸ್ ಮತ್ತು ಯುವಜನೋತ್ಸವ ಮತ್ತು ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ನಗದು ಪ್ರಶಸ್ತಿ ಮತ್ತು ಪ್ರಮಾಣ ಪತ್ರ ನೀಡಿ ಸನ್ಮಾನಿಸಲಾಯಿತು. ನಿವೃತ್ತ ಪ್ರಾಚಾರ್ಯರಿಗೂ ಸನ್ಮಾನಿಸಲಾಯಿತು. ಪ್ರೊ. ಕಾಂಚನ್ ಗಾಂವಕರ, ಡಾ. ಮುಕುಂದ ಲಮಾಣಿ, ಡಾ. ರಜನಿ.ಎಚ್, ಡಾ. ಸುರೇಶ ಹುಲ್ಲನ್ನವರ, ಡಾ. ಜಾಕೀರ ಗುಳಗುಂಡಿ, ಡಾ. ಎ.ಸಿ. ಕುರಹಟ್ಟಿ, ಡಾ. ಎಸ್.ಜಿ. ಜಾಧವ್ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.