ವೀರವನಿತೆ ಚೆನ್ನಮ್ಮ ಆದರ್ಶ ಅಳವಡಿಸಿಕೊಳ್ಳಿ: ಜಿಲ್ಲಾಧಿಕಾರಿ

KannadaprabhaNewsNetwork |  
Published : Oct 24, 2026, 01:45 AM IST
ಕ್ಯಾಪ್ಷನ23ಕೆಡಿವಿಜಿ37 ದಾವಣಗೆರೆಯಲ್ಲಿ ಜಿಲ್ಲಾಡಳಿತದಿಂದ ಕಿತ್ತೂರು ರಾಣಿ ಚನ್ನಮ್ಮ ಜಯಂತ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಡಿಸಿ ಜಿ.ಎಂ.ಗಂಗಾಧರ ಸ್ವಾಮಿ, ಎಸ್ಪಿ ಡಾ.ಎಚ್‌.ಟಿ.ಶೇಖರ್‌, ಎಡಿಸಿ ಶೀಲವಂತ ಶಿವಕುಮಾರ, ಸಮಾಜದ ಮುಖಂಡ ಬಿ.ಸಿ.ಉಮಾಪತಿ ಇತರರು ಇದ್ದರು.  | Kannada Prabha

ಸಾರಾಂಶ

ಭಾರತದ ಸ್ವಾತಂತ್ರ‍್ಯ ಸಂಗ್ರಾಮದ ಇತಿಹಾಸದಲ್ಲಿ ಕಿತ್ತೂರು ರಾಣಿ ಚೆನ್ನಮ್ಮನವರ ಹೆಸರು ಅಜರಾಮರ. ದೇಶದ ಸ್ವಾತಂತ್ರ‍್ಯ, ಮನುಷ್ಯನ ಸ್ವಾತಂತ್ರ‍್ಯ ಹಾಗೂ ಸ್ವಾಭಿಮಾನಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ವೀರನಾರಿ ಅವರ ಜೀವನ, ಹೋರಾಟ ಮತ್ತು ಆದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ತಿಳಿಸಿದ್ದಾರೆ.

- ಡಿಸಿ ಕಚೇರಿ ಸಭಾಂಗಣದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತ್ಯುತ್ಸವ । ಅಧಿಕಾರಿಗಳು, ಗಣ್ಯರು ಉಪಸ್ಥಿತಿ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಭಾರತದ ಸ್ವಾತಂತ್ರ‍್ಯ ಸಂಗ್ರಾಮದ ಇತಿಹಾಸದಲ್ಲಿ ಕಿತ್ತೂರು ರಾಣಿ ಚೆನ್ನಮ್ಮನವರ ಹೆಸರು ಅಜರಾಮರ. ದೇಶದ ಸ್ವಾತಂತ್ರ‍್ಯ, ಮನುಷ್ಯನ ಸ್ವಾತಂತ್ರ‍್ಯ ಹಾಗೂ ಸ್ವಾಭಿಮಾನಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ವೀರನಾರಿ ಅವರ ಜೀವನ, ಹೋರಾಟ ಮತ್ತು ಆದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಏರ್ಪಡಿಸಿದ್ದ ಕಿತ್ತೂರು ರಾಣಿ ಚೆನ್ನಮ್ಮ ಜಯಂತ್ಯುತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಜಪ್ರಭುತ್ವದ ಕಾಲದಲ್ಲೂ ಕಿತ್ತೂರು ರಾಣಿ ಚೆನ್ನಮ್ಮನವರ ಆಡಳಿತವು ಕೇವಲ ಒಬ್ಬರ ನಿರ್ಧಾರಕ್ಕೆ ಸೀಮಿತವಾಗಿರಲಿಲ್ಲ. ಪ್ರಜಾಪ್ರಭುತ್ವ ಮಾದರಿಯಲ್ಲಿ ಮಂತ್ರಿಮಂಡಲವನ್ನು ರಚಿಸಿ, ಅದರ ಸಲಹೆ ಮತ್ತು ಸೂಚನೆಗಳ ಮೇರೆಗೆ ರಾಜ್ಯವನ್ನು ಅತ್ಯಂತ ಯಶಸ್ವಿಯಾಗಿ ಮುನ್ನಡೆಸುತ್ತಿದ್ದರು. ಇಂದಿನ ಆಧುನಿಕ ಜಗತ್ತಿನಲ್ಲಿ ಮಹಿಳಾ ಸಮಾನತೆಯ ಬಗ್ಗೆ ಚರ್ಚೆಗಳು ನಡೆಯುತ್ತಿದ್ದರೆ, ಅಂದೇ ಅಂದರೆ 200 ವರ್ಷಗಳ ಹಿಂದೆಯೇ ರಾಣಿ ಚೆನ್ನಮ್ಮ ಅವರು ಮಹಿಳೆಯರಿಗೆ ಆಡಳಿತದಲ್ಲಿ ಮತ್ತು ಸಮಾಜದಲ್ಲಿ ಸಮಾನ ಅವಕಾಶಗಳನ್ನು ಕಲ್ಪಿಸಿಕೊಟ್ಟಿದ್ದರು ಎಂದರು.

