ಕನ್ನಡಪ್ರಭ ವಾರ್ತೆ ಬೀದರ್
ನಗರದ ಜನವಾಡ ರಸ್ತೆಯಲ್ಲಿರುವ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗಳ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಅಂಗವಾಗಿ ರಾಷ್ಟ್ರೀಯ ಯುವ ದಿನ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ಜಗತ್ತಿನ ಮಹಾತ್ಮರನ್ನು ತಯಾರು ಮಾಡುವ ಮಹತ್ತರ ಸಾಧನವೇ ಹೆಣ್ಣು. ಆಕೆ ಕೊಡುವ ಸಂಸ್ಕಾರ ಹಾಗೂ ಸಂಸ್ಕೃತಿಯಿಂದ ಜಗತ್ ಪ್ರಸಿದ್ಧಿ ಪಡೆಯಲು ಸಾಧ್ಯವಾಗಲಿದೆ. ತಾಯಿ ಭುವನೇಶ್ವರಿ ದೇವಿಯು ವಿವೇಕಾನಂದರಿಗೆ ಜನ್ಮ ನೀಡಿದರೆ ಮಾತೆ ಶಾರದಾದೇವಿಯು ಅವರಿಗೆ ಶಿಕ್ಷಣ ಹಾಗೂ ಸಂಸ್ಕಾರ ನೀಡಿದರು. ಅವರಿಬ್ಬರ ಫಲಶ್ರುತಿಯಿಂದ ವಿವೇಕಾನಂದರ ಸಿಡಿಲು ಸನ್ಯಾಸಿಯಾಗಿ, ಸದ್ವಿನಯದ ಸಾಕಾರ ಮೂರ್ತಿಯಾಗಿ ಹಾಗೂ ಮಾಣಿಕ್ಯದ ದೀಪ್ತಿಯಂತೆ ಹೊರ ಹೊಮ್ಮಿದರು ಎಂದರು.ಇಂದಿನ ಯುವಜನರು ಮುಂದಿನ ಪ್ರಜೆಗಳು. ಭಾರತದ ಭವಿಷ್ಯ ಯುವಜನರ ಮೇಲಿದ್ದು, ಉನ್ನತ ಗುರಿ ಹಾಗೂ ಶ್ರೇಷ್ಠ ಗುರುವಿನ ಮಾರ್ಗದರ್ಶನದಿಂದ ನೈಜ ಬದುಕು ರೂಪಿಸಿಕೊಳ್ಳುವ ಮಹತ್ವಕಾಂಕ್ಷೆ ಬೆಳೆಂಸಿಕೊಳ್ಳುವಂತೆ ಪಾರ್ವತಿ ಸೋನಾರೆ ಕರೆ ಕೊಟ್ಟರು.
ಯುವ ಸಬಲಿಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಗೌತಮ ಅರಳಿ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತಿ ವರ್ಷ ಜನವರಿ 12 ವಿವೇಕಾನಂದರ ಜನ್ಮದಿನ. ಕಬ್ಬಿಣದಂಥ ಶರೀರ, ಸಿಡಿಲಿನಂತಹ ಧ್ವನಿ ಹಾಗೂ ಉಕ್ಕಿನಂತಹ ಧೈರ್ಯ ಬೆಳೆಸಿಕೊಂಡಲ್ಲಿ ವಿವೇಕರ ನಿಜವಾದ ವಾರಸುದಾರರಾಗಲು ಸಾಧ್ಯವಿದೆ ಎಂದರು.
ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಮೌಲಪ್ಪ ಮಾಳಗೆ ಸ್ವಾಗತಿಸಿ ನಿರೂಪಿಸಿದರೆ ಇಲಾಖೆಯ ಸಿಬ್ಬಂದಿ ಖುದ್ದೂಸ್ ವಂದಿಸಿದರು. ಸಿಬ್ಬಂದಿಗಳಾದ ಪದ್ಮಾವತಿ, ಸತೀಶ, ಕಾಲೇಜಿನ ಎಲ್ಲ ಪ್ರಾಧ್ಯಾಪಕ ವೃಂದದವರು, ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.