ಸವದತ್ತಿಯಲ್ಲಿ ಕೈಗಾರಿಕೋದ್ಯಮ ನಿರ್ಮಾಣಕ್ಕೆ ಒತ್ತು

KannadaprabhaNewsNetwork | Published : Mar 9, 2025 1:48 AM

ಸಾರಾಂಶ

ತಾಲೂಕಿನಲ್ಲಿ ಕೈಗಾರಿಕೋದ್ಯಮ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡುವುದರ ಜೊತೆಗೆ ಈ ಭಾಗದಲ್ಲಿ ಯುವಕರಿಗೆ ಉದ್ಯೋಗ ಸೃಷ್ಟಿಗೆ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಸವದತ್ತಿ

ಸವದತ್ತಿ ತಾಲೂಕಿನಲ್ಲಿ ಕೈಗಾರಿಕೋದ್ಯಮ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡುವುದರ ಜೊತೆಗೆ ಈ ಭಾಗದಲ್ಲಿ ಯುವಕರಿಗೆ ಉದ್ಯೋಗ ಸೃಷ್ಟಿಗೆ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಪಟ್ಟಣದ ಧಾರವಾಡ ರಸ್ತೆಗೆ ಹೊಂದಿಕೊಂಡಿರುವ ನೂತನ ಪ್ರವಾಸಿ ಮಂದಿರದ ಉದ್ಘಾಟನೆ ಹಾಗೂ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಅಳವಡಿಸಿದ ಅಲಂಕಾರಿಕ ಬೀದಿ ವಿದ್ಯುತ್‌ ದೀಪಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಸವದತ್ತಿ ಯಲ್ಲಮ್ಮಾ ಮತಕ್ಷೇತ್ರಕ್ಕೆ ಶಾಸಕ ವಿಶ್ವಾಸ ವೈದ್ಯ ಅವರ ಬೇಡಿಕೆಯಂತೆ ನಮ್ಮ ಇಲಾಖೆಯಡಿ ಸಾಕಷ್ಟು ಅನುದಾನವನ್ನು ನೀಡಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಉತ್ತಮವಾಗಿ ನಡೆಯುತ್ತಿವೆ. ಬರುವಂತ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನವನ್ನು ನೀಡುವ ಮೂಲಕ ಸವದತ್ತಿ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಲಾಗುತ್ತಿದೆ ಎಂದರು.

ಶಾಸಕ ವಿಶ್ವಾಸ ವೈದ್ಯ ಮಾತನಾಡಿ, ಸವದತ್ತಿ ಯಲ್ಲಮ್ಮಾ ಮತಕ್ಷೇತ್ರಕ್ಕೆ ₹೧೫೦ ಕೋಟಿ ಅನುದಾನವನ್ನು ಸಚಿವರಾದ ಸತೀಶ ಜಾರಕಿಹೊಳಿಯವರು ನೀಡುವ ಮೂಲಕ ಕ್ಷೇತ್ರದ ಅಭಿವೃದ್ದಿಗೆ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ಹಿಂದಿನ ಶಾಸಕರಾದ ಆನಂದ ಮಾಮನಿಯವರ ಅವಧಿಯಲ್ಲಿ ₹೨.೫ ಕೋಟಿ ಅನುದಾನದಲ್ಲಿ ನೂತನ ಪ್ರವಾಸಿ ಮಂದಿರದ ನಿರ್ಮಾಣಕ್ಕೆ ಅಡಿಗಲ್ಲು ಮಾಡಲಾಗಿತ್ತು. ಈ ಕಟ್ಟಡಕ್ಕೆ ಹೆಚ್ಚುವರಿಯಾಗಿ ₹೭೫ ಲಕ್ಷ ಅನುದಾನವನ್ನು ಸತೀಶ ಜಾರಕಿಹೊಳಿಯವರು ನೀಡಿ ಪ್ರವಾಸಿ ಮಂದಿರದ ಕಟ್ಟಡದ ಕಾಮಗಾರಿಯನ್ನು ಪೂರ್ಣಗೊಳಿಸಿ ಇಂದು ಉದ್ಘಾಟನೆ ಮಾಡಲಾಗಿದೆ. ಭಗೀರಥ ಸರ್ಕಲ್‌ದಿಂದ ಬಸ್‌ ನಿಲ್ದಾಣದವರೆಗೆ ಅಲಂಕಾರಿಕ ವಿದ್ಯುತ್‌ ದ್ವೀಪಗಳ ಅಳವಡಿಕೆ ಮಾಡಲಾಗಿದ್ದು, ಅವುಗಳಿಗೂ ಇಂದು ಚಾಲನೆ ನೀಡಲಾಗುತ್ತಿದೆ ಎಂದರು.

ಮಾಜಿ ಶಾಸಕ ಆರ್.ವಿ.ಪಾಟೀಲ, ಪುರಸಭೆ ಅಧ್ಯಕ್ಷೆ ಚಿನ್ನವ್ವ ಹುಚ್ಚನ್ನವರ, ಟಿಎಪಿಸಿಎಂಎಸ್ ಅಧ್ಯಕ್ಷ ರವೀಂದ್ರ ಯಲಿಗಾರ, ಎಪಿಎಂಸಿ ಅಧ್ಯಕ್ಷ ಚಂದ್ರು ಜಂಬ್ರಿ, ರಾಜಶೇಖರ ಕಾರದಗಿ, ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ, ಮುಖ್ಯಾಧಿಕಾರಿ ಸಂಗಮೇಶ, ತಾಪಂ ಆನಂದ ಬಡಕುಂದರಿ, ಚಂದ್ರು ಶಾಮರಾಯನವರ, ದೀಪಕ ಜಾನ್ವೇಕರ, ಫಕ್ಕೀರಪ್ಪ ಹದ್ದನ್ನವರ, ಸಿ.ಬಿ.ಬಾಳಿ, ಮಾರುತಿ ಬಸಲಿಗುಂದಿ, ಮಲ್ಲು ಜಕಾತಿ, ಬಿ.ಎನ್.ಪ್ರಭುನವರ, ಬಸವರಾಜ ಗುರಣ್ಣವರ, ಪ್ರಕಾಶ ಲಮಾಣಿ, ಡಿ.ಡಿ.ಟೋಪೋಜಿ, ಎಇಇ ಎಸ್.ಎಸ್.ಸೊಬರದ, ವಿಜಯ ಸಂಗಪ್ಪಗೋಳ ಇತರರು ಉಪಸ್ಥಿತರಿದ್ದರು.

Share this article