ಹಿಂದು ಧರ್ಮ ವಿಶಾಲ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆ ಹೊಂದಿದೆ - ನಮ್ಮವರೆಂದು ಅಪ್ಪಿಕೊಳ್ಳುವುದೇ ನಮ್ಮ ಸಂಕೇತ

KannadaprabhaNewsNetwork |  
Published : Sep 05, 2024, 02:20 AM ISTUpdated : Sep 05, 2024, 07:53 AM IST
ಧರ್ಮಸಭೆಯಲ್ಲಿ ಶಾಸಕರಾದ ಸಿ.ಎಸ್.ನಾಡಗೌಡ ಮಾತನಾಡಿದರು. | Kannada Prabha

ಸಾರಾಂಶ

ನಾಲತವಾಡದಲ್ಲಿ ನಡೆದ ಮಲಘಾಣದ ಶಾಂತಲಿಂಗ ಶಿವಾಚಾರ್ಯರ ಮೌನಾನುಷ್ಠಾನ ಮುಕ್ತಾಯ ಸಮಾರಂಭದಲ್ಲಿ ಧರ್ಮದ ಮಹತ್ವ, ಸರ್ವರ ಏಳಿಗೆ ಮತ್ತು ಸಮಬಾಳುವಿಕೆಯ ಬಗ್ಗೆ ಚರ್ಚಿಸಲಾಯಿತು.  

 ನಾಲತವಾಡ :  ಹಿಂದು ಧರ್ಮ ವಿಶಾಲವಾದ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆ ಹೊಂದಿದ್ದು, ಸಾವಿರಾರು ವರ್ಷಗಳ ಇತಿಹಾಸವಿದೆ ಎಂದು ಸಾಬೂನ ಮತ್ತು ಮಾರ್ಜಿಕ ನಿಗಮದ ಅಧ್ಯಕ್ಷರು, ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಹೇಳಿದರು.

ಸಮೀಪದ ಅಮರೇಶ್ವರ ದೇವಸ್ಥಾನದಲ್ಲಿ ನಡೆದ ಮಲಘಾಣದ ಶಾಂತಲಿಂಗ ಶಿವಾಚಾರ್ಯರ ಮೌನಾನುಷ್ಠಾನ ಮುಕ್ತಾಯ ಮತ್ತು ಧಾರ್ಮಿಕ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ವರ ಏಳಿಗೆ, ಸಮಪಾಲು, ಸಮಬಾಳಿಗೆ ಧರ್ಮ ಅನ್ನುತ್ತಾರೆ. ಇವತ್ತು ಎಲ್ಲೊ ಒಂದು ಕಡೆ ಧರ್ಮಕ್ಕೆ ಬೇರೆ ಅರ್ಥ ಕಲ್ಪಿಸಲಾಗುತ್ತಿದೆ. ಎಲ್ಲರನ್ನು ಪ್ರೀತಿಸುವುದರ ಜತೆಗೆ ನಮ್ಮವರು ಎಂದು ಅಪ್ಪಿಕೊಳ್ಳುವುದೇ ಧರ್ಮದ ಸಂಕೇತವಾಗಿದೆ ಎಂದರು.

ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಮಾತನಾಡಿ, ಶರಣರನ್ನು ಕರೆಸಿಕೊಳ್ಳುವ ಶಕ್ತಿ ಈ ನೆಲಕ್ಕಿದೆ. ನಮ್ಮ ದೇಶ ಧರ್ಮ, ಸಂಸ್ಕೃತಿಯಲ್ಲಿ ಬಹಳ ಶ್ರೀಮಂತ ದೇಶವಾಗಿದೆ. ನಾವು ಎಲ್ಲರನ್ನು ಅಪ್ಪಿಕೊಳ್ಳುತ್ತೇವೆ. ನಮ್ಮ ದೇಶ ಜಾತ್ಯಾತೀತ ದೇಶವಾಗಿದ್ದು, ಇಲ್ಲಿ ಎಲ್ಲ ಧರ್ಮಕ್ಕೆ ಅವರ ಅವರದ್ದೆ ಒಂದು ವಿಶೇಷತೆಗಳಿವೆ. ಭಾರತ ದೇಶ ಇವತ್ತು ಜಗತ್ತಿಗೆ ಶಾಂತಿಯ ಪಾಠ ಮಾಡುತ್ತಿರುವುದಕ್ಕೆ ಕಾರಣ ಧರ್ಮದ ಸಂಸ್ಕ್ರತಿಯಾಗಿದೆ. 

ನಮ್ಮ ನೆಲದ ಪ್ರತಿ ಮನೆ ಮನೆಯಲ್ಲಿ ಧರ್ಮ ಮತ್ತು ಸಂಸ್ಕೃತಿ ಜೀವಂತವಾಗಿದೆ. ಈ ಹಿಂದೆ ದೇಶದ ಪ್ರತಿಯೊಂದು ಗ್ರಾಮದ ಒಂದೊಂದು ಮಠದಲ್ಲಿ ಕಾಯಕ, ದಾಸೋಹ, ಲಿಂಗಪೂಜೆ, ಸಂಸ್ಕಾರ ಕಲಿಸುತಿದ್ದರು. ಆ ಸಂಸ್ಕ್ರತಿ ಮತ್ತೇ ಇಲ್ಲಿ ಜೀವಂತವಾಗಬೇಕಾಗಿದೆ. ನಮ್ಮ ದುಡಿಮೆಯೇ ಮೊದಲನೆಯ ಭಾಗವನ್ನು ನಾವು ಮಠಗಳಿಗೆ ಕಾಣಿಕೆ ನೀಡಬೇಕು ಅಂದಾಗ ಮಾತ್ರ ನಮ್ಮ ಮಠಗಳು ಬೆಳೆಯಲಿಕ್ಕೆ ಸಾಧ್ಯ, ಮಠಗಳ ಅಭಿವೃದ್ಧಿ ಭಕ್ತರಿಂದ ಆಗಬೇಕೆ ವಿನಃ ವಿಧಾನ ಸೌಧದಿಂದ ಅಲ್ಲ ಎಂದರು. 

ಆಲಮೇಲದ ಚಂದ್ರಶೇಖರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಶ್ರಾವಣ ಮಾಸ ಮನಸ್ಸುಗಳನ್ನು ಶುಚಿಗೊಳಿಸುವ ತಿಂಗಳಾಗಿದೆ. ಮೌನಾನುಷ್ಠಾನದಿಂದ ಈ ನೆಲ ಮತ್ತಷ್ಟು ಪವಿತ್ರವಾಗಿದೆ. ನಾಡಿನ ಮಠ-ಮಾನ್ಯಗಳು ಈ ನಾಡನ್ನು ಸಾಂಸ್ಕ್ರತಿಕವಾಗಿ ಕಟ್ಟಿದ್ದಾರೆ. ಪ್ರಾಣಿಗಳ ಪ್ರೀತಿಯಲ್ಲಿ ಧರ್ಮವಿದೆ ಎಂದರು.ಅಹಿರಸಂಗದ ಮಲ್ಲಿಕಾರ್ಜುನ ಶ್ರೀಗಳು, ಯಂಕಂಚಿಯ ರುದ್ರಮನಿ ಶ್ರಿಗಳು, ಕೆರೂಟಗಿಯ ಶಿವಬಸವ ಶ್ರೀಗಳು, ಮುತ್ತು ಅಂಗಡಿ ಮಾತನಾಡಿದರು. ಡಾ.ಡಿ.ಆರ್.ಮಳಖೇಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವರಾಜ ಹಾದಿಮನಿ ಹಾಗೂ ವಿ.ಎಸ್.ಮಳಗಿ ನೀರೂಪಿಸಿದರು. ವೀರೇಶ ವಾಲಿ ಸಂಗಡಿಗರು ಭಕ್ತಿಗೀತೆ ಹಾಡಿದರು.

