ಅಭಿವೃದ್ಧಿ ಕಾರ್ಯಕ್ರಮಗಳಿಗೆ ಒತ್ತು: ಸಚಿವ

KannadaprabhaNewsNetwork |  
Published : Jan 27, 2026, 02:45 AM IST
ಪೊಟೊ: 26ಎಸ್‌ಎಂಜಿಕೆಪಿ16 | Kannada Prabha

ಸಾರಾಂಶ

ರಾಜ್ಯ ಸರ್ಕಾರ ನುಡಿದಂತೆ ನಡೆಯುತ್ತಿದ್ದು, ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಜನರನ್ನು ಸಬಲೀಕರಣಗೊಳಿಸುತ್ತಾ ಆತ್ಮ ವಿಶ್ವಾಸ ಮೂಡಿಸಲಾಗುತ್ತಿದೆ. ಯಾರ ಮಧ್ಯಸ್ಥಿಕೆ ಇಲ್ಲದೆ ಜನರಿಗೆ ನೇರವಾಗಿ ಆರ್ಥಿಕ ಸಹಕಾರ ನೀಡಲಾಗುತ್ತಿದೆ. ಜೊತೆಗೆ ಅಭಿವೃದ್ಧಿ ಕಾರ್ಯಗಳನ್ನೂ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಶಿವಮೊಗ್ಗ: ರಾಜ್ಯ ಸರ್ಕಾರ ನುಡಿದಂತೆ ನಡೆಯುತ್ತಿದ್ದು, ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಜನರನ್ನು ಸಬಲೀಕರಣಗೊಳಿಸುತ್ತಾ ಆತ್ಮ ವಿಶ್ವಾಸ ಮೂಡಿಸಲಾಗುತ್ತಿದೆ. ಯಾರ ಮಧ್ಯಸ್ಥಿಕೆ ಇಲ್ಲದೆ ಜನರಿಗೆ ನೇರವಾಗಿ ಆರ್ಥಿಕ ಸಹಕಾರ ನೀಡಲಾಗುತ್ತಿದೆ. ಜೊತೆಗೆ ಅಭಿವೃದ್ಧಿ ಕಾರ್ಯಗಳನ್ನೂ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದರು. ಸೋಮವಾರ ಗಣರಾಜ್ಯೋತ್ಸವ ಕಾರ್ಯಕ್ರಮದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪಂಚಗ್ಯಾರಂಟಿ ಯೋಜನೆಗಳ ಜೊತೆಗೆ ರಾಜ್ಯ ಮತ್ತು ಜಿಲ್ಲೆಯಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಮೊದಲಿಗೆ 500 ಕೆಪಿಎಸ್ ಶಾಲೆಗಳ ಸ್ಥಾಪನೆಗೆ ಸರ್ಕಾರ ಅನುಮೋದನೆ ನೀಡಿತ್ತು. ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಒಂದೇ ಸೂರಿನಡಿ ಎಲ್‌ಕೆಜಿಯಿಂದ ಹಿಡಿದು ಎಲ್ಲ ಸೌಲಭ್ಯ ಒದಗಿಸುವ ಉದ್ದೇಶದಿಂದ ಇದೀಗ ₹3500 ಕೋಟಿ ವೆಚ್ಚದಲ್ಲಿ 900 ಕೆಪಿಎಸ್ ಶಾಲೆಗಳನ್ನು ಮಂಜೂರು ಮಾಡಲಾಗಿದ್ದು, ಫೆಬ್ರವರಿ ಅಥವಾ ಮಾರ್ಚ್ ಮಾಹೆಯಲ್ಲಿ ಮುಖ್ಯಮಂತ್ರಿಗಳಿಂದ ಶಿವಮೊಗ್ಗ ಜಿಲ್ಲೆಯಲ್ಲಿಯೇ ಈ ಕೆಪಿಎಸ್ ಶಾಲೆಗಳಿಗೆ ಚಾಲನೆ ನೀಡಲಾಗುವುದು ಎಂದರು.

