ಸೇವಾ ನಿರತರಿಗೆ ದೇವರ ಅನುಗ್ರ ಖಚಿತ: ಡಾ.ಹೆಗ್ಗಡೆ

KannadaprabhaNewsNetwork |  
Published : Jun 28, 2025, 12:24 AM IST
ಉತ್ತಮ ಸೇವೆ-ಸಾಧನೆ ಮಾಡಿದ ಸ್ವಯಂ-ಸೇವಕರನ್ನು ಸಮಾರಂಭದಲ್ಲಿ ಗೌರವಿಸಲಾಯಿತು. | Kannada Prabha

ಸಾರಾಂಶ

ಶುಕ್ರವಾರ ಧರ್ಮಸ್ಥಳದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಬೆಳ್ತಂಗಡಿ ಮತ್ತು ಗುರುವಾಯನಕೆರೆ ಯೋಜನಾ ವ್ಯಾಪ್ತಿಯ ‘ಶೌರ್ಯ’ ವಿಪತ್ತು ನಿರ್ವಹಣಾ ತಂಡದ ಸದಸ್ಯರಿಗೆ ತುರ್ತು ಸ್ಪಂದನೆ ಮತ್ತು ಕೌಶಲಾಭಿವೃದ್ಧಿ ತರಬೇತಿ ಉದ್ಘಾಟನೆ ನೆರವೇರಿತು.

‘ಶೌರ್ಯ’ ವಿಪತ್ತು ನಿರ್ವಹಣಾ ತಂಡದ ಸದಸ್ಯರಿಗೆ ತುರ್ತು ಸ್ಪಂದನೆ ಮತ್ತು ಕೌಶಲಾಭಿವೃದ್ಧಿ ತರಬೇತಿ

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಸೇವೆ ಮಾಡುವವರಿಗೆ ಸದಾ ದೇವರ ಅನುಗ್ರಹ ಇದ್ದೇ ಇರುತ್ತದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.ಶುಕ್ರವಾರ ಧರ್ಮಸ್ಥಳದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಬೆಳ್ತಂಗಡಿ ಮತ್ತು ಗುರುವಾಯನಕೆರೆ ಯೋಜನಾ ವ್ಯಾಪ್ತಿಯ ‘ಶೌರ್ಯ’ ವಿಪತ್ತು ನಿರ್ವಹಣಾ ತಂಡದ ೩೩೦ ಸದಸ್ಯರಿಗೆ ಆಯೋಜಿಸಿದ ತುರ್ತು ಸ್ಪಂದನೆ ಮತ್ತು ಕೌಶಲಾಭಿವೃದ್ಧಿ ತರಬೇತಿ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಬದುಕಿನಲ್ಲಿ ಏನೇ ಆಪತ್ತು, ವಿಪತ್ತು ಬಂದರೂ ಧೈರ್ಯ ಮತ್ತು ಆತ್ಮವಿಶ್ವಾಸದೊಂದಿಗೆ ಬದುಕು ಕಟ್ಟಿಕೊಳ್ಳಬೇಕು. ಇದಕ್ಕೆ ಸ್ವಯಂ ಪ್ರೇರಣೆಯಿಂದ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಶೌರ್ಯ ಘಟಕದ ಸ್ವಯಂಸೇವಕರು ಆಪತ್ಕಾಲದ ಆಪದ್ಬಾಂಧವರಾಗಿ ಸಕಾಲಿಕ ನೆರವು, ರಕ್ಷಣೆ ನೀಡುತ್ತಾರೆ. ಅವರು ಕೂಡಾ ತಮ್ಮ ರಕ್ಷಣೆಯನ್ನು ಮೊದಲು ತಾವು ಮಾಡಿಕೊಳ್ಳಬೇಕು ಎಂದು ಹೆಗ್ಗಡೆ ಸಲಹೆ ನೀಡಿದರು.ತರಬೇತಿ ಕಾರ್ಯಕ್ರಮ ಉದ್ಘಾಟಿಸಿದ ಆಂಧ್ರಪ್ರದೇಶದ ಗುಂಟೂರು ಎನ್.ಡಿ.ಆರ್.ಎಫ್. ತಂಡದ ಹಿರಿಯ ಅಧಿಕಾರಿ ಶಾಂತಿಲಾಲ್ ಜಟಿಯಾ ಶೌರ್ಯ ಸ್ವಯಂ ಸೇವಕರ ಸೇವೆಯನ್ನು ಶ್ಲಾಘಿಸಿ, ಇಂತಹ ಘಟಕಗಳು ದೇಶದ ಎಲ್ಲಾ ರಾಜ್ಯಗಳಲ್ಲಿಯೂ ಪ್ರಾರಂಭವಾಗಬೇಕು ಎಂದರು. ಸ್ವಯಂಸೇವಕರ ಪರವಾಗಿ ಅರಸಿನಮಕ್ಕಿಯ ಅವಿನಾಶ್ ಭಿಡೆ, ನಡ ಗ್ರಾಮದ ಸಂಯೋಜಕಿ ವಸಂತಿ ಅನುಭವ ಹಂಚಿಕೊಂಡರು.

