ಬಾಗೇಪಲ್ಲಿ: ಅನಿಷ್ಠ ಪದ್ಧತಿಗಳಲ್ಲಿ ಒಂದಾಗಿರುವ ಬಾಲ್ಯ ವಿವಾಹ ಪದ್ಧತಿಯನ್ನು ಸಮಾಜದಿಂದ ತೊಲಗಿಸಲು ಪ್ರತಿಯೊಬ್ಬರೂ ಕೈ ಜೋಡಿಸಬೇಕೆಂದು ಹಿರಿಯ ವಕೀಲರು ಹಾಗೂ ತಾಲೂಕು ಮಕ್ಕಳ ರಕ್ಷಣಾ ಸಮಿತಿ ಸದಸ್ಯರಾದ ಎ.ಜಿ.ಸುಧಾಕರ್ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಇತ್ತೀಚಿನ ದಿನಗಳಲ್ಲಿ ಹದಿಹರಿಯದ ಬಾಲಕಿಯರು ಗರ್ಭಿಣಿಯಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ಬಾಲ್ಯ ವಿವಾಹದಿಂದ ಮಕ್ಕಳ ಆರೋಗ್ಯದ ಮೇಲೆ ತೀವ್ರ ಪರಿಣಾಮ ಆಗಲಿದೆ, ಚಿಕ್ಕ ವಯಸ್ಸಿನ ಮಕ್ಕಳು ಡ್ರಗ್ಸ್, ಗಾಂಜಾ, ಆಫೀಮು ಇತ್ಯಾದಿಗಳಿಗೆ ಬಲಿಯಾಗುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದ ಅವರು, ಮಕ್ಕಳ ಚಲನವಲನ ಕಡೆ ಪೋಷಕರು ನಿಗಾವಹಿಸಬೇಕಾದ ಅಗತ್ಯವಿದೆ, ಬಾಲ್ಯ ವಿವಾಹ ಮತ್ತು ಪೋಕ್ಸೋ ಪ್ರಕರಣಗಳ ಮುಕ್ತ ತಾಲೂಕನ್ನಾಗಿಸಲು ಪ್ರತಿಯೊಬ್ಬ ನಾಗರಿಕರ ಸಹಕಾರ ಅಗತ್ಯ ಎಂದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ವೈದ್ಯರಾದ ಡಾ. ಟಿ.ಸರೂಪ ಮತ್ತು ಡಾ. ಶ್ರೀವಾಣಿ ರವರು ಮಹಿಳೆಯರ ಆರೋಗ್ಯ ಮತ್ತು ಕಾನೂನಿನ ಬಗ್ಗೆ ಅರಿವು ಮೂಡಿಸಿದರು.ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕಿಯರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.