ಗೋಹತ್ಯೆ ನಿಷೇಧ ಜಾರಿಗೆ ತಂದದ್ದು ಸಾಮ್ರಾಟ ಅಶೋಕ

KannadaprabhaNewsNetwork |  
Published : Feb 06, 2025, 11:47 PM IST
5454 | Kannada Prabha

ಸಾರಾಂಶ

ಅಶೋಕ ತನ್ನ ಸಾಮ್ರಾಜ್ಯದಲ್ಲಿ ನಡೆಯುತ್ತಿದ್ದ ಯಜ್ಞ, ಯಾಗ, ಹೋಮಗಳಲ್ಲಿ ಅಪಾರ ಪ್ರಮಾಣದ ಗೋವು, ಎತ್ತುಗಳನ್ನು ಬಲಿ ಕೊಡುತ್ತಿದ್ದನ್ನು ಕಂಡು ಮಮ್ಮಲ ಮರುಗಿದ್ದ. ಮೇಲಾಗಿ ಹೀಗೆ ಎತ್ತುಗಳನ್ನು ಬಲಿ ಕೊಡುತ್ತಿದ್ದರಿಂದ ಕೃಷಿ ನಿರ್ವಹಿಸಲು ಎತ್ತುಗಳ ಕೊರತೆ ಆಗುತ್ತಿದ್ದುದನ್ನು ಗಮನಿಸಿ ಗೋಹತ್ಯೆ ನಿಷೇಧದಾಜ್ಞೆ ಜಾರಿಗೊಳಿಸಿದ್ದ.

ಧಾರವಾಡ:

ಗೋವು ರಕ್ಷಣೆ ವಿಚಾರದಲ್ಲಿ ಇಂದು ದೇಶದಲ್ಲಿ ವಿಭಿನ್ನ ನಿಲುವು, ಕಾನೂನು, ಕಾರ್ಯಾಚರಣೆಗಳು ನಡೆಯುತ್ತಿವೆ. ಆದರೆ, ಗೋವುಗಳು ಇದ್ದರೆ ಮಾತ್ರ ಕೃಷಿ ಉಳಿಯುತ್ತದೆ ಎನ್ನುವ ಧ್ಯೇಯೋದ್ದೇಶದಿಂದ ಸಾಮ್ರಾಟ ಅಶೋಕ ಭರತ ಖಂಡದಲ್ಲಿ ಮೊಟ್ಟ ಮೊದಲ ಬಾರಿಗೆ ಗೋಹತ್ಯೆ ನಿಷೇಧ ಜಾರಿಗೆ ತಂದಿದ್ದರು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್ ಹೇಳಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಧಾರವಾಡದ ರಂಗಾಯಣದಲ್ಲಿ ಆಯೋಜಿಸಿರುವ ಮೂರು ದಿನಗಳ "ಕನ್ನಡ ವಿಚಾರ ಸಾಹಿತ್ಯ ದರ್ಶನ " ಕಮ್ಮಟವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಅಶೋಕ ತನ್ನ ಸಾಮ್ರಾಜ್ಯದಲ್ಲಿ ನಡೆಯುತ್ತಿದ್ದ ಯಜ್ಞ, ಯಾಗ, ಹೋಮಗಳಲ್ಲಿ ಅಪಾರ ಪ್ರಮಾಣದ ಗೋವು, ಎತ್ತುಗಳನ್ನು ಬಲಿ ಕೊಡುತ್ತಿದ್ದನ್ನು ಕಂಡು ಮಮ್ಮಲ ಮರುಗಿದ್ದ. ಮೇಲಾಗಿ ಹೀಗೆ ಎತ್ತುಗಳನ್ನು ಬಲಿ ಕೊಡುತ್ತಿದ್ದರಿಂದ ಕೃಷಿ ನಿರ್ವಹಿಸಲು ಎತ್ತುಗಳ ಕೊರತೆ ಆಗುತ್ತಿದ್ದುದನ್ನು ಗಮನಿಸಿ ಗೋಹತ್ಯೆ ನಿಷೇಧದಾಜ್ಞೆ ಜಾರಿಗೊಳಿಸಿದ್ದ ಎಂದು ಹೇಳಿದರು.

ಇಂದು ಗೋ ರಕ್ಷಣೆ ರಾಜಕೀಕರಣ ಆಗಿದೆ. ಸುಳ್ಳುಗಳೇ ವಿಜೃಂಭಿಸುತ್ತಿವೆ. ಇದರಿಂದ ಈ ದೇಶದ ಸಂಸ್ಕೃತಿ, ಸಹಬಾಳ್ವೆ, ಸೌಹಾರ್ದತೆಗೆ ಪೆಟ್ಟು ಬೀಳುತ್ತಿದೆ. ವಾಸ್ತವತೆ, ಸತ್ಯದ ಪರವಾಗಿ ಪ್ರಾಜ್ಞರು ನಿಲ್ಲದೇ ಹೋದರೆ ಮುಂದಿನ ಪೀಳಿಗೆ ಅರ್ಥಾತ್‌ ಭಾರತದ ಭವಿಷ್ಯಕ್ಕೆ ಬಹುದೊಡ್ಡ ಪೆಟ್ಟು ಬೀಳಲಿದೆ ಎಂದು ಮುಕುಂದರಾಜ್ ಕಳವಳ ವ್ಯಕ್ತಪಡಿಸಿದರು.ಕ್ರೌರ್ಯವೇ ಶೌರ್ಯವಾದಾಗ?

