ಮೂಲಭೂತ ಸೌಕರ್ಯಕ್ಕೆ ಒತ್ತು ನೀಡಿ

KannadaprabhaNewsNetwork | Published : Feb 16, 2024 1:45 AM

ಸಾರಾಂಶ

ನಗರದ ಅಭಿವೃದ್ಧಿಗೆ ಸರ್ಕಾರದ ಅನುದಾನದ ಜತೆಗೆ ಕಂದಾಯ ಸಂಗ್ರಹಣೆ ಆದಾಯವೂ ಮುಖ್ಯವಾಗಿದ್ದು, ತೆರಿಗೆ ಸಂಗ್ರಹದ ಬಗ್ಗೆ ನಗರಸಭೆ ಅಧಿಕಾರಿಗಳು, ಸಿಬ್ಬಂದಿ ಹೆಚ್ಚಿನ ಒತ್ತು ನೀಡಿ ಜನರಿಗೆ ಮೂಲಭೂತ ಸೌಕರ್ಯ ನೀಡಲು ಹೆಚ್ಚಿನ ಮಹತ್ವ ನೀಡಬೇಕು ನಗರಸಭಾ ಸದಸ್ಯರು ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರನಗರದ ಅಭಿವೃದ್ಧಿಗೆ ಸರ್ಕಾರದ ಅನುದಾನದ ಜತೆಗೆ ಕಂದಾಯ ಸಂಗ್ರಹಣೆ ಆದಾಯವೂ ಮುಖ್ಯವಾಗಿದ್ದು, ತೆರಿಗೆ ಸಂಗ್ರಹದ ಬಗ್ಗೆ ನಗರಸಭೆ ಅಧಿಕಾರಿಗಳು, ಸಿಬ್ಬಂದಿ ಹೆಚ್ಚಿನ ಒತ್ತು ನೀಡಿ ಜನರಿಗೆ ಮೂಲಭೂತ ಸೌಕರ್ಯ ನೀಡಲು ಹೆಚ್ಚಿನ ಮಹತ್ವ ನೀಡಬೇಕು ನಗರಸಭಾ ಸದಸ್ಯರು ಒತ್ತಾಯಿಸಿದರು.

ನಗರಸಭಾ ಸಭಾಂಗಣದಲ್ಲಿ ಪೌರಾಯುಕ್ತ ರಾಮದಾಸ್ ಅಧ್ಯಕ್ಷತೆಯಲ್ಲಿ ನಡೆದ ೨೦೨೪-೨೫ನೇ ಸಾಲಿನ ಆಯವ್ಯಯದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ ನಗರಸಭಾ ಸದಸ್ಯರು ಸಲಹೆ ಸೂಚನೆ ನೀಡಿ ಮಾತನಾಡಿದರು.

ನಗರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ, ಸ್ವಚ್ಚತಾ ಸಮಸ್ಯೆ ಹಾಗೂ ಬೀದಿ ದೀಪಗಳ ಸಮಸ್ಯೆ ತೀವ್ರವಾಗಿದ್ದು ನಾಗರೀಕರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಆದ್ದರಿಂದ ನಗರಸಭೆ ಹೆಚ್ಚಿನ ಆದಾಯ ಬಂದರೆ ಸಮರ್ಪಕ ಮೂಲಭೂತ ಸೌಕರ್ಯವನ್ನು ನೀಡಬಹುದು. ಈ ನಿಟ್ಟಿನಲ್ಲಿ ತೆರಿಗೆ ವಸೂಲಿಯನ್ನು ಕಟ್ಟುನಿಟ್ಟಾಗಿ ಮಾಡಿ ಎಂದರು.

ಬಜೆಟ್‌ನಲ್ಲಿ ಕುಡಿಯುವ ನೀರು, ಬೀದಿ ದೀಪ, ರಸ್ತೆ, ಸ್ವಚ್ಛತ ಸೇರಿದಂತೆ ಮೂಲ ಸೌಕರ್ಯ ಒದಗಿಸಲು ಹೆಚ್ಚಿನ ಆದ್ಯತೆ ನೀಡಬೇಕು ಎಂದರು. ಕಂದಾಯ ವಸೂಲಾತಿ ಆಂದೋಲನಾ, ಉದ್ದಿಮೆ ನವೀಕರಣ ಆಂದೋಲನವನ್ನು ವಾರ್ಡುವಾರು ಹಮ್ಮಿಕೊಂಡು, ಬಡ್ಡಿ ಮನ್ನಾ ಮಾಡಿ ತೆರಿಗೆ ವಸೂಲಾತಿ ಮಾಡಬೇಕು, ಸ್ಥಳದಲ್ಲಿಯೇ ನವೀಕರಣಕ್ಕೆ ಕ್ರಮ ಕೈಗೊಳ್ಳಬೇಕು, ನಗರಸಭೆಗೆ ಸೇರಿದ ಕಟ್ಟಡಗಳ ಬಾಡಿಗೆ ಕಟ್ಟದವರು, ನೆಲಬಾಡಿಗೆ ಕಟ್ಟದವರು ಮತ್ತು ನವೀಕರಣ ಮಾಡಿಸಿಕೊಳ್ಳದೇ ಇರುವವರ ಲೈಸೆನ್ಸ್ ರದ್ದು ಮಾಡಿ ಬೇರೆಯವರಿಗೆ ನೀಡಬೇಕು ಎಂದರು.ಸ್ವಚ್ಛ ಭಾರತ ಮಿಷನ್ ಯೋಜನೆ ಅನುದಾನ, ೧೫ ನೇ ಹಣಕಾಸು ಯೋಜನೆ ಅನುದಾನ,ಎನ್ಎಫ್‌ಸಿ ಅನುದಾನ ಹಣಕಾಸು ಆಯೋಗದ ಅನುದಾನ, ಸಾಮಾನ್ಯ ಆದಾಯ, ಖಾತೆ ಮತ್ತು ಇತರೆ ಆದಾಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ಸಲಹೆ ಸೂಚನೆಗಳನ್ನು ನೀಡಿದರು. ಮದ್ಯವರ್ತಿಗಳಿಗೆ ಅವಕಾಶ ನೀಡದೇ ಸಾರ್ವಜನಿಕರು ಈ ಸ್ವತ್ತು, ಖಾತೆ ಇತರೆ ಕಾರ್ಯಗಳನ್ನು ಮಾಡಿಸಿಕೊಳ್ಳುವಂತೆ ಕಟ್ಟುನಿಟ್ಟನ ಕ್ರಮ ಕೈಗೊಳ್ಳಬೇಕು, ಸಾರ್ವಜನಿಕ ಶೌಚಾಲಯ ನಿರ್ಮಾಣ, ಇರುವ ಪಾರ್ಕುಗಳ ಸ್ಚಚ್ಚತೆಗೆ ಕ್ರಮಕೈಗೊಳ್ಳಬೇಕು ಎಂದರು.ಸ್ವಚ್ಛತೆ ಗುತ್ತಿಗೆ ಪಡೆದ ಗುತ್ತಿಗೆದಾರರು ಸ್ಥಳೀಯ ಸದಸ್ಯರನ್ನು ಗಮನಕ್ಕೆ ತೆಗೆದುಕೊಳ್ಳುವುದಿಲ್ಲ, ಸ್ವಚ್ಚತೆಯನ್ನು ಸರಿಯಾಗಿ ಮಾಡುವುದಿಲ್ಲ, ಅದ್ದರಿಂದ ಗುತ್ತಿಗೆಯನ್ನು ರದ್ದುಪಡಿಸಬೇಕು, ನಗರಸಭಾ ಗ್ರೂಫ್‌ಗೆ ಹೆಚ್ಚಿನ ಮಹತ್ವ ನೀಡಿ ಎಂದರು. ಪ್ರತಿ ವಾರ್ಡಿಗೂ ನಾಮಫಲಕ ಹಾಕಬೇಕು, ಮಹನೀಯರ ಪುತ್ಥಳಿಗಳನ್ನು ನಿರ್ಮಿಸಬೇಕು ನಗರದ ಸೌಂದರ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಸಲಹೆ ನೀಡಿ, ತಮ್ಮ ತಮ್ಮ ವಾರ್ಡುಗಳಲ್ಲಿ ಆಗಬೇಕಿರುವ ಕೆಲಸಗಳ ಬಗ್ಗೆ ತಿಳಿಸಿದರು. ಸದಸ್ಯರಾದ ಸುದರ್ಶನಗೌಡ, ರಾಘವೇಂದ್ರ, ಚಿನ್ನಮ್ಮ, ನೀಲಮ್ಮ, ಕಲಾವತಿ, ಬಸವಣ್ಣ, ಕುಮುದಾ, ಭಾಗ್ಯಮ್ಮ, ಸುಧಾ, ಆಶಾ, ಮಹೇಶ್, ಮನೋಜ್‌ಪಟೇಲ್, ಅಬ್ರಹಾರ್, ಶಿವರಾಜ್, ಗಾಯಿತ್ರಿ, ಮಮತಾ ಸಲಹೆ ಸೂಚನೆ ನೀಡಿದರು.ಸದಸ್ಯರ ಸಲಹೆ ಸೂಚನೆಗಳನ್ನು ಪಡೆದ ಪೌರಾಯುಕ್ತ ರಾಮದಾಸ್ ಮಾತನಾಡಿ ಸದಸ್ಯರು ಉತ್ತಮ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ನಗರಸಭಾ ಆಡಳಿತಾಧಿಕಾರಿಗಳಾದ ಡೀಸಿ ಶಿಲ್ಪಾನಾಗ್ ಸಲಹೆ ಪಡೆದು ಆಯವ್ಯಯ ದಿನಾಂಕವನ್ನು ಪ್ರಕಟಿಸಲಾಗುವುದು ಎಂದರು. ನಗರಸಭಾ ಅಧಿಕಾರಿ ವರ್ಗ ಸಿಬ್ಬಂದಿ ಇದ್ದರು.

Share this article