ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿಕಾಂಚನ ಶ್ರೀ ಲಕ್ಷ್ಮೀ ನಾರಾಯಣ ಮ್ಯೂಸಿಕ್ ಅಕಾಡೆಮಿ ಟ್ರಸ್ಟ್ ಅರ್ಪಿಸುವ 70ನೇ ವರ್ಷದ ‘ಕಾಂಚನೋತ್ಸವ 2024’ ಫೆ. 3 ಮತ್ತು 4ರಂದು ಸಂಗೀತ ಕ್ಷೇತ್ರವೆಂದೂ, ಕರ್ನಾಟಕದ ತಿರುವೈಯ್ಯಾರ್ ಎಂದೂ ಪ್ರಸಿದ್ಧಿ ಪಡೆದಿರುವ ದ.ಕ.ಜಿಲ್ಲೆಯ ಪುತ್ತೂರು ತಾಲೂಕಿನ ಬಜತ್ತೂರು ಗ್ರಾಮದ ಕಾಂಚನದ ಶ್ರೀ ಲಕ್ಷ್ಮೀನಾರಾಯಣ ಸಂಗೀತ ಕಲಾ ಶಾಲೆಯಲ್ಲಿ ನಡೆಯಲಿದ್ದು ಖ್ಯಾತ ವಿದ್ವಾಂಸರು ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. 70ನೇ ವರ್ಷದ ಶ್ರೀ ತ್ಯಾಗರಾಜ, ಶ್ರೀ ಪುರಂದರದಾಸರ ಆರಾಧನಾ ಮಹೋತ್ಸವ, ಸ್ಥಾಪಕ ಗುರುಗಳಾದ ಸಂಗೀತರತ್ನ ಕಾಂಚನ ವೆಂಕಟಸುಬ್ರಹ್ಮಣ್ಯ ಹಾಗೂ ಕರ್ನಾಟಕ ಕಲಾಶ್ರೀ ಕಾಂಚನ ವಿ.ಸುಬ್ಬರತ್ನಂರವರ ಪುಣ್ಯ ದಿನಾಚರಣೆಯೂ ನಡೆಯಲಿದೆ.
ಅಮೋಘ ಸಂಗೀತ ಕಚೇರಿ: 4ರಂದು ಸಂಜೆ 6.30ರಿಂದ ಅಮೋಘ ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿ ನಡೆಯಲಿದ್ದು ವಿದ್ವಾನ್ ಭರತ್ ಸುಂದರ್ ಅವರು ಗಾಯನ, ವಿದ್ವಾನ್ ಮೈಸೂರು ಕಾರ್ತಿಕ್ ಅವರು ವಯೊಲಿನ್, ಪದ್ಮವಿಭೂಷಣ ಸಂಗೀತ ಕಲಾನಿಧಿ ವಿದ್ವಾನ್ ಡಾ.ಉಮಯಾಲ್‌ಪುರಂ ಕೆ.ಶಿವರಾಮನ್ ಅವರು ಮೃದಂಗ ಹಾಗೂ ವಿದ್ವಾನ್ ಗಿರಿಧರ ಉಡುಪ ಅವರು ಘಟಂನಲ್ಲಿ ಸಂಗೀತ ಕಚೇರಿ ನಡೆಸಿಕೊಡಲಿದ್ದಾರೆ. ಪದ್ಮವಿಭೂಷಣ ಡಾ.ಉಮಯಾಲಪುರಂ ಭಾಗಿ: ಈ ಸಲದ ಅಮೋಘ ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿಯ ಮೃದಂಗದಲ್ಲಿ ಪದ್ಮವಿಭೂಷಣ 90 ರ ಹರೆಯದ ಮಹಾಮೇರು ವಿದ್ವಾಂಸ ಡಾ. ಉಮಯಾಲಪುರಂ ಕೆ.ಶಿವರಾಮನ್ ಅವರು ಭಾಗವಹಿಸುತ್ತಿರುವುದು ಸಂಗೀತ ಪ್ರಿಯರ ಸಂಭ್ರಮವನ್ನು ಇಮ್ಮಡಿಗೊಳಿಸಿದೆ. ಡಾ.ಉಮಯಾಲಪುರಂ ಅವರು ಭಾರತೀಯ ಸಂಗೀತ ಕ್ಷೇತ್ರದ ಮಹಾದಿಗ್ಗಜ. ಎಲ್.ಎಲ್.ಬಿ. ಕಾನೂನಿನ ಡಿಗ್ರಿಯ ಅಂತಿಮ ಪರೀಕ್ಷೆಯಲ್ಲಿ ಚಿನ್ನದ ಪದಕ ಪಡೆದರೂ, ಸಂಗೀತದಲ್ಲೇ ತಮ್ಮ ಹೃದಯವನ್ನಿಟ್ಟ ಮೇರು ಕಲಾವಿದರಾಗಿದ್ದಾರೆ. ಹಲವಾರು ಬಗೆಯ ನವಪ್ರಯೋಗಗಳನ್ನು ನಡೆಸುತ್ತಾ ತಮ್ಮದೇ ಆದ ಬಾಣಿಯನ್ನು ತಮ್ಮ ಮೃದಂಗವಾದನದಲ್ಲಿ ರೂಪಿಸಿದ್ದಾರೆ. ಮೊದಲ ಬಾರಿಗೆ ಫೈಬರ್ ಗ್ಲಾಸ್ ಮೃದಂಗವನ್ನು ಕರ್ನಾಟಕ ಸಂಗೀತಕ್ಕೆ ಅಳವಡಿಸಿದ ಕೀರ್ತಿ ಇವರದ್ದೇ ಆಗಿದೆ.