ವಿಚಾರವಾದಿ ಡಾ. ಸಿದ್ಧನಗೌಡ ಪಾಟೀಲ್ ಮಾತನಾಡಿ, ಬಹುತ್ವ ಭಾರತದ ತಳಪಾಯ ಬದಲಾಗುತ್ತಿದೆ. ಮೌಲ್ಯಗಳು ಪಲ್ಲಟ ಆಗುತ್ತಿವೆ. ಕ್ರೌರ್ಯವೇ ಶೌರ್ಯ, ಶಾಂತಿಯ ಮಾತು ಹೇಡಿತನ ಅನಿಸುತ್ತಿದೆ. ಇಂಥ ಸಂದರ್ಭದಲ್ಲಿ ಇಂದಿನ ಯುವಕರಿಗೆ ವಾಸ್ತವ ಮನವರಿಕೆ ಮಾಡಿಕೊಡದೇ ಹೋದರೆ ದೇಶದ ಭವಿಷ್ಯಕ್ಕೆ ಗಂಡಾಂತರವಿದೆ ಎಂದು ಕಳವಳ ವ್ಯಕ್ತಪಡಿಸಿದರು.

ವೇದ ವೈದಿಕರಿಗೆ, ಕುರಾನ್‌ ಮುಸ್ಲಿಂರಿಗೆ, ಬೈಬಲ್‌ ಕ್ರಿಶ್ಚಿಯನ್ನರಿಗೆ ಹೇಗೆ ಬದುಕಬೇಕು ಎಂದು ಹೇಳುತ್ತವೆ. ಆದರೆ, ಬಾಬಾಸಾಹೇಬ ಅಂಬೇಡ್ಕರ್ ನೀಡಿದ ಸಂವಿಧಾನ ಭಾರತೀಯರೆಲ್ಲ ಸೌಹಾರ್ದತೆಯಿಂದ ಕೂಡಿ ಬಾಳುವುದನ್ನು ಹೇಳುತ್ತದೆ. ಇಂಥ ಸಂವಿಧಾನ ಬದಲಿಸುವ, ಅಶಕ್ತಗೊಳಿಸುವ ಯತ್ನಗಳು ಮೇಲಿಂದ ಮೇಲೆ ನಡೆಯುತ್ತಿವೆ. ಸಂವಿಧಾನದ ಪಾಲನೆಯಿಂದ ಮಾತ್ರ ಈ ದೇಶಕ್ಕೆ ಭವಿಷ್ಯವಿದೆ ಎನ್ನುವುದನ್ನು ಯುವ ಜನಾಂಗ ಗಟ್ಟಿಯಾಗಿ ನಂಬಿ ಬಹುತ್ವ ವಿರೋಧಿಸುವ ಶಕ್ತಿಗಳ ವಿರುದ್ಧ ಹೋರಾಟಕ್ಕೆ ಅನಿಯಾಗಬೇಕು ಎಂದು ಅವರು ಕರೆನೀಡಿದರು.

ಕೋಮುವಾದ, ಕಾರ್ಪೋರೇಟ್‌ವಾದ ಇಂದು ಅಪಾಯದ ಮಟ್ಟ ತಲುಪಿವೆ. ಎಲ್ಲೆಡೆ ಶ್ರೇಷ್ಠತೆಯ ಡಂಗುರ ಮೊಳಗುತ್ತಿದೆ. ಇದಕ್ಕೆ ಪರ್ಯಾಯ ಮಾರ್ಗವೆಂದರೆ ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್, ಕುವೆಂಪು ಅವರ ಆದರ್ಶಗಳು. ನಮ್ಮತನ ಉಳಿಸಿಕೊಳ್ಳಲು, ಸಂವಿಧಾನದ ಆಶಯಗಳು ಜೀವಂತವಿರಲು ಈ ಮಹನೀಯರನ್ನು ಓದುವ, ಅರಿಯುವ ಮತ್ತು ನಮ್ಮ ಗ್ರಹಿಕೆಯನ್ನು ಬದಲಿಸಿಕೊಳ್ಳುವುದು ಅಗತ್ಯವಿದೆ ಎಂದು ಡಾ.ಸಿದ್ಧನಗೌಡ ಪಾಟೀಲ್‌ ಹೇಳಿದರು.ವೈಚಾರಿಕ ಕಮ್ಮಟ:

