ಸಿಕ್ಕ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಳ್ಳಿ: ಡಾ.ನಿರ್ಮಲಾನಂದನಾಥ ಸ್ವಾಮೀಜಿ

KannadaprabhaNewsNetwork | Published : Jan 15, 2024 1:47 AM

ಸಾರಾಂಶ

ಮಳೆಗಾಲದಲ್ಲಿ ರೈತ ಸ್ವಲ್ಪ ಎಡವಿ ಸೋಮಾರಿಯಾದರೆ ಬೇಸಿಗೆಯಲ್ಲಿ ಬರುವ ಬವಣೆಗಳನ್ನು ನೀಗಿಸಲು ಯಾರಿಂದಲೂ ಆಗುವುದಿಲ್ಲ. ಯಾವ ರೈತ ಮಳೆಗಾಲದಲ್ಲಿ ಎಚ್ಚೆತ್ತು ದುಡಿಯುತ್ತಾರೆಯೋ ಅಂತಹ ವ್ಯಕ್ತಿಗಳ ಮುಪ್ಪಿನ ಬದುಕು ಬಹಳ ಸುಂದರವಾಗಿರುತ್ತದೆ.

ಕನ್ನಡಪ್ರಭ ವಾರ್ತೆ ನಾಗಮಂಗಲಸಿಕ್ಕಿರುವ ಅವಕಾಶವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡು ಯುವ ಸಮುದಾಯ ಪ್ರತಿಭಾವಂತರಾದರೆ ಅಜ್ಞಾನ ಕೀಳರಿಮೆ ಮತ್ತು ಅವಮಾನಗಳನ್ನು ಹೋಗಲಾಡಿಸುವ ಶಕ್ತಿ ಪಡೆದುಕೊಳ್ಳಬಹುದು ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.

ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಬಿಜಿಎಸ್ ಸಭಾಂಗಣದಲ್ಲಿ ಭೈರವೈಕ್ಯ ಡಾ.ಬಾಲಗಂಗಾಧರನಾಥ ಸ್ವಾಮೀಜಿಯವರ 79ನೇ ಜಯಂತ್ಯುತ್ಸವ ಹಾಗೂ 11ನೇ ವರ್ಷದ ಸಂಸ್ಮರಣಾ ಮಹೋತ್ಸವದ ಪ್ರಯುಕ್ತ ಭಾನುವಾರ ಆಯೋಜಿಸಿದ್ದ ಯುವ ಸಂಗಮ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.

ಮಳೆಗಾಲದಲ್ಲಿ ರೈತ ಸ್ವಲ್ಪ ಎಡವಿ ಸೋಮಾರಿಯಾದರೆ ಬೇಸಿಗೆಯಲ್ಲಿ ಬರುವ ಬವಣೆಗಳನ್ನು ನೀಗಿಸಲು ಯಾರಿಂದಲೂ ಆಗುವುದಿಲ್ಲ. ಯಾವ ರೈತ ಮಳೆಗಾಲದಲ್ಲಿ ಎಚ್ಚೆತ್ತು ದುಡಿಯುತ್ತಾರೆಯೋ ಅಂತಹ ವ್ಯಕ್ತಿಗಳ ಮುಪ್ಪಿನ ಬದುಕು ಬಹಳ ಸುಂದರವಾಗಿರುತ್ತದೆ ಎಂದರು.

ಮಳೆಗಾಲದಲ್ಲಿ ಸೋಮಾರಿಗಳಾಗಿ ನಂತರ ಬೇಸಿಗೆಯಲ್ಲಿ ಊಟ ನೀರು ಬೇಕೆಂದರೆ ಸಿಗುವುದಿಲ್ಲವೋ ಅದೇ ರೀತಿ ಯುವಕರು ತಮ್ಮ ಬದುಕಿನ ಈ ಯೌವ್ವನದ ದಿನಗಳನ್ನು ವ್ಯರ್ಥ ಮಾಡಿಕೊಂಡರೆ ನಂತರದಲ್ಲಿ ಜೀವನ ಪೂರ್ತಿ ಕೊಡಗಬೇಕಾಗುತ್ತದೆ ಎಂದರು.

ಯಾರು ತಮ್ಮ ಬದುಕನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡು ಎತ್ತರಕ್ಕೆ ಹೋಗುತ್ತಾರೋ ಅವರು ತಮ್ಮ ಬದುಕಿನ ಜೊತೆಗೆ ಜಗತ್ತು ಮತ್ತು ದೇಶವನ್ನು ಉದ್ಧಾರ ಮಾಡಬಹುದು. ಇದು ಭೈರವೈಕ್ಯಶ್ರೀಗಳ ಆಶಯವೂ ಆಗಿತ್ತು ಎಂದರು.

70ರ ದಶಕದಲ್ಲಿ ಜಗತ್ತಿಗೆ ಹಲವಾರು ಮಹಾತ್ಮರು ಹುಟ್ಟಿಬಾರದಿದ್ದರೆ ಆ ಕಾಲಕ್ಕೆ ಮಹತ್ವವೇ ಇರುತ್ತಿರಲಿಲ್ಲ. ಕೆಲವೊಂದು ವ್ಯಕ್ತಿಗಳು ಆ ಕಾಲದಿಂದ ದೊಡ್ಡವರಾದರೆ, ಇನ್ನು ಜಡವಾಗಿ ಬಿದ್ದಿರುವ ಕಾಲದಲ್ಲಿ ಹುಟ್ಟುವ ಕೆಲ ವ್ಯಕ್ತಿಗಳು ಆ ಕಾಲಕ್ಕೇ ಮಹತ್ವ ಕೊಟ್ಟು ಹೋಗುತ್ತಾರೆ. ಅಂತಹ ಅಗ್ರ ಪಂಥಿಗೆ ಸೇರಿದ ಮಹಾತ್ಮರಲ್ಲಿ ಭೈರವೈಕ್ಯ ಬಾಲಗಂಗಾಧರನಾಥಶ್ರೀಗಳೂ ಸಹ ಒಬ್ಬರು ಎಂದು ಸ್ಮರಿಸಿದರು.

ಸಮಾರಂಭದಲ್ಲಿ ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥಸ್ವಾಮೀಜಿ ಮತ್ತು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿದರು. ಇಂಗ್ಲೇಡಿನ ಉದ್ಯಮಿ ಹರೀಶ್‌ರಾಮಯ್ಯ, ಮೈಸೂರಿನ ಶಾಂತವೇರಿ ಗೋಪಾಲಗೌಡ ಆಸ್ಪತ್ರೆಯ ವ್ಯವಸ್ಥಾಕ ನಿರ್ದೇಶಕರಾದ ಡಾ. ಸಂತೃಪ್ತ್‌ಗೌಡ ಮತ್ತು ಡಾ.ಶುಶ್ರೂತ್‌ಗೌಡ ಸೇರಿದಂತೆ ಸಹಸ್ರಾರು ಮಂದಿ ಯುವಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಇದ್ದರು.

Share this article