ತುರ್ತು ರಕ್ಷಣೆ: ಬಸ್‌ ನಿಲ್ದಾಣದಲ್ಲಿ ಅಣಕು ಕಾರ್ಯಾಚರಣೆ

KannadaprabhaNewsNetwork |  
Published : May 13, 2025, 01:25 AM IST
12ಕೆಡಿವಿಜಿ19-ದಾವಣಗೆರೆ ಕೆಎಸ್ಸಾರ್ಟಿ ಬಸ್ಸು ನಿಲ್ದಾಣದಲ್ಲಿ ಸೋಮವಾರ ಮಾಕ್ ಡ್ರಿಲ್ ವೀಕ್ಷಿಸಿದ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಅಧಿಕಾರಿಗಳು, ಸಾರ್ವಜನಿಕರು. ...............12ಕೆಡಿವಿಜಿ20, 21, 22, 23, 24-ದಾವಣಗೆರೆ ಕೆಎಸ್ಸಾರ್ಟಿ ಬಸ್ಸು ನಿಲ್ದಾಣದಲ್ಲಿ ಸೋಮವಾರ ಮಾಕ್ ಡ್ರಿಲ್ ವೇಳೆ ಅಣಕು ರಕ್ಷಣಾ ಕಾರ್ಯದಲ್ಲಿ ವಿಪತ್ತು ನಿರ್ವಹಣಾ ತಂಡ, ಅಗ್ನಿಶಾಮಕ ಸಿಬ್ಬಂದಿ. | Kannada Prabha

ಸಾರಾಂಶ

ಸೈರನ್ ಮಾಡಿಕೊಂಡು ಬಂದ ಅಗ್ನಿಶಾಮಕ ದಳದಿಂದ ಅನೇಕರನ್ನು ರಕ್ಷಣೆ, ಆಂಬ್ಯುಲೆನ್ಸ್‌ಗೆ ಸಾಗಿಸಿದರೆ, ಆಂಬ್ಯುಲೆನ್ಸ್‌ನಲ್ಲಿದ್ದ ಆರೋಗ್ಯ ಸಿಬ್ಬಂದಿಯಿಂದ ಪ್ರಾಥಮಿಕ ಚಿಕಿತ್ಸೆ, ದೊಡ್ಡ ಕಟ್ಟಡದಲ್ಲಿ ಸಿಲುಕಿದ್ದವರನ್ನು ಏರಿಯಲ್ ಲ್ಯಾಡರ್ ವಾಹನದ ಮೂಲಕ ರಕ್ಷಿಸಿದ ರಕ್ಷಣಾ ಸಿಬ್ಬಂದಿ... ಯುದ್ಧ ಪರಿಸ್ಥಿತಿ ಭಯ- ಆತಂಕದಿಂದಲೇ ನೋಡುತ್ತಿದ್ದ ಜನ!

- ಮಾಕ್ ಡ್ರಿಲ್ ಮೂಲಕ ಜನಜಾಗೃತಿ ಉದ್ದೇಶ: ಡಿಸಿ ಗಂಗಾಧರ ಸ್ವಾಮಿ । ವಿವಿಧ ಇಲಾಖೆ ಅಧಿಕಾರಿ-ಸಿಬ್ಬಂದಿ ಸಾಥ್‌- - -

ಕನ್ನಡಪ್ರಭ ವಾರ್ತೆ ದಾವಣಗೆರೆ ಸೈರನ್ ಮಾಡಿಕೊಂಡು ಬಂದ ಅಗ್ನಿಶಾಮಕ ದಳದಿಂದ ಅನೇಕರನ್ನು ರಕ್ಷಣೆ, ಆಂಬ್ಯುಲೆನ್ಸ್‌ಗೆ ಸಾಗಿಸಿದರೆ, ಆಂಬ್ಯುಲೆನ್ಸ್‌ನಲ್ಲಿದ್ದ ಆರೋಗ್ಯ ಸಿಬ್ಬಂದಿಯಿಂದ ಪ್ರಾಥಮಿಕ ಚಿಕಿತ್ಸೆ, ದೊಡ್ಡ ಕಟ್ಟಡದಲ್ಲಿ ಸಿಲುಕಿದ್ದವರನ್ನು ಏರಿಯಲ್ ಲ್ಯಾಡರ್ ವಾಹನದ ಮೂಲಕ ರಕ್ಷಿಸಿದ ರಕ್ಷಣಾ ಸಿಬ್ಬಂದಿ... ಯುದ್ಧ ಪರಿಸ್ಥಿತಿ ಭಯ- ಆತಂಕದಿಂದಲೇ ನೋಡುತ್ತಿದ್ದ ಜನ!

