ಕನ್ನಡಪ್ರಭ ವಾರ್ತೆ ಅಂಕೋಲಾ
ತಾಲೂಕಿನ ಕೇಣಿಯಲ್ಲಿ ನಿರ್ಮಿಸಲು ಉದ್ದೇಶಿತ ವಾಣಿಜ್ಯ ಬಂದರು ಯೋಜನೆ ವಿರುದ್ಧ ಅಂಕೋಲಾ ಉತ್ತರ ಕನ್ನಡ ಉಳಿಸಿ ವೇದಿಕೆಯಿಂದ ಅಂಕೋಲಾದಿಂದ ಕಾರವಾರ ಜಿಲ್ಲಾಧಿಕಾರಿ ಕಚೇರಿಯವರೆಗೆ ಸಾಂಕೇತಿಕ ಪಾದಯಾತ್ರೆಗೆ ಪಟ್ಟಣದಲ್ಲಿ ಚಾಲನೆ ನೀಡಲಾಯಿತು.ಸ್ವಾತಂತ್ರ‍್ಯ ಹೋರಾಟದ ಚಾರಿತ್ರಿಕ ಮಹತ್ವ ಹೊಂದಿರುವ ಗಾಂಧಿ ಮೈದಾನದ ಸ್ವಾತಂತ್ರ‍್ಯ ಸಂಗ್ರಾಮ ಭವನದ ಎದುರಿನ ಸ್ವರ್ಣ ಉದ್ಯಾನದಲ್ಲಿರುವ ಮಹಾತ್ಮಾ ಗಾಂಧೀಜಿ ಪ್ರತಿಮೆಗೆ ಮರೈನ್ ಬಯಾಲಜಿ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕ ವಿ.ಎನ್. ನಾಯಕ ಮತ್ತು ಸ್ವಾತಂತ್ರ‍್ಯ ಹೋರಾಟಗಾರರ ಪ್ರತಿಮೆಗೆ ನಾಟಿ ವೈದ್ಯ ಹನುಮಂತ ಗೌಡ ಮಾಲಾರ್ಪಣೆ ಮಾಡಿ ಪಾದಯಾತ್ರೆಗೆ ಚಾಲನೆ ನೀಡಿದರು.
ಹೋರಾಟ ವೇದಿಕೆಯ ಪ್ರಮುಖ ಸಂಜೀವ ಬಲೆಗಾರ ಮಾತನಾಡಿ ಶಾಂತಿ, ಅಹಿಂಸೆಯಿಂದ ಬ್ರಿಟಿಷರ ವಿರುದ್ಧ ಹೋರಾಟ, ಸತ್ಯಾಗ್ರಹ ನಡೆಸಿದ ಕೆಚ್ಚೆದೆಯ ಸ್ವಾತಂತ್ರ‍್ಯ ಹೋರಾಟಗಾರರ ಪುಣ್ಯಭೂಮಿಯಲ್ಲಿ ಸ್ಥಳೀಯ ಜನರು ತಮ್ಮ ಅಸ್ತಿತ್ವಕ್ಕಾಗಿ, ನೆಲ ಜಲದ ರಕ್ಷಣೆಗಾಗಿ ಶಾಂತಿಯುತ ಹೋರಾಟವನ್ನೇ ನಡೆಸುವುದು ಗೆಲುವು ದೊರಕುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.ಈ ಸಂದರ್ಭ ಸ್ಪಂದನ ಫೌಂಡೇಶನ್‌ನ ಅಧ್ಯಕ್ಷ ಗೋಪಾಲಕೃಷ್ಣ ನಾಯಕ, ಹಿರಿಯ ವೈದ್ಯ ವೆಂಕಟೇಶ ಕೇಣಿಕರ್, ಸಂದೀಪ ಬಂಟ, ಉದಯ ನಾಯಕ, ಪ್ರಮೋದ ಬಾನಾವಳಿಕರ ಸೇರಿದಂತೆ ಮೀನುಗಾರರ ಪ್ರಮುಖರು, ರೈತ ಹೋರಾಟ ಸಮಿತಿಯ ಇತರರು, ಕೇಣಿ ಗ್ರಾಮದ ಸುತ್ತಮುತ್ತಲಿನ ರೈತರು, ಮೀನುಗಾರ ಮಹಿಳೆಯರು ಸೇರಿದಂತೆ ಸಾವಿರಾರು ಜನರು ಸ್ವಾತಂತ್ರ್ಯಸಂಗ್ರಾಮ ಸ್ಮಾರಕ ಭವನದ ಬಳಿ ಜಮಾಯಿಸಿದ್ದರು.
ಪೊಲೀಸ್ ಇಲಾಖೆಯು ಅಂಕೋಲಾದ ಪಟ್ಟಣದಿಂದ ಬಾಳೆಗುಳಿಯವರೆಗೆ (4 ಕಿಮೀ) ಪಾದಯಾತ್ರೆ ಹೊರಡಲು ನೂರು ಜನರಿಗೆ ಮಾತ್ರ ಅವಕಾಶ ನೀಡಿದ್ದರಿಂದ ಉಳಿದವರು ವಿವಿಧ ವಾಹನಗಳಲ್ಲಿ ಕಾರವಾರಕ್ಕೆ ತೆರಳಿದರು. ಡಿವೈಎಸ್ಪಿ ಗಿರೀಶ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.