ಕಾಯಕ ತತ್ವ ಮೈಗೂಡಿಸಿಕೊಳ್ಳಿ

KannadaprabhaNewsNetwork | Published : Apr 1, 2025 12:51 AM

ಸಾರಾಂಶ

ಶರಣರ, ಸಂತರ, ದಾರ್ಶನಿಕರ ಜೀವನಗಾಥೆ ಆಧಾರಿತ ಪುರಾಣ-ಪ್ರವಚನಗಳನ್ನು ಕೇಳುವದರಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ದೊರೆತು, ಮನಸ್ಸಿಗೆ ಅಂಟಿದ ದುರಾಲೋಚನೆಗಳು ದೂರವಾಗುತ್ತವೆ

ಕುಕನೂರು: ಕಾಯಕ ತತ್ವ ಮೈಗೂಡಿಸಿಕೊಳ್ಳಬೇಕು ಎಂದು ಚಿಕೇನಕೊಪ್ಪದ ಶ್ರೀಶಿವಶಾಂತವೀರ ಶರಣರು ಹೇಳಿದರು.

ತಾಲೂಕಿನ ಚಿಕೇನಕೊಪ್ಪ ಗ್ರಾಮದಲ್ಲಿ ಭಾನುವಾರ ಯುಗಾದಿ ಪಾಡ್ಯದಂದು ಶ್ರೀಭೀರಲಿಂಗೇಶ್ವರ ಪುರಾಣ ಮಹಾಮಂಗಲ ಮತ್ತು ಜಾತ್ರಾಮಹೋತ್ಸವದ ಧಾರ್ಮಿಕ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಶರಣರ, ಸಂತರ, ದಾರ್ಶನಿಕರ ಜೀವನಗಾಥೆ ಆಧಾರಿತ ಪುರಾಣ-ಪ್ರವಚನಗಳನ್ನು ಕೇಳುವದರಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ದೊರೆತು, ಮನಸ್ಸಿಗೆ ಅಂಟಿದ ದುರಾಲೋಚನೆಗಳು ದೂರವಾಗುತ್ತವೆ. ಹಾಲುಮತ ಸಮಾಜದ ಪುಣ್ಯಪುರುಷನಾದ ಶ್ರೀ ಭೀರಲಿಂಗೇಶ್ವರರು ಪವಾಡ ಪುರುಷರಾಗಿದ್ದರು. ಭಕ್ತರ ಹಾಗೂ ಮನುಕುಲದ ಉದ್ದಾರಕ್ಕಾಗಿ ಶ್ರಮಿಸಿದರು. ಅವರ ಹಾದಿಯಲ್ಲಿ ಪ್ರತಿಯೊಬ್ಬರು ಸಾಗಬೇಕಿದೆ ಎಂದರು.

ಹಾಲುಮತ ಸಮಾಜದವರು ನಿರ್ಸಗದ ಆರಾಧಕರು. ವಿಶ್ವಾಸ, ಪ್ರಾಮಾಣಿಕತೆ, ನಂಬಿಕೆ ಸಂಕೇತ ಹಾಲುಮತ ಸಮಾಜವಾಗಿದೆ. ಕನಕದಾಸರು ತಮ್ಮ ಕೃತಿಗಳಲ್ಲಿ ಹುಟ್ಟಿನಿಂದ ಬಂದ ಜಾತಿಗೆ ಮಹತ್ವಕೊಡದೆ ಮನುಷ್ಯರ ಆಚಾರ-ವಿಚಾರ ಮತ್ತು ನಡೆ-ನುಡಿಗಳಿಗೆ ಪ್ರಾಶಸ್ಯ ಕೊಡುವ ಮೂಲಕ ಎಲ್ಲರೂ ಒಂದೇ ಮನುಷ್ಯ ಜಾತಿ ಎಂದು ಸಾರಿ ಹೇಳಿದ ದಾಸರಲ್ಲಿ ಕನಕದಾಸರು ಶ್ರೇಷ್ಠರಾಗಿದ್ದಾರೆ ಎಂದರು.

ಕಾಯಕ ತತ್ವ ರೂಢಿಸಿಕೊಳ್ಳಿ: ಸಮಾಜದಲ್ಲಿನ ಅಸಮಾನತೆ,ಅಂಧಕಾರ ಮತ್ತು ಅಜ್ಞಾನ ದೂರ ಮಾಡಲು ಶ್ರಮಿಸಿದ ಶರಣರ ಕಾಯಕ ತತ್ವಗಳನ್ನು ಮೈಗೂಡಿಸಿಕೊಂಡರೆ ಮಾತ್ರ ಸಂಸಾರಿಕ ಬದುಕು ಸುಗಮವಾಗಿ ಸಾಗುತ್ತದೆ ಎಂದು ಹೇಳಿದರು.