ಕಲ್ಯಾಣ ಕರ್ನಾಟಕಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು. ಮುಂದಿನ ಶೈಕ್ಷಣಿಕ ವರ್ಷದಿಂದ ಎಲ್‌ಕೆಜಿಯಿಂದ 12ನೇ ತರಗತಿವರೆಗೆ ಉಚಿತ ಪಠ್ಯಪುಸ್ತಕಗಳನ್ನು ಹಾಗೂ ನೋಟ್‌ಬುಕ್‌ಗಳನ್ನು ನೀಡಲಾಗುವುದು ಎಂದರು. ಜಿಲ್ಲೆಯಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದ್ದು, ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ಕಾರ್ಯವನ್ನು ಶೀಘ್ರವಾಗಿ ಪೂರ್ಣಗೊಳಿಸಲು ತಿಳಿಸಲಾಗಿದೆ. ಮೆಗ್ಗಾನ್ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ಕಿದ್ವಾಯಿ ಮಾದರಿಯಲ್ಲಿ ಕ್ಯಾನ್ಸರ್ ಆಸ್ಪತ್ರೆ, ಹೈಟೆಕ್ ಶವಾಗಾರ, ಟ್ರಾಮಾ ಸೆಂಟರ್, ಡಾರ್ಮೆಟರಿ, ಎಂಸಿಎ ಬ್ಲಾಕ್, ಕೇಂದ್ರ ಗ್ರಂಥಾಲಯ ಕಟ್ಟಡ ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದೆ ಎಂದು ಮಾಹಿತಿ ನೀಡಿದರು. ಗಣರಾಜ್ಯೋತ್ಸವ ದಿನಾಚರಣೆಯಂದು ಶಾಲಾ ವಿದ್ಯಾರ್ಥಿಗಳು ಅತ್ಯುತ್ತಮವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದ್ದು, ಸಂವಿಧಾನ ಕುರಿತಾದ ವಿಷಯಗಳನ್ನು ಎತ್ತಿ ಹಿಡಿದಿದ್ದಾರೆ. ಪ್ರತಿ ದಿನ ಶಾಲೆಗಳಲ್ಲಿ ಸಂವಿಧಾನದ ಪೀಠಿಕೆ ಓದಿಸುವ ಪರಿಪಾಠವನ್ನು ನಮ್ಮ ಸರ್ಕಾರ ಆರಂಭಿಸಿದ್ದು, ಇದರಿಂದಾಗಿ ಮಕ್ಕಳಲ್ಲಿ ಸಂವಿಧಾನದ ಕುರಿತು ಅರಿವು ಹೆಚ್ಚಾಗಿದೆ ಎಂದರು.

ಪ್ರಗತಿ ಕಾರ್ಯಗಳಿಗೆ ಹೆಚ್ಚು ಒತ್ತು:

ದಶಕಗಳಿಂದ ಬಾಕಿ ಉಳಿದಿರುವ ಶರಾವತಿ ಮುಳುಗಡೆ ಸಂತ್ರಸ್ತರು ಹಾಗೂ ಬಗರ್ ಹುಕುಂ ಸಾಗುವಳಿದಾರರ ಸಮಸ್ಯೆ ಇತ್ಯರ್ಥಕ್ಕೆ ವಿಶೇಷ ಆಸಕ್ತಿ ವಹಿಸಿದ್ದೇವೆ. ಸುಪ್ರೀಂ ಕೋರ್ಟ್ ಸೂಚನೆಯಂತೆ ಸಮೀಕ್ಷಾ ಕಾರ್ಯ ಮುಗಿದಿದ್ದು, ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿ, ಸಂತ್ರಸ್ತರಿಗೆ ಶಾಶ್ವತ ನ್ಯಾಯ ಒದಗಿಸಲು ನಾವು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು ಮಲೆನಾಡು ಭಾಗಕ್ಕೆ ಹೆಚ್ಚಿನ ಅನುದಾನ ಕೇಳಲಾಗಿದೆ ಎಂದು ತಿಳಿಸಿದರು.

ಕರಕುಶಲ ವಸ್ತುಪ್ರದರ್ಶನಕ್ಕೆ ಮೆಚ್ಚುಗೆ:

ನಗರದ ಅಲ್ಲಮಪ್ರಭು ಮೈದಾನದಲ್ಲಿ ಏರ್ಪಡಿಸಿರುವ ಮಲ್ನಾಡ್ ಕರಕುಶಲ ವಸ್ತುಗಳು ಮತ್ತು ಫಲಪುಷ್ಟ ಪ್ರದರ್ಶನ ಉತ್ತಮವಾಗಿದೆ. ಅಲ್ಲಿ ಸ್ವಸಹಾಯ ಗುಂಪಿನ ಮಹಿಳೆಯರು ತಯಾರಿಸಿರುವ ಉತ್ಪನ್ನಗಳಿಗೆ ‘ಕ್ರಾಫ್ಟ್ಸ್ ಆಫ್ ಮಲ್ನಾಡ್’ ಬ್ರಾಂಡಿಂಗ್ ಮಾಡಿ ವೆಬ್‌ಸೈಟ್ ಬಿಡುಗಡೆ ಮಾಡಿರುವುದು ಮಾದರಿಯಾಗಿದೆ ಎಂದರು.

ನಮ್ಮ ಹಳೆಯ ಕಲೆ, ಸಂಸ್ಕೃತಿಯನ್ನು ಬಿಂಬಿಸುವ ಉತ್ಪನ್ನಗಳು, ವಸ್ತುಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ. ಇಂತಹ ಕಲೆಯನ್ನು ಮುಂದಿನ ಪೀಳಿಗೆಗೆ ಒಯ್ಯುವ, ಪರಿಚಯಿಸಿ ಉಳಿಸುವ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಶಾಲೆಗಳಲ್ಲಿ ಮಕ್ಕಳಿಗೆ ಕಲೆ ಕುರಿತಾದ ತರಗತಿ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿಪಂ ಸಿಇಒ ಎನ್‌.ಹೇಮಂತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್, ಅಪರ ಜಿಲ್ಲಾಧಿಕಾರಿ ವಿ.ಅಭಿಷೇಕ್ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೌದ್ಧಿಕ ಬೆಳವಣಿಗೆಗೆ ಸಾಹಿತ್ಯವೇ ದಾರಿದೀಪ
ಸಮಾಜ ಸೇವೆ ಮಾಡುವುದೇ ವಿಶ್ವನಾಥ ಗದ್ದೇಮನೆ ಚಾರಿಟಬಲ್ ಉದ್ದೇಶ: ವಿಶ್ವನಾಥ