ಶಿವಾನಂದ ಪಿ.ಮಹಾಬಲಶೆಟ್ಟಿ
ನೇಕಾರಿಕೆ ಉದ್ಯಮದಲ್ಲಿ ಉಪ ಉದ್ಯೋಗಗಳಲ್ಲಿ ಸಕ್ರಿಯವಾಗಿದ್ದ ಮಹಿಳೆಯರು ಇದೀಗ ಜವಳಿ ಉದ್ಯಮ ಅವನತಿಯ ಹಾದಿ ಹಿಡಿದಿರುವುದರಿಂದ ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ಉಂಟಾಗಿದೆ. ಹೀಗಾಗಿ ಅನಿವಾರ್ಯವಾಗಿ ಕುಲಕಸುಬು ತೊರೆದು ಇತರೆ ಉದ್ಯೋಗಗಳತ್ತ ಮುಖ ಮಾಡಿದ್ದಾರೆ.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜವಳಿ ಕ್ಷೇತ್ರದತ್ತ ಕೊಂಚವೂ ಗಮನ ಹರಿಸದಿರುವುದು ಉತ್ತರ ಕರ್ನಾಟಕದಲ್ಲಿ ಜವಳಿ ಕ್ಷೇತ್ರದ ಪ್ರಮುಖ ಜಿಲ್ಲೆಯಾಗಿರುವ ಬಾಗಲಕೋಟೆಯ ವಿವಿಧ ಪ್ರದೇಶಗಳ ಅದರಲ್ಲೂ ಬಹುಮುಖ್ಯವಾಗಿ ರಬಕವಿ-ಬನಹಟ್ಟಿ ತಾಲೂಕು ಸೇರಿದಂತೆ ಅವಳಿ ನಗರದಲ್ಲಿ ನೇಕಾರಿಕೆ ಚರಮಸ್ಥಿತಿಗೆ ತಲುಪುವಂತಾಗಿದೆ.ಸೀರೆ ಉತ್ಪಾದನೆಯಲ್ಲಿ ಪುರುಷರಷ್ಟೇ ಸಮಾನವಾಗಿ ಮಹಿಳೆಯರು ನೇಯ್ಗೆ ಸೇರಿದಂತೆ ಉಪ ಉದ್ಯೋಗಗಳಾದ ಕೋನ್ ವೈಂಡಿಂಗ್, ಕಂಡಿಕೆ, ನೂಲು ಸುತ್ತುವುದು ಮತ್ತಿತರ ಕೆಲಸ ನಿರ್ವಹಿಸುತ್ತಿದ್ದರು. ಕಳೆದೆರಡು ವರ್ಷಗಳಿಂದ ಮಹಿಳೆಯರಿಂದ ನಡೆಯುವ ವೈಂಡರ್ ಕೆಲಸ ಸಂಪೂರ್ಣ ನಿಂತಿದೆ. ಬೆರಳಣಿಕೆಯಷ್ಟು ವೈಂಡರ್‌ಗಳು ಮಾತ್ರ ಸದ್ಯ ಈ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿವೆ. ಮಾರುಕಟ್ಟೆ ವೈಫಲ್ಯದ ಹಿನ್ನೆಲೆ ಸೀರೆ ಉತ್ಪಾದನೆಯೇ ಐಸಿಯು ಘಟಕದಲ್ಲಿರುವುದರಿಂದ ಉಪ ಉತ್ಪನ್ನಗಳ ಕಾಯಕ ಕೇಳುವವರರ್‍ಯಾರು? ಇದರಿಂದ ನೇಕಾರ ಮಹಿಳೆಯರಿಗೆ ದೊರೆಯುತ್ತಿದ್ದ ಮಜೂರಿಗೆ ಕತ್ತರಿ ಬೀಳುತ್ತಿದ್ದು, ನಿಯಮಿತ ನೇಯ್ಗೆಗೆ ಮಾತ್ರ ಅವಕಾಶ ಸಿಗುತ್ತಿರುವುದರಿಂದ ಬದುಕಲು ಬವಣೆ ಪಡುತ್ತಿರುವ ಕುಟುಂಬಗಳ ಮಹಿಳೆಯರು ಕೆಲಸಕ್ಕಾಗಿ ಹರಸಾಹಸ ಮಾಡುವಂತಾಗಿದೆ.