ಪ್ರಾಸ್ತಾವಿಕವಾಗಿ ಮಾತನಾಡಿದ ಅಕಾಡೆಮಿಯ ಸದಸ್ಯ ಸಂಚಾಲಕ ಡಾ. ಅರ್ಜುನ ಗೊಳಸಂಗಿ, ಇದೊಂದು ವೈಚಾರಿಕ ಕಮ್ಮಟ. ಬುದ್ಧನ ಕರುಣೆ, ಬಸವನ ಕಾಯಕ, ಗಾಂಧೀಜಿಯ ಅಹಿಂಸೆ, ಕುವೆಂಪು ವೈಚಾರಿಕತೆ ಮತ್ತು ಅಂಬೇಡ್ಕರರ ಸಮಾನತೆ ಪ್ರಜ್ಞೆಗಳನ್ನು ಇಂದಿನ ಯುವಕರಿಗೆ ಮನದಟ್ಟು ಮಾಡುವ ಬಹು ದೊಡ್ಡ ಹೆಜ್ಜೆ ಇದು. ಹೀಗೆ ಯುವ ಮನಸುಗಳನ್ನು ಕಟ್ಟುವ ಮೂಲಕ ಬಹುತ್ವ ಮತ್ತು ಸೌಹಾರ್ದ ಭಾರತದ ಕಟ್ಟುವ ಕನಸು ಇದಾಗಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಭಾರತೀಯ ಬೌದ್ಧ ಮಹಾಸಭಾ ಯುವ ಘಟಕದ ಅಧ್ಯಕ್ಷ ದರ್ಶನ್ ಬಿ.ಸೋಮಶೇಖರ್‌, ಹಿಂದೆಂದಿಗಿಂತಲೂ ಇಂದು ಬುದ್ಧ, ಬಸವ, ಅಂಬೇಡ್ಕರರ ಆದರ್ಶಗಳ ಅರಿವು ಅಗತ್ಯವಿದೆ. ಹಾಗಾಗಿ ಅಕಾಡೆಮಿಯ ಜತೆಗೂಡಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಇಂಥ ಕಮ್ಮಟಗಳನ್ನು ಆಯೋಜಿಸುವ ಮೂಲಕ ಯುವಕರನ್ನು ತರಬೇತುಗೊಳಿಸುತ್ತಿದ್ದೇವೆ. ಸುಳ್ಳು ಅಪಪ್ರಚಾರದ ವಿರುದ್ಧ ಸತ್ಯದ ಅಸ್ತ್ರ ಹಿಡಿಯುವ ಯತ್ನ ಇದು ಎಂದರು.

ಅಕಾಡೆಮಿಯ ರಜಿಸ್ಟ್ರಾರ್‌ ಕರಿಯಪ್ಪ ಎನ್‌, ಅಕಾಡೆಮಿಯ ಕಾರ್ಯಚಟುವಟಿಕೆಗಳನ್ನು ವಿವರಿಸಿ, ಸ್ವಾಗತಿಸಿದರು. ಸಿದ್ದರಾಮ ಹಿಪ್ಪರಗಿ ವಂದಿಸಿದರು. ಡಾ.ಅಪ್ಪಗೆರೆ ಸೋಮಶೇಖರ್, ಬಿ.ಆರ್.ಕೃಷ್ಣಪ್ಪ, ಎನ್.ಎನ್.ಗಾಳೆಮ್ಮನವರ ಮತ್ತಿತರರು ಇದ್ದರು. ರಾಜ್ಯದ ವಿವಿಧ ಜಿಲ್ಲೆ, ವಿವಿಧ ವಿವಿಗಳಿಂದ ನೂರಾರು ಶಿಭಿರಾರ್ಥಿಗಳು ಈ ಕಮ್ಮಟದಲ್ಲಿ ಭಾಗಿಯಾಗಿದ್ದಾರೆ.

ಪ್ರೀತಿಸಿದರೆ ಧರ್ಮ ಹಾಳಾಗುತ್ತದೆಯೇ?:

ಸನಾತನ ಧರ್ಮವೂ ಸೇರಿದಂತೆ ಎಲ್ಲ ಧರ್ಮಗಳೂ ಪ್ರೀತಿ, ಶಾಂತಿ, ಸೌಹಾರ್ದತೆಯನ್ನು ಹೇಳಿವೆ. ಆದರೆ, ಕೆಲವರು ಫೆ.14 ಪ್ರೇಮಿಗಳ ದಿನದಂದು ಪ್ರೀತಿಸುವ ಯುವಕ-ಯುವತಿಯರನ್ನು ಹಿಡಿದು ಹಿಂಸಿಸುವ ಶೌರ್ಯ ತೋರುತ್ತಿದ್ದಾರೆ. ಅದುವೇ ಧರ್ಮ ಪಾಲನೆ ಎಂದು ಅವರು ಭಾವಿಸಿದ್ದಾರೆ. ಹೀಗೆ ಪ್ರೀತಿಸುವುದರಿಂದ ಧರ್ಮ ಹಾಳಾಗುತ್ತದೆ ಎನ್ನುವುದು ಅವರ ವಾದ. ಇಂಥ ಧರ್ಮಾಂಧರ ಬಗ್ಗೆ ಯುವ ಸಮೂಹ ಎಚ್ಚರದಿಂದ ಇರಬೇಕು ಎಂದು ಡಾ.ಸಿದ್ಧನಗೌಡ ಪಾಟೀಲ್‌ ಕರೆನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!