ತಮ್ಮ ರಾಜಕೀಯ ಲಾಭಕ್ಕಾಗಿ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆ

KannadaprabhaNewsNetwork |  
Published : Jun 26, 2025, 01:32 AM IST
25ಎಚ್‌ಯುಬಿ36ಕರ್ನಾಟಕ ವಾಣಿಜ್ಯೋದ್ಯಮ ಸಂಘದ ಸಭಾಭವನದಲ್ಲಿ ಸಿಟಿಜಿನ್ಸ್ ಫಾರ್ ಸೋಸಿಯಲ್ ಜಸ್ಟೀಸ್  ಸಂಘಟನೆಯಿಂದ ತುರ್ತು ಪರಿಸ್ಥಿತಿಯ ಕಾರಳ ದಿನಗಳ ಕುರಿತಾದ ಭುಗಿಲು ಮರುಮುದ್ರಣ ಕೃತಿ ಲೋಕಾರ್ಪಣೆ ಮಾಡಲಾಯಿತು. | Kannada Prabha

ಸಾರಾಂಶ

ತುರ್ತು ಪರಿಸ್ಥಿತಿ ಇಡೀ ದೇಶಕ್ಕೆ ಗೊತ್ತಾಗುವ ಮೊದಲೇ ಜಯಪ್ರಕಾಶ ನಾರಾಯಣ ಸೇರಿದಂತೆ ಹಲವು ನಾಯಕರನ್ನು ಬಂಧಿಸಲಾಯಿತು. ಆರ್‌ಎಸ್‌ಎಸ್‌ನ ಪ್ರಚಾರಕರು ಮಾತ್ರ ಭೂಗತವಾಗಿ ಇಡೀ ದೇಶವನ್ನು ಹೋರಾಟಕ್ಕೆ ಸಜ್ಜುಗೊಳಿಸುವ ಕೆಲಸ ಮಾಡಿದರು.

ಹುಬ್ಬಳ್ಳಿ: ತಮ್ಮ ರಾಜಕೀಯ ಲಾಭ ಹಾಗೂ ತನ್ನ ನಿರ್ಧಾರವನ್ನು ಯಾರೂ ಪ್ರಶ್ನಿಸಬಾರದು ಎನ್ನುವ ದುಷ್ಟ ಮನಸ್ಥಿತಿ ಹೊಂದಿದ್ದ ಇಂದಿರಾಗಾಂಧಿ ಅವರು ಪ್ರಜಾಪ್ರಭುತ್ವದ ಉಳಿವಿಗಾಗಿ ತುರ್ತು ಪರಿಸ್ಥಿತಿ ಎನ್ನುವ ನಾಟಕವಾಡಿ ಸಂವಿಧಾನದ ಮೂಲಕವೇ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡುವಂತಹ ಕಾರ್ಯ ಮಾಡಿದರು ಎಂದು ಆರ್‌ಎಸ್‌ಎಸ್ ಜೇಷ್ಠ ಪ್ರಚಾರಕ ಸು. ರಾಮಣ್ಣ ಹೇಳಿದರು.

ಇಲ್ಲಿನ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಭವನದಲ್ಲಿ ಬುಧವಾರ ಸಿಟಿಜನ್ಸ್ ಫಾರ್ ಸೋಸಿಯಲ್ ಜಸ್ಟೀಸ್ ಸಂಘಟನೆಯಿಂದ ಆಯೋಜಿಸಿದ್ದ ತುರ್ತು ಪರಿಸ್ಥಿತಿಯ ಕಾರಳ ದಿನಗಳ ಕುರಿತಾದ ಭುಗಿಲು ಮರುಮುದ್ರಣ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದರು.

ತುರ್ತು ಪರಿಸ್ಥಿತಿ ಇಡೀ ದೇಶಕ್ಕೆ ಗೊತ್ತಾಗುವ ಮೊದಲೇ ಜಯಪ್ರಕಾಶ ನಾರಾಯಣ ಸೇರಿದಂತೆ ಹಲವು ನಾಯಕರನ್ನು ಬಂಧಿಸಲಾಯಿತು. ಆರ್‌ಎಸ್‌ಎಸ್‌ನ ಪ್ರಚಾರಕರು ಮಾತ್ರ ಭೂಗತವಾಗಿ ಇಡೀ ದೇಶವನ್ನು ಹೋರಾಟಕ್ಕೆ ಸಜ್ಜುಗೊಳಿಸುವ ಕೆಲಸ ಮಾಡಿದರು. ಶೇ. ೯೦ರಷ್ಟು ಪ್ರಚಾರಕರು ಬಂಧನವಾಗಲಿಲ್ಲ ಎಂದರು.

ಪತ್ರಿಕಾ ಸ್ವಾತಂತ್ರ್ಯ ಇಲ್ಲದಿದ್ದಾಗಲೂ ಪತ್ರಿಕೆಗಳನ್ನು ಮುದ್ರಿಸಿ ಜನರಿಗೆ ಹಂಚಲಾಯಿತು. ಆಗ ಇಂದಿರಾ ಗಾಂಧಿ ಸರ್ವಾಧಿಕಾರ ಹಣೆಪಟ್ಟಿಯನ್ನು ತೊಡೆದುಹಾಕಲು ಚುನಾವಣೆ ಘೋಷಿಸಿದರು. ಆದರೆ, ದೇಶದ ಜನ ದೊಡ್ಡ ಸೋಲಿನ ಸಂದೇಶ ನೀಡಿದರು ಎಂದು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಸರ್ವಾಧಿಕಾರಿ, ತನಿಖಾ ಸಂಸ್ಥೆಗಳ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ನಿಂದಿಸುತ್ತಾರೆ. ಆದರೆ, ಅವರು ಇಂದಿನ ವರೆಗೂ ವೈಯಕ್ತಿಕವಾಗಿ ಯಾರ ವಿರುದ್ಧ ಸೇಡು ತೀರಿಸಿಕೊಂಡಿಲ್ಲ ಎಂದರು.

ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ತುರ್ತು ಪರಿಸ್ಥಿತಿ ಸಂದರ್ಭದಲ್ಲಿದ್ದ ಕಾಂಗ್ರೆಸ್ ಇಂದಿಗೂ ಕೂಡ ಅದೇ ಮನಸ್ಥಿತಿಯಲ್ಲಿದೆ. ಇಂದಿಗೂ ಪ್ರಜಾಪ್ರಭುತ್ವವನ್ನು ಇವರು ಒಪ್ಪಿಕೊಳ್ಳುವುದಿಲ್ಲ. ಎಲ್ಲ ರಂಗಗಳನ್ನು ಒತ್ತೆ ಇಡುವ ಕೆಲಸ ಅಂದು ಆಗಿತ್ತು. ಈ ಕಾರ್ಯ ಇಂದಿಗೂ ಕಾಂಗ್ರೆಸ್‌ನಿಂದ ನಡೆಯುತ್ತಿದೆ ಎಂದರು.

ಉದ್ಯಮಿ ಅಚ್ಯುತ ಲಿಮೆಯೆ ಮಾತನಾಡಿ, ಅಂದಿನ ಪರಿಸ್ಥಿತಿಯಲ್ಲಿ ಇಂದಿರಾ ಗಾಂಧಿ ಎಂದರೆ ಹೆದರುವ ಸ್ಥಿತಿ ನಿರ್ಮಾಣವಾಗಿತ್ತು. ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ ಮಾಡಿ ಜೈಲು ಸೇರಿದ ಅನುಭವ ಹಂಚಿಕೊಂಡರು.

ಇದೇ ವೇಳೆ ತುರ್ತು ಪರಿಸ್ಥಿತಿ ವೇಳೆ ಹೋರಾಟ ಮಾಡಿ ಡಿಐಆರ್ ಕಾಯ್ದಯಡಿ ಬಂಧಿತರಾಗಿದ್ದ ಅಚ್ಯುತ ಲಿಮಯೆ, ಮಹಾದೇವ ದಿವಟೆ, ಎಚ್.ಜಿ. ಇನಾಮದಾರ, ಶ್ರೀಕಾಂತ ದೇಸಾಯಿ, ವೇದವ್ಯಾಸ ಆಚಾರ್, ಆನಂದ ದೇಸಾಯಿ ಅವರನ್ನು ಸನ್ಮಾನಿಸಲಾಯಿತು.

ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ ಅಧ್ಯಕ್ಷತೆ ವಹಿಸಿದ್ದರು. ಮಹೇಂದ್ರ ಕೌತಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ನ್ಯಾಯವಾದಿ ಸಂಜು ಬಡಸ್ಕರ ಸ್ವಾಗತಿಸಿದರು. ಸಂದೀಪ ಬೂದಿಹಾಳ ವಂದಿಸಿದರು.

PREV

Recommended Stories

ಪಕ್ಷ ಭೇದ ಮರೆತು ಅಭಿವೃದ್ಧಿ ಕೆಲಸ ಮಾಡಿ
ಮುತ್ತೂರು ನಡುಗಡ್ಡೆಯಿಂದ 7 ಕುಟುಂಬಗಳ ಸ್ಥಳಾಂತರ