ಬ್ರಿಟಿಷರು ದೇಶದಲ್ಲಿ ತಮ್ಮ ಸಾಮ್ರಾಜ್ಯ ವಿಸ್ತರಣೆಗಾಗಿ ಕುಟಿಲ ನೀತಿಗಳನ್ನು ಅನುಸರಿಸುತ್ತಿದ್ದರು. ಆದರೆ, ರಾಣಿ ಚೆನ್ನಮ್ಮನವರು ಬ್ರಿಟಿಷರ ಈ ಅನ್ಯಾಯದ ನೀತಿಯನ್ನು ನೇರವಾಗಿ ವಿರೋಧಿಸಿ, ಅವರ ವಿರುದ್ಧ ಧೀರ ಹೋರಾಟವನ್ನು ಸಂಘಟಿಸಿದರು. ಇವರ ಆದರ್ಶಗಳು ಕೇವಲ ಕಿತ್ತೂರಿಗೆ ಮಾತ್ರವಲ್ಲದೆ, ಇಡೀ ದೇಶಕ್ಕೆ ಹಾಗೂ ಜಗತ್ತಿಗೆ ಸ್ವಾಭಿಮಾನದ ಪಾಠ ಕಲಿಸಿವೆ. ಇವರ ದಿಟ್ಟತನ ಮತ್ತು ಧೈರ್ಯವು ಭಾರತೀಯರ ಸ್ವಾಭಿಮಾನದ ಪ್ರತೀಕವಾಗಿದೆ ಎಂದು ತಿಳಿಸಿದರು.

ಆ ಕಾಲದಲ್ಲೂ ವಿವಿಧ ದಂಗೆಗಳು, ಅಹಿಂಸಾತ್ಮಕ ಹಾಗೂ ಹಿಂಸಾತ್ಮಕ ಹೋರಾಟಗಳ ಮೂಲಕ ದೇಶಪ್ರೇಮಿಗಳನ್ನು ಒಟ್ಟುಗೂಡಿಸುವಲ್ಲಿ ರಾಣಿ ಚೆನ್ನಮ್ಮ ಯಶಸ್ವಿಯಾಗಿದ್ದರು. ದೇಶಪ್ರೇಮದ ಜೊತೆಗೆ ನಮ್ಮ ಸಂಸ್ಕೃತಿ, ಭಾಷೆ, ಧರ್ಮ ಮತ್ತು ಅಸ್ಮಿತೆ ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ರಾಣಿ ಚೆನ್ನಮ್ಮನವರು ವೀರಶೈವ ಧರ್ಮದ ಶುದ್ಧಾಚರಣೆ ಪಾಲಿಸುತ್ತಾ, ನಮ್ಮ ಸಂಸ್ಕೃತಿಯನ್ನು ಎತ್ತಿಹಿಡಿದರು ಎಂದರು.

