ಗೋಪಾಲ್ ಯಡಗರೆ
ಸರ್ಕಾರಿ ಶಾಲೆಗಳತ್ತ ಮಕ್ಕಳನ್ನು ಸೆಳೆಯುವ ಉದ್ದೇಶದಿಂದ ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು (ಎಲ್ ಕೆಜಿ, ಯುಕೆಜಿ) ಆರಂಭಿಸಿರುವ ಬೆನ್ನಲ್ಲೆ ಅಂಗನವಾಡಿಗಳಲ್ಲಿ ಮಕ್ಕಳ ಸಂಖ್ಯೆ ಕುಸಿಯುತ್ತಿದ್ದು, ಭವಿಷ್ಯದಲ್ಲಿ ಬಹುತೇಕ ಅಂಗನವಾಡಿಗಳು ಬಾಗಿಲು ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ 93 ಪ್ರಾಥಮಿಕ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಲಾಗಿದೆ. ಇದರಿಂದ ಸರ್ಕಾರಿ ಶಾಲೆಗಳಲ್ಲಿ ಇದು ಒಂದು ರೀತಿಯಲ್ಲಿ ವರವಾಗಬಹದು. ಆದರೆ, ಇದುವರೆಗೆ ಸರ್ಕಾರವೇ ನಡೆಸುತ್ತಿದ್ದ ಅಂಗನವಾಡಿಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವುದರಿಂದ ಸರ್ಕಾರದ ಹೊಸ ಸುಧಾರಣಾ ನೀತಿ ಅಂಗನವಾಡಿ ಕೇಂದ್ರಗಳ ಪಾಲಿಗೆ ಶಾಪವಾಗಿ ಪರಿಣಮಿಸಿದೆ.ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಮೂಲಕ ಆರು ವರ್ಷದ ಒಳಗಿನ ಮಕ್ಕಳ ಬೆಳವಣಿಗೆಗೆ ಅಗತ್ಯವಾದ ಪೌಷ್ಟಿಕ ಆಹಾರ ನೀಡುವ ಜತೆಗೆ, ಪೂರ್ವ ಪ್ರಾಥಮಿಕ ಶಿಕ್ಷಣದ ಖಾತ್ರಿಯನ್ನೂ ಅಂಗನವಾಡಿ ದಶಕಗಳ ಕಾಲ ಒದಗಿಸಿದೆ. ಅಂಗನವಾಡಿ ಕಾರ್ಯಕರ್ತೆಯರು ಅತ್ಯಂತ ಕಡಿಮೆ ಗೌರವ ಸಂಭಾವನೆ ಪಡೆದರೂ, ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಗಣನೀಯ ಕೊಡುಗೆ ನೀಡಿದ್ದಾರೆ. ಆದರೆ, ಈಗ ಸರ್ಕಾರಿ ಶಾಲೆಗಳಲ್ಲೇ ಪೂರ್ವ ಪ್ರಾಥಮಿಕ ತರಗತಿಗಳನ್ನು ಆರಂಭಿಸಿರುವುದರಿಂದ ಮುಂದೆ ಅಂಗನವಾಡಿಗಳು ಬಾಗಿಲು ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂಬುದು ಅಂಗನವಾಡಿ ಕಾರ್ಯಕರ್ತೆಯರ ಆತಂಕ.
ಖಾಸಗಿ ವ್ಯವಸ್ಥೆಯಲ್ಲಿ ಅಂಗನವಾಡಿ ಶಬ್ದಗಳಿಲ್ಲ. ಬದಲಾಗಿ ಎಲ್‌ಕೆಜಿ, ಯುಕೆಜಿಗಳಿವೆ. ಇದು ಅಂಗನವಾಡಿ ಮಕ್ಕಳಿಗೆ ತಾರತಮ್ಯದ ಪ್ರತೀಕವಾಗಿ ಕಾಣುತ್ತಿತ್ತು. ಆದರೆ ಇದು ದೂರದ ನಗರಗಳಲ್ಲಿ ಮಾತ್ರವಿತ್ತು. ಆದರೀಗ ಈ ಎಲ್‌ಕೆಜಿ, ಯುಕೆಜಿ ಅಂಗನವಾಡಿ ಪಕ್ಕದಲ್ಲಿಯೇ ಸ್ಥಾಪಿತವಾಗುತ್ತಿದೆ. ಜೊತೆಗೆ ಆಧುನಿಕ ಸ್ಷರ್ಷದೊಂದಿಗೆ ಇದನ್ನು ಆರಂಭಿಸುತ್ತಿದ್ದು, ಸಹಜವಾಗಿಯೇ ಈ ಮಕ್ಕಳ ಮತ್ತು ಪೋಷಕರ ಗಮನ ಅತ್ತ ಹರಿಯುವುದು ಸಹಜವಾಗಿದೆ.
