ಜೆಡಿಎಸ್‌ನಿಂದ ಮೂರು ತಿಂಗಳಲ್ಲಿ ನಾಲ್ಕು ಸಮಾವೇಶಗಳು ನಡೆಯಬೇಕು : ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ

KannadaprabhaNewsNetwork |  
Published : Mar 09, 2025, 01:48 AM ISTUpdated : Mar 09, 2025, 10:18 AM IST
JDS 2 | Kannada Prabha

ಸಾರಾಂಶ

ರಾಜ್ಯದಲ್ಲಿ ಸಾಮಾಜಿಕ ನ್ಯಾಯ, ದುರ್ಬಲರಿಗೆ ಮೀಸಲಾತಿ ಸೌಲಭ್ಯ ತಂದಿದ್ದೇ ನಾವು. ಆದರೆ ಇವತ್ತು ಅದರ ಪ್ರತಿಫಲವನ್ನು ಕಾಂಗ್ರೆಸ್‌ ಅನುಭವಿಸುತ್ತಿದೆ ಎಂದು ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡ ಟೀಕಿಸಿದ್ದಾರೆ.

 ಬೆಂಗಳೂರು : ರಾಜ್ಯದಲ್ಲಿ ಸಾಮಾಜಿಕ ನ್ಯಾಯ, ದುರ್ಬಲರಿಗೆ ಮೀಸಲಾತಿ ಸೌಲಭ್ಯ ತಂದಿದ್ದೇ ನಾವು. ಆದರೆ ಇವತ್ತು ಅದರ ಪ್ರತಿಫಲವನ್ನು ಕಾಂಗ್ರೆಸ್‌ ಅನುಭವಿಸುತ್ತಿದೆ ಎಂದು ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡ ಟೀಕಿಸಿದ್ದಾರೆ.

ಶನಿವಾರ ಜೆಡಿಎಸ್‌ ಕಚೇರಿ ಜೆ.ಪಿ.ಭವನದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್‌ ಬಗ್ಗೆ ಒಂದು ಶಬ್ದವನ್ನೂ ಮಾತನಾಡುವುದಿಲ್ಲ. ಸಮಯ ಬಂದಾಗ ಮಾತನಾಡುತ್ತೇನೆ. ಆದರೆ ಸಾಮಾಜಿಕ ನ್ಯಾಯ ಎಂದೆಲ್ಲ ಮಾತನಾಡುತ್ತಿದ್ದಾರೆ. ರಾಜ್ಯದಲ್ಲಿ ಸಾಮಾಜಿಕ ನ್ಯಾಯ ಮತ್ತು ದುರ್ಬಲರಿಗೆ ಮೀಸಲಾತಿ ಸೌಲಭ್ಯ ಕೊಟ್ಟಿದ್ದೇ ನಾವು. ಆದರೆ, ಅದು ಕಾಂಗ್ರೆಸ್‌ ಪಕ್ಷಕ್ಕೆ ಅನುಕೂಲವಾಗಿದೆ ಎಂದು ಕಿಡಿಕಾರಿದರು.

ಮುಂದಿನ ದಿನದಲ್ಲಿ ಹಲವು ಸಮಾವೇಶಗಳು ನಡೆಯಬೇಕು. ಮೂರು ತಿಂಗಳಲ್ಲಿ ನಾಲ್ಕು ಸಮಾವೇಶಗಳು ನಡೆಯಬೇಕು. ಅಹಿಂದ, ಯುವಕರ, ಮಹಿಳೆಯರ, ಹಿರಿಯ ನಾಗರಿಕರ ಸಮಾವೇಶ ನಡೆಸಬೇಕು. ಭಿಕ್ಷೆ ಬೇಡಿಯಾದರೂ ಹಣ ಹೊಂದಿಸಲಾಗುವುದು. ಅಲ್ಲದೆ, ಮುಂಬರುವ ದಿನದಲ್ಲಿ ನಿಖಿಲ್‌ ಕುಮಾರಸ್ವಾಮಿ ರಾಜ್ಯದ ಉದ್ದಗಲಕ್ಕೂ ಓಡಾಡಿ ಪಕ್ಷ ಕಟ್ಟಬೇಕು ಮತ್ತು ಸಮಾವೇಶಗಳನ್ನು ನಡೆಸಬೇಕು ಎಂದು ಕರೆ ನೀಡಿದರು.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕನಿಷ್ಠ 80 ಮಹಿಳೆಯರು ಜೆಡಿಎಸ್‌ನಿಂದ ಸ್ಪರ್ಧಿಸಬೇಕು. ಅದನ್ನು ನಾನು ಕಣ್ಣಾರೆ ನೋಡಬೇಕು. ಲೊಕಸಭೆಯಲ್ಲಿ ಮಹಿಳಾ ಮೀಸಲಾತಿ ವಿಧೇಯಕ ಅಂಗೀಕಾರವಾಗಿದ್ದು, ಮಹಿಳೆಯರು ಚುನಾವಣೆಗೆ ಸ್ಪರ್ಧಿಸಲು ಅನುಕೂಲವಾಗಿದೆ. ಪಕ್ಷ ಸಂಘಟನೆಗೆ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು. ಪ್ರತಿ ಜಿಲ್ಲೆಗೂ ಭೇಟಿ ನೀಡಿ, ಕಾರ್ಯಕರ್ತರನ್ನು ಸಂಪರ್ಕಿಸಬೇಕು ಎಂದರು.