ಮಜೂರಿ ತೃಪ್ತಿದಾಯಕವಾಗಿಲ್ಲ : ನೂಲು ಸುತ್ತುವ (ವೈಂಡರ್) ಕಾಯಕ ಇಡೀ ದಿನ ಮಾಡಿದರೆ ₹೧೦೦ ರಿಂದ ₹೧೫೦ ಮಾತ್ರ ವೇತನ ಸಿಗುತ್ತದೆ. ನೂಲು ಸುತ್ತುವಿಕೆಯಲ್ಲಿ ಮಹಿಳೆಯರ ಪ್ರಧಾನ ಕಾಯಕವಾಗಿತ್ತು. ಇದೀಗ ನೇಕಾರಿಕೆಯೇ ದುಃಸ್ಥಿತಿಯಲ್ಲಿರುವ ಕಾರಣ ಸಂಪೂರ್ಣ ನೇಪಥ್ಯಕ್ಕೆ ಸರಿದಿದೆ.
ಕಳೆದರಡು ವರ್ಷಗಳಿಂದ ದೊಡ್ಡ ದೊಡ್ಡ ಕಾರ್ಖಾನೆಗಳು ತಯಾರಿಸಿದ ಕೋನ್‌ಗಳೇ ಮಾರುಕಟ್ಟೆಯಲ್ಲಿವೆ. ಹೀಗಾಗಿ ನೇಕಾರ ಮಾಲೀಕರಿಗೆ ಮಜೂರಿಯೊಂದಿಗೆ ಕಿರಿಕಿರಿ ತಪ್ಪಿಸಲು ರೇಡಿಮೇಡ್‌ಗೆ ಮೊರೆ ಹೋಗುತ್ತಿದ್ದಾರೆ. ಸೀರೆ ಉತ್ಪಾದನೆ ಕುಸಿತದ ಕಾರಣ ಹೆಚ್ಚು ಬಂಡವಾಳ ಹೂಡಲು ಅಸಾಧ್ಯವಾಗಿದ್ದು, ಗುಣಮಟ್ಟವಿಲ್ಲದಿದ್ದರೂ ಬಹು ಬೇಗ ದೊರಕುತ್ತಿರುವುದು ಹಾಗೂ ಕಾರ್ಮಿಕರ ಅಗತ್ಯತೆಯೂ ಇಲ್ಲವಾಗಿದೆ.
ಮೂಲ ಕಾಯಕ ಮಾಯ : ಒಟ್ಟಾರೆ ತಲೆತಲಾಂತರದಿಂದ ಬಂದಿದ್ದ ವೈಂಡರ್ ಕಾಯಕಕ್ಕೆ ಸಂಪೂರ್ಣ ಇತಿಶ್ರೀ ಹಾಡುವಲ್ಲಿ ಕಾರಣವಾಗಿದ್ದು, ಮೂಲ ಕಾಯಕದಿಂದ ಬಹುತೇಕ ಕುಟುಂಬಗಳು ದೂರ ಉಳಿಯಬೇಕಾದ ಪರಿಸ್ಥಿತಿ ಎದುರಾಗಿದೆ. ನೇಕಾರಿಕೆ ಉಳಿದರೆ ಮಾತ್ರ ಇತರೆ ಉಪ ಉದ್ಯೋಗಗಳ ಉಳಿವು ಸಾಧ್ಯ. ಈ ನಿಟ್ಟಿನಲ್ಲಿ ಪ್ರಯತ್ನ ಮಾಡದೇ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕಣ್ಮುಚ್ಚಿ ಕುಳಿತಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಬಿಗಾಡಿಯಿಸಿದೆ.
-ರವಿ. ದೇಸಾಯಿ, ಪ್ರಶಾಂತ ಪಾಲಭಾಂವಿ. ಮಾಲೀಕರು ಪಾಲ್‌ಗಿರಿ ಟೆಕ್ಸ್ಟೈಲ್ಸ್, ವಿದ್ಯಾನಗರ ರಬಕವಿ
-ಶಿವಲಿಂಗ ಟಿರಕಿ. ಅಧ್ಯಕ್ಷರು, ಕರ್ನಾಟಕ ರಾಜ್ಯ ನೇಕಾರ ಸೇವಾ ಕೇಂದ್ರ.