ಸಾಧಕರಗೆ ಸನ್ಮಾನ:

ಉತ್ತಮ ಸೇವೆ, ಸಾಧನೆ ಮಾಡಿದ ಸ್ವಯಂಸೇವಕರಾದ ಉಜಿರೆಯ ರವೀಂದ್ರ , ಅರಸಿನಮಕ್ಕಿಯ ಅವಿನಾಶ್ ಭಿಡೆ, ನಾರಾವಿಯ ದಿನೇಶ್ ಶೆಟ್ಟಿ ಮತ್ತು ತೆಂಕಕಾರಂದೂರು ಗ್ರಾಮದ ಸವಿತಾ ಪಿರೇರಾ ಅವರನ್ನು ಅಭಿನಂದಿಸಲಾಯಿತು.ಸಾಧಕ ಘಟಕ ಪ್ರಶಸ್ತಿ:ಶಿಶಿಲ- ಅರಸಿನಮಕ್ಕಿ ಘಟಕ ಮತ್ತು ಮಡಂತ್ಯಾರ್ ಘಟಕಗಳಿಗೆ ಉತ್ತಮ ಸಾಧಕ ಘಟಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಕೋಶದ ನಿರ್ವಹಣಾ ಅಧಿಕಾರಿ ವಿಜಯ್ ಪೂಜಾರ್ ಹಾಗೂ ಅಧಿಕಾರಿ ವಿನೋದ್ ಇದ್ದರು.ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಆಶಯನುಡಿಗಳನ್ನಾಡಿದರು.ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ಪಾಯಸ್ ಪ್ರಾಸ್ತಾವಿಕ ಮಾತನಾಡಿ, ರಾಜ್ಯದ ೯೧ ತಾಲೂಕುಗಳಲ್ಲಿ ೧೦,೪೬೦ ಸ್ವಯಂ ಸೇವಕರು ಸೇವಾ ಕಾಯಕದಲ್ಲಿ ನಿರತರಾಗಿದ್ದಾರೆ ಎಂದರು. ಯೋಜನಾಧಿಕಾರಿ ಅಶೋಕ, ಬಿ. ವಂದಿಸಿದರು. ಯೋಜನಾಧಿಕಾರಿ ಗಣೇಶ್ ಕಾರ್ಯಕ್ರಮ ನಿರ್ವಹಿಸಿದರು.ಶಾಂತಿಲಾಲ್ ಜಟಿಯಾ, ವಿನೋದ್ ಜಿ ಮತ್ತು ಅಧಿಕಾರಿಗಳು ವಿಪತ್ತು ನಿರ್ವಹಣೆ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