ಸಾರೋಟ ಮೆರವಣಿಗೆ:

ಧರ್ಮಸಭೆ ಕಾರ್ಯಕ್ರಮಕ್ಕೂ ಮುನ್ನ ಶರಣ ವೀರೇಶ್ವರ ಮಹಾಮನೆಯಿಂದ ಬೆಳಗ್ಗೆ ಶಾಂತಲಿಂಗ ಶಿವಾಚಾರ್ಯರ ಸಾರೋಟ ಮೆರವಣಿಗೆ ಅದ್ಧೂರಿಯಾಗಿ ಜರುಗಿತು. ಈ ವೇಳೆ ನಾಲತವಾಡದ ಸುರೇಶ ಹಿರೇಮಠ ಶ್ರೀಗಳು, ಶಂಕರರಾವ ದೇಶಮುಖ, ಗುರುಪ್ರಸಾದ ದೇಶಮುಖ, ಎಂ.ಎಸ್.ಪಾಟೀಲ, ವೀರಪ್ಪ ಸವದತ್ತಿ, ಶಂಕರಗೌಡ ಹಿರೇಗೌಡರ, ಎ.ಜಿ.ಗಂಗನಗೌಡರ, ಹಾಗೂ ಸದ್ಭಕ್ತರು ಉಪಸ್ಥಿತರಿದ್ದರು.

ದೇವರನ್ನು ಹುಡಕಲು ಪ್ರಯತ್ನ ಮಾಡುವವರು ತಮ್ಮ ಅಂತರಂಗವನ್ನು ಶುದ್ಧೀಕರಣ ಮಾಡಿಕೊಳ್ಳಬೇಕು. ಅಂದಾಗ ಮಾತ್ರ ದೇವರನ್ನು ಕಾಣಲು ಸಾಧ್ಯವಾಗುತ್ತದೆ. ನಾಲತವಾಡದ ಭೂಮಿ ಶರಣ ವೀರೇಶ್ವರರು ನಡೆದಾಡಿದಂತಹ ಪುಣ್ಯ ಭೂಮಿಯಾಗಿದೆ. ಇಂತಹ ಪುಣ್ಯ ನೆಲದಲ್ಲಿ ಶ್ರೀಗಳು ಮೌನಾನುಷ್ಠಾನ ಹಮ್ಮಿಕೊಂಡಿದ್ದು, ಎಲ್ಲರ ಭಾಗ್ಯವನ್ನು ತೆರೆಸಿದ್ದಾರೆ.

-ಸಿ.ಎಸ್.ನಾಡಗೌಡ ಅಪ್ಪಾಜಿ, ಶಾಸಕರು.

ನಾಲತವಾಡ ಪ್ರದೇಶ ಎರಡು ಡ್ಯಾಂಗಳ ಮಧ್ಯೆವಿರುವ ಪ್ರದೇಶವಾಗಿದ್ದು, ಇಲ್ಲಿಯ ಭೂಮಿಗಳು ಮಾತ್ರ ಹಚ್ಚು ಹಸಿರು ಆಗಿಲ್ಲ. ಇದಕ್ಕೆ ಕಾರಣ ನಮ್ಮಂತಹ ರಾಜಕಾರಣಿಗಳಾಗಿದ್ದಾರೆ. ಮುಂದಿನ ದಿನಗಳಲ್ಲಿ ಈ ಭಾಗವನ್ನು ಹಚ್ಚು ಹಸಿರು ಪ್ರದೇಶವನ್ನು ಮಾಡಲು ನಾವೆಲ್ಲರು ಪ್ರಯತ್ನ ಮಾಡಬೇಕು. ಪ್ರತಿ ಜಮೀನಿಗೆ ನೀರು ತರುವಂತಹ ವ್ಯವಸ್ಥೆ ಮುಂದಿನ ದಿನಗಳಲ್ಲಿ ಆಗಬೇಕು.

-ಎ.ಎಸ್.ಪಾಟೀಲ ನಡಹಳ್ಳಿ, ಮಾಜಿ ಶಾಸಕರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನುವಾದಕರು ಸಾಂಸ್ಕೃತಿಕ ರಾಯಭಾರಿಗಳಿದ್ದಂತೆ:ಎಸ್.ಜಿ.ಎಸ್‌
9.5 ಲಕ್ಷ ಲಂಚ ಪಡೆದ ಕೇಂದ್ರ ವಿದ್ಯುತ್‌ಸಂಸ್ಥೆ ಜಂಟಿ ನಿರ್ದೇಶಕ ಸಿಬಿಐ ಬಲೆಗೆ