ಮೂಡುಬಿದಿರೆ : ಸಾಹಿತ್ಯದ ಮೂಲಕ ವ್ರತ, ಸತ್ಯಗಳನ್ನು ಅರ್ಥೈಸಿಕೊಂಡು ನಡೆಯುವುದೇ ಧರ್ಮ. ಆದರೆ ಇಬ್ಬರೂ ದುಡಿಯೋಣ, ಮಾವ ಅತ್ತೆ ಮಕ್ಕಳೂ ಬೇಡ ಎನ್ನುವ ಆಘಾತಕಾರಿ ಸಂಸ್ಕೃತಿ ಹಿರಿಯರನ್ನು ವೃದ್ಧಾಶ್ರಮಕ್ಕೆ ಬಿಟ್ಟಿರುವವರ ಸಂಸ್ಕೃತಿಯ ಜನ ಮನಕ್ಕೆ ನಮ್ಮ ಸಾಹಿತ್ಯ ನೀಡುವ ಸಂದೇಶಗಳು ಅರ್ಥವಾಗಬೇಕಿದೆ ಎಂದು ಆಳ್ವಾಸ್ ಕಾಲೇಜು ಉಪನ್ಯಾಸಕ ಟಿ. ಎ. ಎನ್. ಖಂಡಿಗೆ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೇಣುಗೋಪಾಲ ಶೆಟ್ಟಿ, ಜನಪದ ಸಾಹಿತ್ಯದಿಂದ ತೊಡಗಿ ಸಾಹಿತ್ಯದಲ್ಲಿ ನಿರಂತರ ಸಹಕಾರ ತತ್ವ ಸಂಸ್ಕೃತಿ ಸಮೃದ್ಧವಾಗಿರುವುದನ್ನು ವಿವರಿಸಿದರು. ಸಹಕಾರದಿಂದ ಬದುಕು ಅರ್ಥಪೂರ್ಣವಾಗುತ್ತದೆ ಎಂದು ಮೂಡುಬಿದಿರೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ ನುಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಂತಾವರ ಕನ್ನಡ ಸಂಘದ ಕಾರ್ಯಾಧ್ಯಕ್ಷ ಡಾ. ನಾ. ಮೊಗಸಾಲೆ, ನೈತಿಕತೆ, ಕರ್ತವ್ಯ ಪ್ರಜ್ಞೆ ಗ್ರಾಮೀಣ ಬದುಕಿನಲ್ಲಿ ಹಾಸುಹೊಕ್ಕಾಗಿದೆ ಎಂದರು.
ಸಹಕಾರಿ, ಸಹಕಾರ ತರಬೇತಿ ಕೇಂದ್ರದ ರಾಂಕ್ ವಿಜೇತ ವಿದ್ಯಾರ್ಥಿಗಳನ್ನು ವಿವಿಧ ರಂಗದ ಸಾಧಕರನ್ನು ಗೌರವಿಸಲಾಯಿತು. ಹಲವು ಶಿಕ್ಷಣ ಸಂಸ್ಥೆಗಳಿಗೆ ಆರ್ಥಿಕ ನೆರವು ಹಸ್ತಾಂತರಿಸಲಾಯಿತು. ಎಂಸಿಎಸ್ ಸೊಸೈಟಿ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್, ನಿರ್ದೇಶಕ ಕೆ. ಅಭಯಚಂದ್ರ ಜೈನ್ , ಸಹಕಾರಿ ತರಬೇತಿ ಕೇಂದ್ರದ ಉಪನ್ಯಾಸಕಿ ಬಿಂದು ನಾಯರ್, ಕೆ.ಪಿ. ಜಗದೀಶ ಅಧಿಕಾರಿ ಇದ್ದರು. ಸೊಸೈಟಿಯ ವಿಶೇಷ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಎಂ. ಸ್ವಾಗತಿಸಿದರು. ನಿರ್ದೇಶಕಿ ಅನಿತಾ ಪಿ. ಶೆಟ್ಟಿ ವಂದಿಸಿದರು. ಚೇತನಾ ರಾಜೇಂದ್ರ ಹೆಗ್ಡೆ ನಿರೂಪಿಸಿದರು.