ಕೇವಲ ಸಮಾಜ ಪ್ರೇಮಿಯಷ್ಟೇ ಅಲ್ಲದೇ, ದೇಶಪ್ರೇಮವನ್ನು ಎಲ್ಲರಲ್ಲೂ ಮೂಡಿಸುವ ಮೂಲಕ ಸೀಮಿತ ಗಡಿಗಳಿಂದ ಹೊರಬಂದು ವಿಶಾಲ ಭಾರತದ ಕಲ್ಪನೆಯನ್ನು ಸಾಕಾರಗೊಳಿಸಲು ಅವರು ಶ್ರಮಿಸಿದರು. ಕರ್ನಾಟಕ ಸರ್ಕಾರವು ಕಿತ್ತೂರು ರಾಣಿ ಚೆನ್ನಮ್ಮನವರ ಜಯಂತಿಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸುತ್ತಾ, ಅವರ ಆದರ್ಶಗಳನ್ನು ಯುವ ಜನತೆಗೆ ತಲುಪಿಸುವ ಕಾರ್ಯ ಮಾಡುತ್ತಿದೆ ಎಂದು ತಿಳಿಸಿದರು.

ರಾಣಿ ಚೆನ್ನಮ್ಮನವರ ದೇಶಭಕ್ತಿ, ವೀರಾವೇಶ ಮತ್ತು ತ್ಯಾಗದ ಗುಣಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ನಮನ. ಕನ್ನಡ ನಾಡು-ನುಡಿಯ ರಕ್ಷಣೆಗಾಗಿ ಮತ್ತು ಮಹಿಳಾ ಸಬಲೀಕರಣಕ್ಕಾಗಿ ಕಿತ್ತೂರು ರಾಣಿ ಚೆನ್ನಮ್ಮನವರು ಹಾಕಿ ಕೊಟ್ಟಿರುವ ಈ ಮಾರ್ಗವು ಎಂದೆಂದಿಗೂ ದಾರಿದೀಪವಾಗಿದೆ ಎಂದರು.

ಈ ಸಂದರ್ಭ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎಚ್.ಟಿ.ಶೇಖರ್, ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್, ಮಹಾನಗರ ಪಾಲಿಕೆ ಆಯುಕ್ತ ಡಾ.ಮಹಾಂತೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಪಂಚಮಸಾಲಿ ಸಮಾಜದ ಮುಖಂಡ ಬಿ.ಸಿ. ಉಮಾಪತಿ, ಸಮಾಜ ಬಾಂಧವರು, ಇತರರು ಉಪಸ್ಥಿತರಿದ್ದರು.

- - -

-23ಕೆಡಿವಿಜಿ37:

ದಾವಣಗೆರೆಯಲ್ಲಿ ಜಿಲ್ಲಾಡಳಿತದಿಂದ ಕಿತ್ತೂರು ರಾಣಿ ಚನ್ನಮ್ಮ ಜಯಂತ್ಯುತ್ಸವ ಕಾರ್ಯಕ್ರಮ ನಡೆಯಿತು. ಡಿಸಿ ಜಿ.ಎಂ. ಗಂಗಾಧರ ಸ್ವಾಮಿ, ಎಸ್ಪಿ ಡಾ. ಎಚ್‌.ಟಿ.ಶೇಖರ್‌, ಎಡಿಸಿ ಶೀಲವಂತ ಶಿವಕುಮಾರ, ಸಮಾಜದ ಮುಖಂಡ ಬಿ.ಸಿ.ಉಮಾಪತಿ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ಉಜ್ವಲ ಭವಿಷ್ಯ ರೂಪಿಸಲು ಪೋಷಕರು ಪಣ ತೊಡಬೇಕು: ನಯನಾ ಮೋಟಮ್ಮ
ಮತದಾನ ಕೇಂದ್ರಗಳಿಗೆ ಸಚಿವ ಕೆ.ಎಸ್.ಬಸವಂತಪ್ಪ ಭೇಟಿ