ತಂತ್ರಜ್ಞಾನಕ್ಕೂ-ಸಂಗೀತಕ್ಕೂ ಅವಿನಾಭಾವ ಸಂಬಧವಿದೆ. ವಾದ್ಯ ಸಂಗೀತದಲ್ಲಿ ಮೊಟ್ಟ ಮೊದಲು ಆವಿಷ್ಕಾರಗೊಂಡಿದ್ದು ಕೊಳಲು. ಸುಮಾರು 40 ಸಾವಿರ ವರ್ಷಗಳ ಹಿಂದೆ ಆವಿಷ್ಕಾರಗೊಂಡ ವಾದ್ಯ ತಂತ್ರಜ್ಞಾನದ ಬೆಳವಣಿಗೆಯಿಂದ ಈ ಸ್ವರೂಪ ಪಡೆದುಕೊಂಡಿದೆ.
ಧಾರವಾಡ:
ಯಾವುದೇ ಕಾನೂನು ಗ್ರಂಥಗಳಿಲ್ಲದ ನಾಗರಿಕತೆಯ ಆದಿಯಿಂದಲೂ ಪೌರಾಣಿಕ ಕಥೆ, ಸಂಗೀತ, ಸಂಸ್ಕೃತಿಯ ಮೂಲಕ ಜೀವನದ ಮೌಲ್ಯಗಳನ್ನು ಪೂರ್ವಿಕರು ಹೇಳಿಕೊಟ್ಟಿದ್ದಾರೆ. ಅದರಂತೆ ಇನ್ಫೋಸಿಸ್ ಸಂಸ್ಥೆಯು ತಂತ್ರಜ್ಞಾನದ ಬೆಳವಣಿಗೆ ಜತೆಗೆ ಸಂಗೀತ, ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಮೌಲಿಕ ತತ್ವಗಳಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಇನ್ಫೋಸಿಸ್ ಉಪಾಧ್ಯಕ್ಷ ಮಂಜುನಾಥ ಕೆ. ಹೇಳಿದರು.
ಕುಮಾರೇಶ್ವರ ಕಲ್ಚರಲ್ ಸೊಸೈಟಿಯು ಇನ್ಫೋಸಿಸ್ ಫೌಂಡೇಶನ್ ಸಹಯೋಗದಲ್ಲಿ ಹುಬ್ಬಳ್ಳಿಯ ಇನ್ಫೋಸಿಸ್ ಕಂಪನಿ ಆವರಣದಲ್ಲಿ ಏರ್ಪಡಿಸಿದ್ದ ಸಂಗೀತೋತ್ಸವ ಉದ್ಘಾಟಿಸಿದ ಅವರು, ತಂತ್ರಜ್ಞಾನಕ್ಕೂ-ಸಂಗೀತಕ್ಕೂ ಅವಿನಾಭಾವ ಸಂಬಧವಿದೆ. ವಾದ್ಯ ಸಂಗೀತದಲ್ಲಿ ಮೊಟ್ಟ ಮೊದಲು ಆವಿಷ್ಕಾರಗೊಂಡಿದ್ದು ಕೊಳಲು. ಸುಮಾರು 40 ಸಾವಿರ ವರ್ಷಗಳ ಹಿಂದೆ ಆವಿಷ್ಕಾರಗೊಂಡ ವಾದ್ಯ ತಂತ್ರಜ್ಞಾನದ ಬೆಳವಣಿಗೆಯಿಂದ ಈ ಸ್ವರೂಪ ಪಡೆದುಕೊಂಡಿದೆ ಎಂದರು.
ಎಐ ತಂತ್ರಜ್ಞಾನದ ಕಾಲದಲ್ಲಿ ಅನೇಕ ರಾಗಗಳನ್ನು ಎಐ ತನ್ನದೇ ಆದ ವಿಶಿಷ್ಠ ದಾಟಿಯಲ್ಲಿ ರಚಿಸಿ ಕೊಡುತ್ತದೆ. ಅದನ್ನು ಕೇಳುವುದಕ್ಕೂ ಮತ್ತು ನೇರ ಸಂಗೀತ ಗೋಷ್ಠಿಗಳನ್ನು ಆಲಿಸುವುದಕ್ಕೆ ವ್ಯತ್ಯಾಸವಿದೆ. ನೇರ ಸಂಗೀತದಲ್ಲಿ ಮಾನವೀಯ ಸಂಬಂಧಗಳೇ ಮುಖ್ಯ. ಅದು ಮನುಷ್ಯನಿಗೆ ಹೆಚ್ಚು ತೃಪ್ತಿಗೊಳಿಸುತ್ತದೆ ಎಂದು ಹೇಳಿದರು.