ಜೆಡಿಎಸ್‌ ಯುವಘಟಕ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಮಾತನಾಡಿ, ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ದೇಶದ ಪ್ರಧಾನಿಯಾಗಿ, ರಾಜ್ಯದ ಮುಖ್ಯಮಂತ್ರಿಯಾಗಿ ಹಲವು ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಅದಕ್ಕೆ ನಮ್ಮ ತಾತನ ಹಿಂದೆ ಇದ್ದ ಶಕ್ತಿ ನಮ್ಮ ಅಜ್ಜಿ ಚನ್ನಮ್ಮ. ಹಳ್ಳಿಗಳಿಂದ ಬರುತ್ತಿದ್ದ ಜನರಿಗೆಲ್ಲ ಮನೆಯಲ್ಲಿ ಅತ್ಯಂತ ವಾತ್ಸಲ್ಯದಿಂದ ಸತ್ಕಾರ ಮಾಡುತ್ತಿದ್ದರು. ಅವರ ತ್ಯಾಗ ಎಲ್ಲರಿಗೂ ಗೊತ್ತಿದೆ. ಅದನ್ನು ಮರೆಯಲು ಸಾಧ್ಯವಿಲ್ಲ. ಅವರು ಆದರ್ಶ ಜೀವನ ಮಾಡಿದ್ದಾರೆ. ಇದೆಲ್ಲವನ್ನು ನೋಡುವ ಭಾಗ್ಯ ನನ್ನದಾಗಿದೆ ಎಂದು ಭಾವುಕರಾದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ, ಜೆಡಿಎಸ್‌ ಶಾಸಕಾಂಗ ಪಕ್ಷ ನಾಯಕ ಸಿ.ಬಿ. ಸುರೇಶ್ ಬಾಬು, ಮಾಜಿ ಸಚಿವರಾದ ಲೀಲಾದೇವಿ ಆರ್.‌ ಪ್ರಸಾದ್‌, ವೆಂಕಟರಾವ್ ನಾಡಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಡಿಕೆಸು ವಿರುದ್ಧ ಅನಿತಾ ಕಿಡಿ

ರಾಮನಗರದ ಶಾಸಕಿಯಾಗಿದ್ದ ವೇಳೆ ಹಲವು ಸಮಸ್ಯೆಗಳನ್ನು ಎದುರಿಸಿದ್ದು, ಹಾರೋಹಳ್ಳಿ ತಾಲೂಕು ರಚನೆ ಮಾಡುವುದಕ್ಕೆ ಕೆಲವರು ಬಿಡಲಿಲ್ಲ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್‌ ಹೆಸರು ಪ್ರಸ್ತಾಪಿಸಿದೆ ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಕಿಡಿಕಾರಿದರು.

ವಿಧಾನಸೌದದಲ್ಲಿ ಕಡತಗಳನ್ನು ಮುಚ್ಚಿಡುತ್ತಿದ್ದರು. ರಾಮನಗರ ಎಲ್ಲಿತ್ತು ಎಂಬುದೇ ಅವರಿಗೆ ಗೊತ್ತಿರಲಿಲ್ಲ, ಅವರು ವೀರಾವೇಷದ ಭಾಷಣ ಮಾಡುತ್ತಿದ್ದರು. ರಾಮನಗರಕ್ಕೆ ನಮ್ಮ ಕೊಡುಗೆ ಏನೆಂಬುದನ್ನು ಕೇಳುತ್ತಿದ್ದರು. ಈಗ ನಾವು ಅಭಿವೃದ್ಧಿ ಹೊಂದಿದ ರಾಮನಗರವನ್ನು ನೋಡುತ್ತಿದ್ದೇವೆ. ಅದಕ್ಕೆ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ, ಕೇಂದ್ರ ಬೃಹತ್‌ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಮತ್ತು ನನ್ನ ಕೊಡುಗೆ ಇದೆ. ಕಾಂಗ್ರೆಸ್‌ ಕೊಡುಗೆ ಶೂನ್ಯ ಎಂದು ವಾಗ್ದಾಳಿ ನಡೆಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