ಕನ್ನಡಪ್ರಭ ವಾರ್ತೆ ಬಾಗೇಪಲ್ಲಿ
ಕ್ಷೇತ್ರದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಹಾಗೂ ಆರೋಗ್ಯ ರಕ್ಷಣೆಗೆ ಹೆಚ್ಚಿನ ಒತ್ತು ನೀಡುವುದಾಗಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು.ಪಟ್ಟಣದ ಹೊರವಲಯದಲ್ಲಿ 6 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣವಾಗಿರುವ ನೂತನ ವಾಲ್ಮೀಕಿ ಭವನ ಲೋಕಾರ್ಪಣೆ ಮಾಡಿದ ಬಳಿಕ, ಪಟ್ಟಣದ ಸರ್ಕಾರಿ ಬಾಲಕಿಯರ ಶಾಲಾ ಆವರಣದಲ್ಲಿ ವಾಲ್ಮೀಕಿ ನಾಯಕರ ಕ್ಷೇಮಾಭಿವೃದ್ದಿ ಸಂಘ ಹಾಗೂ ವಾಲ್ಮೀಕಿ ನಾಯಕ ನೌಕರರ ಸಂಘದ ಸಂಯುಕ್ತ ಆಶ್ರಯದಲ್ಲಿ ವಾಲ್ಮೀಕಿ ಜಯಂತಿ ಹಾಗೂ 18ನೇ ವರ್ಷದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಭಿವೃದ್ಧಿಗೆ ಶಿಕ್ಷಣವೊಂದೇ ದಾರಿಯಾವುದೇ ಒಂದು ಸಮುದಾಯ ಅಭಿವೃದ್ದಿಹೊಂದಲು ಶಿಕ್ಷಣವೊಂದೇ ಏಕೈಕ ಮಾರ್ಗವಾಗಿದೆ. ಮಕ್ಕಳಿಗೆ ಆಸ್ತಿ ಮಾಡುವ ಬದಲಿಗೆ ಉತ್ತಮ ಶಿಕ್ಷಣ ಕೊಡಿಸುವಂತೆ ಸಮುದಾಯದವರಿಗೆ ತಿಳಿಸಿದರಲ್ಲದೆ ಕ್ಷೇತ್ರದಲ್ಲಿ ಯಾವುದೇ ಕಾರಣಕ್ಕೂ ಶಿಕ್ಷಣದಿಂದ ಯಾರು ವಂಚಿತರಾಗಬಾರದು ಎನ್ನುವ ನಿಟ್ಟಿನಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವುದಾಗಿ ತಿಳಿಸಿದರು.
ವಾಲ್ಮೀಕಿ ಸಮುದಾಯದ ಅಭಿವೃದ್ದಿಗಾಗಿ ಪಟ್ಟಣದಲ್ಲಿ 6 ಕೋಟಿ ರು.ಗಳ ವೆಚ್ಚದಲ್ಲಿ ವಾಲ್ಮೀಕಿ ಭವನವನ್ನು ನಿರ್ಮಿಸಲಾಗಿದ್ದು ಇಮದು ಲೋಕಾರ್ಪಣೆ ಮಾಡುವ ಮೂಲಕ ಈ ಭಾಗದ ವಾಲ್ಮೀಕಿ ಸಮುದಾಯದವರ ಬಹುದಿನಗಳ ಬೇಡಿಕೆಯನ್ನು ಈಡೇರಿಸಲಾಗಿದೆ. ಅಲ್ಲದೆ ಎಸ್ಟಿ ಸಮುದಾಯದವರ ಶೈಕ್ಷಣಿಕ ಅಭಿವೃದ್ದಿಯ ದೂರದೃಷ್ಠಿಯಿಂದ ಸುಮಾರು 30 ಕೋಟಿ ರೂ.ಗಳ ವೆಚ್ಚದಲ್ಲಿ ವಸತಿ ಶಾಲೆ ಮಂಜೂರು ಮಾಡಲಾಗಿದೆ.ಎಸ್‌ಟಿ ಸಮುದಾಯದವರ ಅಭಿವೃದ್ದಿಗಾಗಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು ಸರ್ಕಾರದ ಈ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಆರ್ಥಿಕವಾಗಿ, ಸಾಮಾಜಿಕವಾಗಿ ಶೈಕ್ಷಣಿಕವಾಗಿ ಅಭಿವೃದ್ದಿಹೊಂದಬೇಕೆಂದು ಹೇಳಿದರು.ಅಂಬೇಡ್ಕರ್ ವಿಚಾರ ಅರಿತುಕೊಳ್ಳಿ