ಸರ್ಕಾರಿ ಶಾಲೆಯಲ್ಲಿಯೇ ಎಲ್ ಕೆ ಜಿ, ಯುಕೆಜಿ ಆರಂಭಿಸಿದರೆ, ಮುಂದೆ ಒಂದನೇ ತರಗತಿಯಿಂದ ಕೂಡ ಮಕ್ಕಳು ಅಲ್ಲಿಯೇ ಮುಂದುವರಿಯುತ್ತಾರೆ. ಇದರಿಂದ ಸರ್ಕಾರಿ ಶಾಲೆಗಳಿಗೆ ಮಕ್ಕಳ ಸಂಖ್ಯೆ ಕಡಿಮೆಯಾಗೋದಿಲ್ಲ. ಇನ್ನು ಪೂರ್ವ ಪ್ರಾಥಮಿಕ ಶಿಕ್ಷಣ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿದ್ದು, ಅದನ್ನು ಶಿಕ್ಷಣ ಇಲಾಖೆಗೆ ಸೇರಿಸುವುದರಿಂದ ಒಂದೇ ಇಲಾಖೆಯಡಿ, ಮಕ್ಕಳ ಸಮಗ್ರ ಶಿಕ್ಷಣಕ್ಕೆ ಅನಕೂಲವಾಗುತ್ತದೆ ಎನ್ನುವುದು ಸರ್ಕಾರದ ಚಿಂತನೆ.
ಆದರೆ, ಇದೇ ವಿಷಯ ಅಂಗನವಾಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಯಕರ್ತೆಯರು ಭಯಕ್ಕೆ ಕಾರಣವಾಗಿದೆ. ಸರ್ಕಾರದ ಈ ನಿರ್ಧಾರದಿಂದ ಅಂಗನವಾಡಿ ಗೆ ಬರುವ ಮಕ್ಕಳೇ ಸರ್ಕಾರಿ ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿಗೆ ಸೇರಿದರೆ ಅಂಗನವಾಡಿಗೆ ಯಾರೂ ಬರೋದಿಲ್ಲ. ಮಕ್ಕಳು ಇಲ್ಲದೇ ಹೋದರೆ ಅಂಗನವಾಡಿ ಗಳು ಬಂದ್ ಆಗಬಹುದು ಎನ್ನುವ ಆತಂಕ ಈ ಕಾರ್ಯಕರ್ತೆಯರದ್ದು. ಹೀಗಾಗಿ ಸರ್ಕಾರದ ಎಲ್ ಕೆಜಿ, ಯುಕೆಜಿ ಸ್ಥಾಪನೆಯ ನಿರ್ಧಾರವನ್ನು ಅಂಗನವಾಡಿ ಕಾರ್ಯಕರ್ತೆಯರು ಆರಂಭದಿಂದಲೇ ವಿರೋಧಿಸುತ್ತಾ ಬಂದಿದ್ದು, ಸರ್ಕಾರ ನಿರ್ಧಾರದ ಬದಲಾಗಿ ಅಂಗನವಾಡಿ ಗಳಿಗೆ ಎಲ್‌ಕೆಜಿ, ಯುಕೆಜಿ ನಡೆಸಲು ಅವಕಾಶ ನೀಡಬೇಕು ಎಂಬುದು ಅಂಗನವಾಡಿ ಕಾರ್ಯಕರ್ತೆಯರ ಆಗ್ರಹ.
ಶಿವಮೊಗ್ಗ ಜಿಲ್ಲೆಯೊಂದರಲ್ಲಿಯೇ 2563 ಅಂಗನವಾಡಿಗಳಿದ್ದು, 84,877 ಸಾವಿರ ಮಕ್ಕಳು ಅಂಗನವಾಡಿಗಳಲ್ಲಿ ಓದುತ್ತಿದ್ದಾರೆ. 2389 ಅಂಗನವಾಡಿ ಕಾರ್ಯ ಕರ್ತೆಯರು, 1870 ಸಹಾಯಕಿಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸರ್ಕಾರಿ ಶಾಲೆಯಲ್ಲಿಯೇ ಎಲ್‌ಕೆಜಿ, ಯುಕೆಜಿ ಆರಂಭಿಸಿದರೆ, ಅಂಗನವಾಡಿಗೆ ಮಕ್ಕಳು ಬರೋದಿಲ್ಲ. ನಿಧಾನವಾಗಿ ಅಂಗನವಾಡಿಗಳನ್ನು ಬಂದ್ ಮಾಡುತ್ತಾರೆ. ಮುಂದೆ ನಾವು ಬೀದಿಗೆ ಬೀಳುತ್ತೇವೆ ಎನ್ನುವ ಆತಂಕ ಅಂಗನವಾಡಿ ಕಾರ್ಯಕರ್ತೆ ಯರನ್ನು ಕಾಡಲು ಆರಂಭಿಸಿದೆ.ಅಂಗನವಾಡಿಗಳನ್ನೆ ಮೇಲ್ದರ್ಜೆಗೇರಿಸಿ