ಗುತ್ತಿಗೆದಾರ ವೀರಪ್ಪ ಬಿಸನಳ್ಳಿ ಮಾತನಾಡಿ, ಹಾಲಿನಂತಿರುವ ಹಾಲುಮತ ಸಮಾಜ ಅತ್ಯಂತ ಪ್ರಾಮಾಣಿಕ, ವಿಶ್ವಾಸವುಳ್ಳ ಜನಾಂಗ. ಈ ನಾಡಿಗೆ ಹಾಲುಮತ ಸಮಾಜದವರ ನೀಡಿದ ಕೊಡುಗೆ ಅಪಾರ ಎಂದರು.

ವೀರ ಸಂಗೊಳ್ಳಿ ರಾಯಣ್ಣನ ದೇಶಾಭಿಮಾನವನ್ನು ನಾವು ಸ್ಮರಿಸುವ ಮೂಲಕ ಆತನ ಧೈರ್ಯ, ಸಾಹಸ ಎಂದೂ ಮರೆಯಲೂ ಸಾಧ್ಯವಿಲ್ಲ.ಅಂಥವರ ತತ್ವಾದರ್ಶ ಇಂದಿನ ಯುವಕರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಜತೆಗೆ ಪ್ರತಿಯೊಬ್ಬರು ಹಾಲುಮತ ಸಮಾಜದವರು ಮಕ್ಕಳಿಗೆ ಶಿಕ್ಷಣ ಕೊಡಿಸುವ ಕಾರ್ಯ ಮಾಡಿದಾಗ ಸಮಾಜ ಇನ್ನಷ್ಟು ರಾಜಕೀಯ,ಸಾಮಾಜಿಕ, ಆರ್ಥಿಕವಾಗಿ ಅಭಿವೃದ್ಧಿಗೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಹಾಲುಮತ ಸಮಾಜದ ಗುರು ಶರಣಮ್ಮ ಗುರುವಿನಮಠ, ಪುರಾಣ ಪ್ರವನಕಾರ ಶಿವಕುಮಾರ, ನಾಗಯ್ಯ, ವೆಂಕಟರಡ್ಡಿ, ಕಳಕಪ್ಪ ಕಂಬಳಿ, ಶ್ರೀನಿವಾಸ ತಿಮ್ಮಾಪೂರ, ಫಿಕಾರ್ಡ ಬ್ಯಾಂಕ್ ಉಪಾಧ್ಯಕ್ಷ ಭೀಮರಡ್ಡಿ ಶ್ಯಾಡ್ಲಗೇರಿ, ಗ್ರಾಪಂ ಸದಸ್ಯರಾದ ಮಹೇಂದ್ರಕುಮಾರ ಗದಗಿನ, ಚಿದಾನಂದ ಮ್ಯಾಗಳಮನಿ, ವಿಜಯಲಕ್ಷ್ಮೀ ಮಂಗಳೂರು, ಲಲಿತಾ ಅಡಗಿಮನಿ, ಈಶಪ್ಪ ವಕ್ಕಳದ, ಶ್ರೀಕಾಂತ ಅಂಕಲಿ, ಬಸವರಾಜ ತೆಕ್ಕಲಕೋಟಿ, ಹನುಮಪ್ಪ ದೊಡ್ದಮನಿ, ಚೆನ್ನಪ್ಪ ಬಿಸನಳ್ಳಿ, ಅಶೋಕ ಅಣಗೌಡ್ರ, ಕನಕಪ್ಪ ಚಲವಾದಿ, ಕಳಕಪ್ಪ ಚಲವಾದಿ, ಬಸವರಾಜ ಚಲವಾದಿ, ಸಂಗಪ್ಪ ಅಡಗಿಮನಿ, ಬಾಳಪ್ಪ ಬಾರಕೇರ, ಮಹೇಶ ಕವಳಕೇರಿ, ಪ್ರಕಾಶ ಕಂಬಳಿ ಇತರರಿದ್ದರು.

ಭೀರಲಿಂಗೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಬದಾಮಿ ತಾಲೂಕು ಶ್ರೀ ಹಿರಿಯಮ್ಮದೇವಿ ಡೊಳ್ಳಿನ ಗಾಯನ ಸಂಘದಿಂದ ಡೊಳ್ಳಿನ ಪದಗಳ ಕಾರ್ಯಕ್ರಮ ಜರುಗಿತು. ಪತ್ರಕರ್ತ ಮಲ್ಲು ಮಾಟರಂಗಿ ಕಾರ್ಯಕ್ರಮ ಉದ್ಘಾಟಿಸಿದರು.

Share this article