ಸಂಸ್ಕೃತಿಯಲ್ಲಿ ಇನ್ಫೋಸಿಸ್ ಕೊಡುಗೆ:
ಖ್ಯಾತ ಹಿಂದೂಸ್ತಾನಿ ಗಾಯಕಿ ಡಾ. ಸುಮಿತ್ರಾ ಕಾಡದೇವರಮಠ ಮಾತನಾಡಿ, ಭಾರತೀಯ ಕಲೆ, ಸಾಹಿತ್ಯ, ಸಂಗೀತ ಹಾಗೂ ನೃತ್ಯಗಳ ಬೆಳವಣಿಗೆಯಲ್ಲಿ ಇನ್ಫೋಸಿಸ್ ಸಂಸ್ಥೆಯ ಕೊಡುಗೆ ಅಮೋಘ. ಯುವ ಪೀಳಿಗೆಗೆ ಭಾರತೀಯ ಕಲೆ ಪರಿಚಯಿಸುವ ಮತ್ತು ಕಲಾವಿದರಿಗೆ ವೇದಿಕೆ ನಿರ್ಮಿಸುತ್ತಿರುವುದು ಹೆಮ್ಮೆಯ ಸಂಗತಿ. ಸಂಗೀತವು ಆಧ್ಯಾತ್ಮಿಕ ಮೋಕ್ಷ ಸಾಧನೆಗೆ ಮಾರ್ಗವಾಗಿದೆ. ಪಾರಂಪರಿಕ ಸಂಗೀತವು ಇದು ಹೆಮ್ಮರವಾಗಿ ಸೃಜನಾತ್ಮಕವಾಗಿ ಬೆಳೆದು ನಿಂತಿದೆ ಎಂದರು. ರಶ್ಮಿ ಬ್ಯಾಹಟ್ಟಿ, ಸಂಜನಾ ಆರ್. ನಿರೂಪಿಸಿದರು. ಪ್ರೇಮಾ ಹೆಗಡೆ ಪ್ರಾರ್ಥಿಸಿದರು. ಶಿವಾನಂದ ಕೂಡ್ಲಮಠ ಸ್ವಾಗತಿಸಿದರು. ಕುಮಾರೇಶ್ವರ ಕಲ್ಚರಲ್ ಸೊಸೈಟಿ ಕಾರ್ಯದರ್ಶಿ ಪ್ರಕಾಶ ಬಾಳಿಕಾಯಿ ವಂದಿಸಿದರು. ಇನ್ಫೊಸಿಸ್ ಹುಬ್ಬಳ್ಳಿ ಕ್ಯಾಂಪಸ್ ಮುಖ್ಯಸ್ಥ ಅಲ್ಲಭಕ್ಷ ಅಸಾದುಲ್ಲಾ, ರೂಪೇಶಕುಮಾರ, ಪಂ. ಭಾಲಚಂದ್ರ ನಾಕೋಡ, ರಾಘವೇಂದ್ರ ನಾಕೋಡ ಇದ್ದರು. ಪಂ. ಪ್ರವೀಣ ಗೋಡಖಿಂಡಿ ಬಾಂಸುರಿ ವಾದನದಲ್ಲಿ ರಾಗ ಮಾರ್ವಾ ಮತ್ತು ಹಂಸಧ್ವನಿ ಪ್ರಸ್ತುತಪಡಿಸಿದರು. ಪಂ. ರಾಜೇಂದ್ರ ನಾಕೋಡ ತಬಲಾ ಸಾಥ್ ಸಂಗತ ನೀಡಿದರು. ಗಾಯಕಿ ಜೆ. ಪೂರ್ವಿ ರಾಗ ಭೀಮಪಲಾಸಿ ಮತ್ತು ದಾಸವಾಣಿ ಪ್ರಸ್ತುತ ಪಡಿಸಿದರು. ಹಾರ್ಮೊನಿಯಂದಲ್ಲಿ ಬಸವರಾಜ ಹಿರೇಮಠ ಹಾಗೂ ತಬಲಾದಲ್ಲಿ ಹೇಮಂತ ಜೋಶಿ ಸಂಗತ ನೀಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.