ಕೊಪ್ಪಳ: ಕೊಪ್ಪಳ ನಗರದ ಸಮಗ್ರ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜನರ ಆರೋಗ್ಯ ರಕ್ಷಣೆಗೆ ಸರ್ಕಾರ ಆದ್ಯತೆ ನೀಡಿದ್ದು, ನಗರವನ್ನು ರಾಜ್ಯದಲ್ಲೇ ಮಾದರಿ ನಗರವನ್ನಾಗಿ ರೂಪಿಸುವ ಗುರಿ ಹೊಂದಲಾಗಿದೆ ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಹೇಳಿದರು.
ಆರೋಗ್ಯ ಕ್ಷೇತ್ರದಲ್ಲಿ ₹135 ಕೋಟಿ ವೆಚ್ಚದಲ್ಲಿ ವೈದ್ಯಕೀಯ ಕಾಲೇಜು ಆರಂಭಿಸಿ, ಜಿಲ್ಲಾಸ್ಪತ್ರೆಯ ಸಾಮರ್ಥ್ಯವನ್ನು 450ರಿಂದ 1,000 ಹಾಸಿಗೆಗಳಿಗೆ ಹೆಚ್ಚಿಸಲಾಗಿದೆ. ಇತ್ತೀಚಿನ ಬಜೆಟ್‌ನಲ್ಲಿ ಸುಮಾರು ₹150 ಕೋಟಿ ವೆಚ್ಚದಲ್ಲಿ ಕ್ಯಾನ್ಸರ್ ಕೇರ್ ಸೆಂಟರ್ ನಿರ್ಮಾಣಕ್ಕೆ ಮಂಜೂರಾತಿ ದೊರೆತಿರುವುದು ಜಿಲ್ಲೆಯ ಜನರಿಗೆ ಮಹತ್ವದ ಕೊಡುಗೆ ಎಂದರು.
ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಬಡ ಕುಟುಂಬಗಳಿಗೆ ಆರ್ಥಿಕ ನೆರವು ತಲುಪುತ್ತಿದೆ. ಗೃಹಲಕ್ಷ್ಮಿ, ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ ಹಾಗೂ ಯುವನಿಧಿ ಯೋಜನೆಗಳು ಜನರಿಗೆ ನೆರವಾಗುತ್ತಿವೆ ಎಂದು ಹೇಳಿದರು.ಕೊಪ್ಪಳ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ₹1.47 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಆರು ಕೊಠಡಿಗಳನ್ನು ಉದ್ಘಾಟಿಸಿದರು. ಕೆಕೆಆರ್‌ಡಿಬಿ ಅನುದಾನದಡಿ ವಾರ್ಡ್‌ಗಳಿಗೆ ಕಳೆದ ವರ್ಷ ₹20 ಲಕ್ಷ ನೀಡಲಾಗಿದ್ದು, ಈ ಬಾರಿ ₹25 ಲಕ್ಷಕ್ಕೆ ಹೆಚ್ಚಿಸಲಾಗಿದೆ. ರಸ್ತೆ, ಚರಂಡಿ, ಕುಡಿಯುವ ನೀರು ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು ಎಂದರು.
ಮಾಜಿ ಜಿಪಂ ಸದಸ್ಯ ಎಸ್.ಬಿ. ನಾಗರಳ್ಳಿ, ಪ್ರಾಧಿಕಾರದ ಅಧ್ಯಕ್ಷ ಪ್ರಸನ್ನ ಗಡಾದ, ಮಾಜಿ ಸದಸ್ಯರಾದ ಗೂಳಪ್ಪ ಹಲಿಗೇರಿ, ಗವಿಸಿದ್ದಪ್ಪ ಕರಡಿ, ಮಾಜಿ ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾಟನ್ ಪಾಷಾ ಉಪಸ್ಥಿತರಿದ್ದರು.