ಕನ್ನಡಪ್ರಭ ವಾರ್ತೆ ಕುಂದಾಪುರ
ಪತ್ರಿಕಾ ವರದಿಯ ಕೊನೆಯ ಸಾಲಿನಲ್ಲಿ ಬರುವ ಹೆಸರಿಗಾಗಿ ಕಾತರದಿಂದ ಕಾಯುತ್ತಿದ್ದ ಪತ್ರಿಕೋದ್ಯಮದ ಆ ದಿನಗಳು ಬದಲಾವಣೆಯಾಗಿದ್ದು, ತಂತ್ರಜ್ಞಾನದ ಬೆಳವಣಿಗೆಯ ಜೊತೆ ಪತ್ರಿಕೆಯೊಂದಿಗಿನ ಜನರ ಭಾವನಾತ್ಮಕವಾದ ಸಂಬಂಧಗಳು ಬದಲಾಗುತ್ತಿದೆ ಎಂದು ಸಾಮಾಜಿಕ ಚಿಂತಕ, ಜಾದುಗಾರ ಓಂ ಗಣೇಶ್ ಉಪ್ಪುಂದ ಅಭಿಪ್ರಾಯಪಟ್ಟರು.ಇಲ್ಲಿನ ಜೇಸಿ ಭವನದಲ್ಲಿ ಶನಿವಾರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಆಯೋಜಿಸಲಾದ ಪತ್ರಿಕಾ ದಿನಾಚರಣೆಯನ್ನು ಟೈಪ್ ರೈಟರ್‌ನಲ್ಲಿ ಅಕ್ಷರದ ಪಡಿಯಚ್ಚು ಮೂಡಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.ರೋಟರಿ ಜಿಲ್ಲಾ ಮಾಜಿ ಸಹಾಯಕ ಗವರ್ನರ್ ಕೆ.ಆರ್ ನಾಯ್ಕ್ ಮಾತನಾಡಿ, ಎಷ್ಟೇ ತಂತ್ರಜ್ಞಾನಗಳು ಅಭಿವೃದ್ದಿಯಾದರೂ ಮುದ್ರಣ ಮಾಧ್ಯಮದೊಂದಿಗಿನ ಸಂಬಂಧಗಳು ಓದುಗರಲ್ಲಿ ಸದಾ ಜಾಗೃತವಾಗಿರುತ್ತದೆ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಹಿರಿಯ ಪತ್ರಕರ್ತ ಶ್ರೀಪತಿ ಹೆಗ್ಡೆ, ಬರಹಗಳ ಮೂಲಕ ಪತ್ರಕರ್ತರು ಓದುಗರಿಗೆ ಹತ್ತಿರವಾಗಬೇಕು. ಪ್ರತಿಯೊಬ್ಬರ ಜೀವನದಲ್ಲಿಯೂ ಬದುಕಿನ ಬದ್ಧತೆಗಳನ್ನು ಅಳವಡಿಸಿಕೊಂಡಾಗ ಸ್ವತಂತ್ರ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ ಎಂದರು.ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ನಾಗರಾಜ ರಾಯಪ್ಪನಮಠ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ಅಂಚೆ ಇಲಾಖೆಯ ಸಹಾಯಕ ಅಧೀಕ್ಷಕ ಸತೀಶ್, ಇಲಾಖೆಯ ಗ್ರಾಹಕಸ್ನೇಹಿ ಯೋಜನೆಗಳ ಕುರಿತು ಹಾಗೂ ವಿಮಾ ಯೋಜನೆಗಳ ಕುರಿತು ಮಾಹಿತಿ ನೀಡಿದರು. ತಾಲೂಕು ಸಂಘ ಉಪಾಧ್ಯಕ್ಷ ಚಂದ್ರಮ ತಲ್ಲೂರು, ಕೋಶಾಧಿಕಾರಿ ಟಿ. ಲೋಕೇಶ್ ಆಚಾರ್ಯ ವೇದಿಕೆಯಲ್ಲಿದ್ದರು.
ಆಕಾಶ್ ನಿತ್ಯಾನಂದ ಗಾಣಿಗ ತೆಕ್ಕಟ್ಟೆ ಹಾಗೂ ಶ್ರೀದೇವಿ ಇನ್‌ಸ್ಟಿಟ್ಯೂಟ್‌ನ ನಿಖಿಲ್ ಅವರನ್ನು ಗೌರವಿಸಲಾಯಿತು. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಗಣೇಶ್ ಐಶ್ವರ್ಯ ಬೀಜಾಡಿ ಸ್ವಾಗತಿಸಿದರು. ಪ್ರಶಾಂತ ಪಾದೆ ಸನ್ಮಾನ ಪತ್ರ ವಾಚಿಸಿದರು. ಕಾರ್ಯಕಾರಿ ಮಂಡಳಿಯ ಸದಸ್ಯ ಶ್ರೀಕಾಂತ ಹೆಮ್ಮಾಡಿ ನಿರೂಪಿಸಿದರು.