ಪೋಲೀಸ್ ಉಪ ಮಹಾನಿರೀಕ್ಷಕ ರವಿ.ಡಿ.ಚೆನ್ನಣ್ಣವರ್ ಮಾತನಾಡಿ, ಸಮಸಮಾಜದ ನಿರ್ಮಾಣಕ್ಕೆ ಶ್ರಮಿಸಿದ ಎಲ್ಲರನ್ನು ಗೌರವಿಸುವದಲ್ಲದೆ ಅವರ ಆದರ್ಶ ತತ್ವ ಸಿದ್ದಾಂತಗಳನ್ನು ತಮ್ಮ ಜೀವನದಲ್ಲಿ ಆಳವಡಿಸಿಕೊಳ್ಳಬೇಕು. ಶ್ರೀ ವಾಲ್ಮೀಕಿ ಮಹರ್ಷಿ ಇಡೀ ಜಗತ್ತಿಗೆ ರಾಮಾಯಣದ ಮೂಲಕ ಮಾನವರು ಹೇಗೆ ಬದುಕಬೇಕು ಎಂಬುದನ್ನು ತಿಳಿಸಿಕೊಟ್ಟಿದ್ದಾರೆ. ರಾಮಾಯಣ ರಚಿಸಿದ ಶ್ರೀ ವಾಲ್ಮೀಕಿ ಮಹರ್ಷಿ ಹಾಗೂ ನಮ್ಮ ದೇಶದ ಸಂವಿಧಾನವನ್ನು ರಚಿಸಿರುವ ಮಹಾನ್ ನಾಯಕ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ರವರ ವಿಚಾರಗಳನ್ನು ಪ್ರತಿಯೊಬ್ಬರು ಓದಿ ತಿಳಿದುಕೊಳ್ಳಬೇಕು ಎಂದರು.ಪ್ರತಿಭಾವಂತರಿಗೆ ಪುರಸ್ಕಾರ
ಇದೇ ವೇಳೆ ವಾಲ್ಮೀಕಿ ಮಹಾಸಂಸ್ಥಾನದ ಪೀಠಾಧ್ಯಕ್ಷ ಪರಮಪೂಜ್ಯ ಶ್ರೀ ಡಾ. ಪ್ರಸನ್ನಾನಂದ ಪುರಿ ಸ್ವಾಮೀಜಿ ಆರ್ಶೀವಚನ ನೀಡಿದರು. ಈ ಕಾರ್ಯಕ್ರಮದಲ್ಲಿ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು. ಇನ್ನೂ ಮುನ್ನ ನ್ಯಾಷನಲ್ ಕಾಲೇಜು ಮುಂಭಾಗದಿಂದ ಪಟ್ಟಣದ ಮುಖ್ಯ ರಸ್ತೆಯಲ್ಲಿ ಅದ್ದೂರಿಯಾಗಿ ಪಲ್ಲಕ್ಕಿ ಹಾಗೂ ಕಲಶಗಳೊಂದಿಗೆ ಮೆರವಣಿಗೆ ಮಾಡಲಾಯಿತು. ಈ ಮೆರವಣಿಗೆಯಲ್ಲಿ ವಾಲ್ಮೀಕಿ ಸಮುದಾಯದ ಸಾವಿರಾರು ಜನರು ಭಾಗಿಯಾದರು.ಈ ಸಂದರ್ಭದಲ್ಲಿ ತಹಸೀಲ್ದಾರ್ ಮನೀಷಾ ಎಸ್ ಪತ್ರಿ, ಶ್ರೀ ವಾಲ್ಮೀಕಿ ನಾಯಕ ಕ್ಷೇಮ ಅಭಿವೃದ್ಧಿ ಸಂಘ ಅಧ್ಯಕ್ಷ ನರಸಿಂಹಪ್ಪ, ಪುರಸಭೆ ಅಧ್ಯಕ್ಷ ಶ್ರೀನಿವಾಸ್, ಉಪಾಧ್ಯಕ್ಷ ಸುಜಾತ ನರಸಿಂಹಾಯ್ಡು, ಮರಿಯಪ್ಪ, ಗಡ್ಡಂ ನರಸಪ್ಪ, ವಾಲ್ಮೀಕಿ ಅಶ್ವತಪ್ಪ, ಮಂಜುನಾಥ್ ರೆಡ್ಡಿ, ಗಡ್ಡಂ ರಮೇಶ್, ಪೂಜಪ್ಪ, ವೆಂಕಟರಮಣ, ಚಂದ್ರಶೇಖರ್ ರೆಡ್ಡಿ ಸೇರಿದಂತೆ ಸಮುದಾಯದ ಮುಖಂಡರು ಇದ್ದರು.