ಕನ್ನಡಪ್ರಭ ವಾರ್ತೆ ಬಾಗೇಪಲ್ಲಿ
ತಾಲೂಕಿನ ಕಸಬಾ ಹೋಬಳಿ ಘಂಟಂವಾರಪಲ್ಲಿ ಗ್ರಾಪಂ ವ್ಯಾಪ್ತಿಯ ಪುಟ್ಟಪರ್ತಿ ಗ್ರಾಮಕ್ಕೆ ಸುಮಾರು ₹4 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ನಂತರ ಗ್ರಾಮದ ಹಾಲಿನ ಡೈರಿ ಆವರಣದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೊಂಡರೆಡ್ಡಿಪಲ್ಲಿ ಗ್ರಾಮದಿಂದ ಪುಟ್ಟಪರ್ತಿ ಗ್ರಾಮದವರೆಗೂ ಸುಮಾರು ₹1.72 ಕೋಟಿ ವೆಚ್ಚದಲ್ಲಿ ಟಾರ್ ರಸ್ತೆ ಮತ್ತು ಗ್ರಾಮದಲ್ಲಿ ₹55 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ಸೇರಿ ಸುಮಾರು ₹4 ಕೋಟಿ ವೆಚ್ಚದಲ್ಲಿ ಅತೀ ಶೀಘ್ರದಲ್ಲಿಯೇ ರಸ್ತೆ ಅಭಿವೃದ್ಧಿ ಕಾಮಗಾರಿ ಪ್ರಾರಂಭವಾಗಲಿದೆ. ಅಲ್ಲದೆ ಗ್ರಾಮಕ್ಕೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಕೆಲಸ ಮಾಡುವುದಾಗಿ ತಿಳಿಸಿದ ಅವರು, ತಾಲೂಕಿನ ಗ್ರಾಮೀಣ ಪ್ರದೇಶಗಳ ರಸ್ತೆ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡುವುದಾಗಿ ಹೇಳಿದರು.
ಚಿಮೂಲ್ ಅಧ್ಯಕ್ಷ ವಿ.ಮಂಜುನಾಥರೆಡ್ಡಿ ಮಾತನಾಡಿ, ಒಕ್ಕೂಟದ ವ್ಯಾಪ್ತಿಯ ಡೈರಿಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದವರಿಗೆ ₹3 ಲಕ್ಷ ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ₹5 ಲಕ್ಷಗಳಿಗೆ ಏರಿಕೆ ಮಾಡಲು ಕ್ರಮ ಜರುಗಿಸಲಾಗುವುದು ಎಂದರು.ಇದೇ ವೇಳೆ ಚಿಮುಲ್ ಒಕ್ಕೂಟದ ವ್ಯಾಪ್ತಿಯಲ್ಲಿನ ಡೈರಿಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಕಾರ್ಯದರ್ಶಿಗಳಾದ ಏಟಿಗಡ್ಡಪಲ್ಲಿ ಆದಿನಾರಾಯಣರೆಡ್ಡಿ, ಬಾಲರೆಡ್ಡಿಪಲ್ಲಿ ಚಂದ್ರಾರೆಡ್ಡಿ, ಮಲ್ಲಸಂದ್ರ ಶಂಕರಪ್ಪ, ಆಚೇಪಲ್ಲಿ ವೆಂಕಟರೆಡ್ಡಿ, ಹೊಸಕೋಟೆ ರಾಜಾರೆಡ್ಡಿ ರವರನ್ನು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ರವರು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು.