ಕನ್ನಡಪ್ರಭ ವಾರ್ತೆ ಉಡುಪಿ
ಬಾಲ್ಯವಿವಾಹ ಸಾಮಾಜಿಕ ಪಿಡುಗಾಗಿದ್ದು, ಇದರ ನಿರ್ಮೂಲನೆಗೆ ಜಾರಿಗೊಳಿಸಲಾದ ಕಾನೂನನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವುದು ಪ್ರತಿಯೊಬ್ಬ ಅಧಿಕಾರಿಯ ಆದ್ಯ ಕರ್ತವ್ಯವಾಗಿದ್ದು, ಇದಕ್ಕೆ ಒತ್ತು ನೀಡಬೇಕು ಎಂದು ಉಪ ಪೊಲೀಸ್ ಅಧೀಕ್ಷಕ ಪ್ರಭು ಡಿ.ಟಿ ಹೇಳಿದರು.ಅವರು ಮಂಗಳವಾರ ರಜತಾದ್ರಿಯ ಜಿ.ಪಂ. ಸಭಾಂಗಣದಲ್ಲಿ ಜಿಲ್ಲಾಡಳಿತ ವತಿಯಿಂದ ಬಾಲ್ಯವಿವಾಹ ನಿಷೇಧ ಹಾಗೂ ಮಕ್ಕಳ ಸಂಬಂಧಿತ ಕಾನೂನುಗಳ ಬಗ್ಗೆ ಜಿಲ್ಲಾಮಟ್ಟದ ಮಾಸ್ಟರ್ ಟ್ರೇನರ್ಸ್‌ಗಳಿಗೆ ಎರಡು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಹೆಚ್ಚಾಗಿ ಗ್ರಾಮೀಣ ಪ್ರದೇಶಗಳಲ್ಲಿ, ಅನಕ್ಷರಸ್ಥ ಪೋಷಕರು ತಮ್ಮ ಜವಾಬ್ದಾರಿ ಕಳೆದುಕೊಳ್ಳಲು, ವಯಸ್ಸಾದ ಹಿರಿಯರು ಮೊಮ್ಮಕ್ಕಳ ವಿವಾಹವನ್ನು ನೋಡಬೇಕೆಂಬ ಆಸೆಗೆ, ಆರ್ಥಿಕ ಮುಗ್ಗಟ್ಟು ಮತ್ತಿತರ ಕಾರಣ ಹಾಗೂ ಆಸೆಆಮಿಷಗಳಿಗೆ ಒಳಗಾಗಿ ಅಪ್ರಾಪ್ತ ಹೆಣ್ಣು ಮಕ್ಕಳ ವಿವಾಹ ಮಾಡುತ್ತಿದ್ದರು. ಇಂದು ಸಾಕ್ಷರತೆ ಹೆಚ್ಚಾಗಿ ಬಾಲ್ಯ ವಿವಾಹದ ಪ್ರಕರಣಗಳು ಕಡಿಮೆಯಾಗಿದೆ. ಆದರೆ ಸಂಪೂರ್ಣವಾಗಿ ನಿರ್ಮೂಲನವಾಗಿಲ್ಲ. ಆದ್ದರಿಂದ ಈ ಬಗ್ಗೆ ಸಮಾಜದಗಲ್ಲಿ ಅರಿವು ಮೂಡಿಸುವ ಜವಾಬ್ದಾರಿ ಮಾಸ್ಟರ್ ಟ್ರೈನರ್‌ಗಳಿಗೆ ಹೆಚ್ಚಿದೆ ಎಂದರು.ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದಲ್ಲಿ ಇಂದಿಗೂ ಸಹ ಲಿಂಗಾನುಪಾತದಲ್ಲಿ ವ್ಯತ್ಯಾಸ ಕಂಡುಬರುತ್ತಿದ್ದು, ಗಂಡು ಮಕ್ಕಳಿಗೆ ಹೋಲಿಸಿದ್ದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆ ಇದೆ. ಅಪ್ರಾಪ್ತ ಮಕ್ಕಳಿಗೆ ಬಾಲ್ಯ ವಿವಾಹ ಮಾಡಿದ್ದಲ್ಲಿ ಅವರ ಬೌದ್ಧಿಕ, ದೈಹಿಕ, ಮಾನಸಿಕ ಸಾಮರ್ಥ್ಯಕ್ಕಿಂತ ಹೆಚ್ಚು ಜವಾಬ್ದಾರಿಯನ್ನು ಹೊರಬೇಕಾಗುತ್ತದೆ. ಇದರಿಂದಾಗಿ ಮಕ್ಕಳು ತಮ್ಮ ಬಾಲ್ಯವ್ಯವಸ್ಥೆ ಹಾಗೂ ಶಿಕ್ಷಣದಿಂದ ವಂಚಿತರಾಗುತ್ತಾರೆ, ಇದು ಕಾನೂನುಬಾಹಿರ. ಅವರು ಶಿಕ್ಷಣವಂತರಾಗಿ ಜೀವನ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಬದಲಾವಣೆಗೊಂಡ ನೂತನ ಚೈಲ್ಡ್‌ಲೈನ್ ಸಾಂಛನ ಮತ್ತು ಮಿಷನ್ ವಾತ್ಸಲ್ಯ ಮಾರ್ಗಸೂಚಿ ಅನ್ವಯ ಮಕ್ಕಳ ಸುರಕ್ಷಿತ - ಅಸುರಕ್ಷಿತ ಸ್ಪರ್ಶ ಕುರಿತ ಪೋಸ್ಟರ್‌ಗಳನ್ನು ಬಿಡುಗಡೆಗೊಳಿಸಲಾಯಿತು.ಯುನಿಸೆಫ್ ಪ್ರಾದೇಶಿಕ ಸಂಯೋಜಕರಾದ ಡಾ. ಕೊಣಿಲ ರಾಘವೇಂದ್ರ ಹಾಗೂ ಹರೀಶ್ ಜೋಗಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ, ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ಜಿ.ಪಂ. ಉಪ ಕಾರ್ಯದರ್ಶಿ ಎಸ್.ಎಸ್. ಖಾದರಳ್ಳಿ, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ಜೂಹಿ ದಾಮೋದರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ., ಮಾಸ್ಟರ್ ಟ್ರೈನರ್‌ಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಮಕ್ಕಳ ಸಹಾಯವಾಣಿ ಕೇಂದ್ರದ ಸಿಬ್ಬಂದಿ ಉಪಸ್ಥಿತರಿದ್ದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಾಗರತ್ನ ನಾಯಕ್ ಸ್ವಾಗತಿಸಿದರು. ಸುರಕ್ಷಾ ನಿರೂಪಿಸಿ, ವಂದಿಸಿದರು.