ಅರೇ, ಇದೇನಿದು..? ಪಾಕಿಸ್ತಾನ ವಿರುದ್ಧ ಕದನ ವಿರಾಮ ಘೋಷಣೆಯಾಗಿದೆ, ಕಳೆದ ರಾತ್ರಿಯಿಂದ ಆ ಕಡೆಯಿಂದಲೂ ಒಂದು ಗುಂಡಿನ ಸದ್ದು ಕೇಳಿಬಂದಿಲ್ಲ. ಅಂತಹದ್ದರಲ್ಲಿ ಅತ್ಯಂತ ಸುರಕ್ಷಿತ ಸ್ಥಳ ದಾವಣಗೆರೆಯಲ್ಲಿ ಅದ್ಯಾವ ಬಾಂಬ್‌ ಬಿತ್ತು, ಏನೇನು ಅಪಾಯ, ಅನಾಹುತ, ಸಂಕಷ್ಟ ಬಂದೊದಗಿತು ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿರಲೇಬೇಕು. ಆದರೆ, ಭಯಪಡಬೇಡಿ. ಇದು ಅಣಕು ಕಾರ್ಯಾಚರಣೆ ವಿಚಾರ.

ನಗರದ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣದಲ್ಲಿ ಸೋಮವಾರ ಯುದ್ಧದಂಥ ತುರ್ತು ಸಂದರ್ಭಗಳಲ್ಲಿ ಕೈಗೊಳ್ಳುವ ಕ್ರಮಗಳ ಬಗ್ಗೆ ಅಣಕು ಪ್ರದರ್ಶನ ಮೂಲಕ ಸಾರ್ವಜನಿಕರು, ಪ್ರಯಾಣಿಕರಲ್ಲಿ ಜನಜಾಗೃತಿ ಮೂಡಿಸಲಾಯಿತು. ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಅಗ್ನಿಶಾಮಕದಳ ಸೇರಿದಂತೆ ವಿವಿಧ ಇಲಾಖೆಗಳಿಂದ ನಡೆದ ಕಾರ್ಯಕ್ರಮ. ಯಾವುದೇ ಅಪಾಯ ಬಂದೊದಗಿಲ್ಲ. ದೇಶದ ಗಡಿಯಲ್ಲಿ ಯುದ್ಧದ ಉದ್ವಿಗ್ನತೆ ಇದೆ. ಈ ಹಿನ್ನೆಲೆ ಜಿಲ್ಲಾಡಳಿತ ಮಾಕ್ ಡ್ರಿಲ್ (ಅಣಕು ಕಾರ್ಯಾಚರಣೆ) ಹಮ್ಮಿಕೊಂಡಿತ್ತು. ರಾಜ್ಯ ವಿಪತ್ತು ಸ್ಪಂದನಾ ಪಡೆ, ಅಗ್ನಿಶಾಮಕ ದಳ, ಪೊಲೀಸ್, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಕೈ ಜೋಡಿಸಿದ್ದವು.

ಸೈರನ್ ಮೊಳಗಿದಾಗ ಹೇಗೆ ಪ್ರತಿಕ್ರಿಯಿಸಬೇಕು, ಬೆಂಕಿ ಹೊತ್ತಿಕೊಂಡಾಗ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳುವುದು ಹೇಗೆ, ಕಟ್ಟಡ ಇತರೆ ಅವಶೇಷಗಳಡಿ ಸಿಲುಕಿದವರನ್ನು, ಎತ್ತರದ ಪ್ರದೇಶದಲ್ಲಿ ಸಿಕ್ಕಿಕೊಂಡವರ ರಕ್ಷಣೆ, ವೈದ್ಯಕೀಯ ತುರ್ತು ಸೇವೆ ಒದಗಿಸುವುದು ಹೇಗೆಂಬುದನ್ನು ಅಣಕು ಪ್ರದರ್ಶನ ಮೂಲಕ ಅರಿವು ಮೂಡಿಸಲಾಯಿತು. ದುರ್ಘಟನೆಯಿಂದ ಕಟ್ಟಡಗಳಲ್ಲಿ ಸಿಲುಕಿರುವ ನಾಗರೀಕರನ್ನು ಸುಸಜ್ಜಿತ ಏರಿಯಲ್ ಲ್ಯಾಡರ್ ಮೂಲಕ ರಕ್ಷಿಸುವುದು, ಕಟ್ಟಡದಲ್ಲಿ ಸಿಲುಕಿ, ಗಾಯಗೊಂಡವರನ್ನು ಕಾಪಾಡುವುದು ಹೇಗೆಂಬ ಬಗ್ಗೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಪ್ರದರ್ಶಿಸಿದರು.

ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ ಎಂ.ಸಂತೋಷ, ಉಪ ವಿಭಾಗಾಧಿಕಾರಿ ಸಂತೋಷ ಪಾಟೀಲ್, ತಹಸೀಲ್ದಾರ್ ಅಶ್ವತ್ಥ್, ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಕಿರಣಕುಮಾರ ಎಫ್.ಬಸಾಪುರ ಸೇರಿದಂತೆ ಅಧಿಕಾರಿ, ಸಿಬ್ಬಂದಿ, ಸಾರ್ವಜನಿಕರು ಇದ್ದರು.

- - -

(ಬಾಕ್ಸ್‌) * ಮಾಕ್‌ ಡ್ರಿಲ್‌ ಕಾರ್ಯಕ್ರಮ ವೇಳೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಮಾತನಾಡಿ, ಮಾಜಿ ಸೈನಿಕರು, ಸ್ಕೌಟ್ಸ್ ಮತ್ತು ಗೈಡ್ಸ್, ಎನ್ಎಸ್‌ಎಸ್‌ ಎಲ್ಲರೂ ಒಟ್ಟಾಗಿ ಜನರ ರಕ್ಷಣೆಗೆ ಸಿದ್ಧರಾಗಿದ್ದೇವೆ. ಸ್ಫೋಟ, ಬೆಂಕಿ ಅನಾಹುತ ಸಂಭವಿಸಿದಾಗ ಜನರು ಸುರಕ್ಷಿತ ಸ್ಥಳಗಳಿಗೆ ಹೋಗುವುದು, ಅಪರಿಚಿತರು ಕಂಡು ಬಂದರೆ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡುವುದೂ ಸೇರಿದಂತೆ ಜನರಿಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು, ವದಂತಿ, ಪ್ರಚೋದನಾಕಾರಿ ಪೋಸ್ಟ್‌ಗಳನ್ನು ಹಾಕುವಂತಹವರ ಮೇಲೆ ಪೊಲೀಸ್ ಇಲಾಖೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿದೆ. ಜನಸಂದಣಿ ಪ್ರದೇಶದಲ್ಲಿ ಮಾಕ್ ಡ್ರಿಲ್ ಮಾಡಲು, ಸೈರನ್ ಮೊಳಗಿಸಲು, ಜನರಲ್ಲಿ ಜಾಗೃತಿ ಮೂಡಿಸಲು ಶನಿವಾರ ಸಂಜೆಯೇ ಸರ್ಕಾರದಿಂದ ಎಲ್ಲ ಜಿಲ್ಲಾಧಿಕಾರಿಗಳು, ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಅದರಂತೆ ದಾವಣಗೆರೆಯಲ್ಲಿ ಮಾಕ್ ಡ್ರಿಲ್ ಮಾಡಲಾಗಿದೆ. ತಾಲೂಕು ಮಟ್ಟದಲ್ಲೂ ಇದನ್ನು ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಡಿಸಿ ತಿಳಿಸಿದರು.

- - -

-12ಕೆಡಿವಿಜಿ19:

ದಾವಣಗೆರೆ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಸೋಮವಾರ ಮಾಕ್ ಡ್ರಿಲ್ ವೀಕ್ಷಿಸಿದ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ಅಧಿಕಾರಿಗಳು, ಸಾರ್ವಜನಿಕರು. -12ಕೆಡಿವಿಜಿ20, 21, 22, 23, 24:

ದಾವಣಗೆರೆ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಸೋಮವಾರ ಮಾಕ್ ಡ್ರಿಲ್ ವೇಳೆ ಅಣಕು ರಕ್ಷಣಾ ಕಾರ್ಯದಲ್ಲಿ ವಿಪತ್ತು ನಿರ್ವಹಣಾ ತಂಡ, ಅಗ್ನಿಶಾಮಕ ಸಿಬ್ಬಂದಿ ಪಾಲ್ಗೊಂಡರು.

PREV

Recommended Stories

ಕೇಂದ್ರದಂತೆ ರಾಜ್ಯ ಸರ್ಕಾರ ಮಾದರಿ ಹೆಜ್ಜೆ ಇರಿಸುವುದೇ?
ಜಿಎಸ್ಟಿ ಕಡಿತದ ಲಾಭ ಜನರಿಗೆ ಸಿಗುವಂತಾಗಲಿ: ಸಿಎಂ ಆಶಯ