ಗ್ರಾಮಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಒತ್ತು

KannadaprabhaNewsNetwork |  
Published : Aug 11, 2025, 12:30 AM IST
10ಜಿಯುಡಿ1 | Kannada Prabha

ಸಾರಾಂಶ

ಗುಡಿಬಂಡೆ ಕ್ಷೇತ್ರದ ಬಹುತೇಕ ಎಲ್ಲಾ ಗ್ರಾಮಗಳಲ್ಲಿ ಶುದ್ದ ಕುಡಿಯುವ ನೀರಿನ ಘಟಕ, ಉತ್ತಮವಾದ ರಸ್ತೆಗಳನ್ನು ನಿರ್ಮಾಣ ಮಾಡಲಾಗಿದೆ. ಆದಷ್ಟು ಶೀಘ್ರವಾಗಿ ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಉತ್ತಮವಾದ ರಸ್ತೆ ನಿರ್ಮಾಣ ಮಾಡಿ ಜನರಿಗೆ ಅನುಕೂಲ ಕಲ್ಪಿಸಲು ಶಾಸಕರು ಉದ್ದೇಶಿಸಿದ್ದಾರೆ

ಕನ್ನಡಪ್ರಭ ವಾರ್ತೆ ಗುಡಿಬಂಡೆ

ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಗ್ರಾಮೀಣ ಭಾಗಗಳಲ್ಲಿ ರಸ್ತೆ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ನನ್ನ ಮೊದಲ ಆದ್ಯತೆಯಾಗಿದೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು.

ಗುಡಿಬಂಡೆ ಸೋಮೇನಹಳ್ಳಿ ಹೋಬಳಿ ವ್ಯಾಪ್ತಿಯ ಸೋಮೇಶ್ವರ-ಸಾದಲಿ ಮುಖ್ಯ ರಸ್ತೆ ಅಭಿವೃದ್ದಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು.

ರಸ್ತೆ ಅಭಿವೃದ್ಧಿಗೆ ₹ 5 ಕೋಟಿ

ಚಿಕ್ಕಬಳ್ಳಾಪುರದ ಪೇರೆಸಂದ್ರ ಕ್ರಾಸ್ ಬಳಿಯಿಂದ ಸಾದಲಿ, ಸೋಮೇಶ್ವರ ಮಾರ್ಗ ಗುಂಡಿಗಳಿಂದ ಕೂಡಿದ್ದು, ಜನರು ಸಂಚರಿಸಲು ಕಷ್ಟಕರವಾಗಿತ್ತು. ಈ ಭಾಗದ ಜನರು ಸುಮಾರು ದಿನಗಳಿಂದ ರಸ್ತೆ ದುರಸ್ಥಿಗಾಗಿ ಮನವಿ ಮಾಡಿದ್ದರು. ಅದರಂತೆ ಇದೀಗ ಸುಮಾರು 5 ಕೋಟಿ ವೆಚ್ಚದಲ್ಲಿ ಈ ರಸ್ತೆ ಅಭಿವೃದ್ದಿ ಕಾಮಗಾರಿ ನಡೆಯಲಿದೆ ಎಂದರು.

ಈಗಾಗಲೇ ಗುತ್ತಿಗೆದಾರರಿಗೆ ಗುಣಮಟ್ಟದ ಕಾಮಗಾರಿಯನ್ನು ನೆರವೇರಿಸುವಂತೆ ಸೂಚನೆ ನೀಡಿದ್ದೇನೆ. ಗ್ರಾಮಸ್ಥರು ಸಹ ಕಾಮಗಾರಿಯ ಗುಣಮಟ್ಟ ಕಾಪಾಡುವಲ್ಲಿ ಗಮನ ಹರಿಸಬೇಕು. ಇನ್ನೂ ಮುದ್ದರೆಡ್ಡಿಹಳ್ಳಿ ಗ್ರಾಮದ ರಸ್ತೆ ಸಹ ತುಂಬಾನೆ ಹದೆಗಟ್ಟಿದ್ದು, ಜನರಿಗೆ ಸಮಸ್ಯೆಯಾಗಿದೆ. ಈ ರಸ್ತೆಯನ್ನು ದುರಸ್ತಿ ಮಾಡಲು ಈಗಾಗಲೇ ಅನುಮೋದನೆ ಕಳುಹಿಸಲಾಗಿದೆ ಎಂದರು.

ಸೆಪ್ಟೆಂಬರ್‌ನಲ್ಲಿ ಭೂಮಿಪೂಜೆ

ಮುಂದಿನ ಒಂದು ತಿಂಗಳ ಒಳಗಾಗಿ ರಸ್ತೆ ಅಭಿವೃದ್ದಿ ಕಾಮಗಾರಿಗೆ ಭೂಮಿ ಫೂಜೆಯನ್ನು ನೆರವೇರಿಸುತ್ತೇನೆ. ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ನನ್ನ ಪ್ರಮುಖ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಬಹುತೇಕ ಎಲ್ಲಾ ಗ್ರಾಮಗಳಲ್ಲಿ ಶುದ್ದ ಕುಡಿಯುವ ನೀರಿನ ಘಟಕ, ಉತ್ತಮವಾದ ರಸ್ತೆಗಳನ್ನು ನಿರ್ಮಾಣ ಮಾಡಿದ್ದೇನೆ. ಆದಷ್ಟು ಶೀಘ್ರವಾಗಿ ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಉತ್ತಮವಾದ ರಸ್ತೆ ನಿರ್ಮಾಣ ಮಾಡಿಸಿ ಜನರಿಗೆ ಅನುಕೂಲ ಮಾಡುತ್ತೇನೆ ಎಂದರು.

ಈ ವೇಳೆ ಸೋಮೇನಹಳ್ಳಿ ಗ್ರಾಪಂ ಅಧ್ಯಕ್ಷೆ ಸುಮಂಗಲಮ್ಮ, ಲೋಕೋಪಯೋಗಿ ಇಲಾಖೆಯ ಅರುಣಾಚಲಂ, ಪೂಜಪ್ಪ, ಕುಡಿಯುವ ನೀರು ಇಲಾಖೆಯ ನವೀನ್. ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಆದಿರೆಡ್ಡಿ, ಮುಖಂಡರಾದ ಆದಿನಾರಾಯಣರೆಡ್ಡಿ, ಕೃಷ್ಣೆಗೌಡ, ದಪ್ಪರ್ತಿ ನಂಜುಂಡ ಸೇರಿದಂತೆ ಹಲವರು ಇದ್ದರು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